ಕಾಲೇಜು, ಫ್ರೆಂಡ್ಸ್, ಲವ್ ಅಂಶಗಳನ್ನಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈ ವಾರ ತೆರೆಕಂಡಿರುವ “ಬಡ್ಡೀಸ್’ ಕೂಡಾ ಕಾಲೇಜು ಸುತ್ತ ಸಾಗುವ ಕಥೆಯಾದರೂ, ತನ್ನ ಕಥಾಹಂದರ ಹಾಗೂ ನಿರೂಪಣೆಯಿಂದ ಭಿನ್ನವಾಗಿ ನಿಲ್ಲುತ್ತದೆ. ಆ ಮಟ್ಟಿಗೆ ನಿರ್ದೇಶಕ ಗುರುವೇಂದ್ರ ಶೆಟ್ಟಿ ಹೊಸತನ ಕಾಯ್ದುಕೊಂಡಿದ್ದಾರೆ.
ಈ ಚಿತ್ರದ ಮೂಲ ಆಶಯ ಸ್ನೇಹವೇ ಮಿಗಿಲು, ಸ್ನೇಹಕ್ಕೆ ಯಾರೇ ಮೋಸ ಮಾಡಿದರೂ ಕೊನೆಗೆ ಗೆಲ್ಲುವುದು ಸ್ನೇಹ ಎಂಬ ಅಂಶದೊಂದಿಗೆ ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ಹಾಗಂತ ಚಿತ್ರ ಕೇವಲ ಸ್ನೇಹಕ್ಕಷ್ಟೇ ಸೀಮಿತವಾಗಿಲ್ಲ. ಜೊತೆಗೊಂದು ಥ್ರಿಲ್ಲರ್ ಅಂಶವನ್ನು ಸೇರಿಸಿದ್ದಾರೆ.
ಮೊದಲರ್ಧ ಕಾಲೇಜು, ಸ್ನೇಹ ಎಂಬ ಜಾಲಿರೈಡ್‌ನಲ್ಲಿ ಸಾಗಿದರೆ, ದ್ವಿತೀಯಾರ್ಧ ಥ್ರಿಲ್ಲರ್‌ನೊಂದಿಗೆ ಕುತೂಹಲ ಹೆಚ್ಚಿಸುತ್ತಾ ಸಾಗುತ್ತದೆ. ಎಲ್ಲಾ ಓಕೆ, ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು. ಇಲ್ಲಿನ ನಾಯಕ ಶ್ರೀಮಂತ. ಆದರೆ, ಆತನಿಗೆ ಒಂಟಿತನ ಕಾಡುತ್ತದೆ. ಈ ಒಂಟಿತನದಿಂದ ಆತನನ್ನು ದೂರ ಮಾಡಲು ಅನಾಥಶ್ರಮದಿಂದ ಬರುವ ನಾಲ್ಕು ಹುಡುಗರು, ಈ ನಡುವೆ ಒಂದು ಲವ್‌ಸ್ಟೋರಿ, ಕಾಲೇಜು ರಂಗು… ಹೀಗೆ ಸಾಗುವ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ ಟರ್ನ್ಗಳಿವೆ. ಇದರಿಂದಾಗಿ “ಬಡ್ಡೀಸ್’ ಜಾಲಿಯಾಗಿಯೇ ಸಾಗುತ್ತದೆ. ಮೊದಲೇ ಹೇಳಿದಂತೆ ಚಿತ್ರದಲ್ಲಿ ಸ್ನೇಹದ ಮಹತ್ವವನ್ನು ಹೇಳಲಾಗಿದೆ. ಅದಕ್ಕಾಗಿ ನಿರ್ದೇಶಕರು ಸಾಕಷ್ಟು ಸನ್ನಿವೇಶವನ್ನು ಸೃಷ್ಟಿಸಿದ್ದಾರೆ ಕೂಡಾ.
ಕಿರುತೆರೆಯಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿರುವ ನಾಯಕ ನಟ ಕಿರಣ್ ರಾಜ್ “ಬಡ್ಡೀಸ್’ ಮೂಲಕ ಗಮನ ಸೆಳೆದಿದ್ದಾರೆ. ನಟನೆಯ ಜೊತೆಗೆ ಹಾಡು-ಫೈಟುಗಳಲ್ಲೂ ಕಿರಣ್ ರಾಜ್ ಮಿಂಚಿದ್ದು, ಹೀರೋ ಆಗಿ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ನಾಯಕಿ ಸಿರಿ, ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ. “ಬಡ್ಡೀಸ್’ಗಳ ಜಾಲಿ ರೈಡ್ ಅನ್ನು ಒಮ್ಮೆ ಕಣ್ತುಂಬಿಕೊಳ್ಳಬಹುದು
ರವಿ ರೈ