ಇತ್ತೀಚೆಗಷ್ಟೇ “8 ಎಂ.ಎಂ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಜಗ್ಗೇಶ್, ಸದ್ಯ “ಪ್ರೀಮಿಯರ್ ಪದ್ಮಿನಿ’, “ತೋತಾಪುರಿ’ ಸೇರಿದಂತೆ ಕೆಲ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಜಗ್ಗೇಶ್ “ಕಾಳಿದಾಸ ಕನ್ನಡ ಮೇಷ್ಟ್ರು’ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಹೌದು. ಜಗ್ಗೇಶ್, ಮೇಘನಾ ಗಾಂವ್ಕರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಗೀತ ಸಾಹಿತಿ ಕವಿರಾಜ್ ನಿರ್ದೇಶಿಸುತ್ತಿರುವ ಈ ಚಿತ್ರ, ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ.
ಇನ್ನು, ಮೊದಲ ಬಾರಿಗೆ ಜಗ್ಗೇಶ್ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. “ಶಿಕ್ಷಣವನ್ನೆ ಹಿನ್ನೆಲೆಯಾಗಿಟ್ಟುಕೊಂಡು ಈ ಚಿತ್ರ ಸಾಗುತ್ತದೆ. ಪೋಷಕರು, ಮಕ್ಕಳು ಎಲ್ಲರೂ ನೋಡುವಂಥ ಚಿತ್ರವಾಗಲಿದೆ. ಗಂಭೀರವಾದ ವಿಷಯವಾದರೂ ಅದನ್ನು ನವಿರಾದ ಹಾಸ್ಯದ ಮೂಲಕ ನಿರ್ದೇಶಕರು ಹೇಳುತ್ತಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ಹೊಸತರಹದ ಚಿತ್ರವಾಗಲಿದೆ’ ಎಂಬುದು ಜಗ್ಗೇಶ್ ಅವರ ಮಾತು.
ಚಿತ್ರದಲ್ಲಿ ಕಾಳಿದಾಸನ ಹೆಂಡತಿಯ ಪಾತ್ರದಲ್ಲಿ ಮೇಘನಾ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಕೊಂಚ ಗ್ಯಾಪ್ ನಂತರ ಮತ್ತೆ ಬಣ್ಣ ಹಚ್ಚುತ್ತಿರುವ ಮೇಘನಾ, “ಚಿತ್ರದ ಕಥೆ ಇಷ್ಟವಾಗಿತ್ತು. ಆದರೆ ಅದರಲ್ಲಿದ್ದ ಒಂದು ತಿರುವು ಚಿತ್ರಕ್ಕೆ ಎಷ್ಟರ ಮಟ್ಟಿಗೆ ಪೂರಕ ಎಂಬುದು ನನ್ನನ್ನು ಗೊಂದಲದಲ್ಲಿ ಸಿಲುಕಿಸಿತ್ತು. ನನಗಿದ್ದ ಗೊಂದಲವನ್ನು ನಿರ್ದೇಶಕರಿಗೂ ಹೇಳಿದೆ. ಕೊನೆಗೆ ಅದನ್ನು ಬದಿಗಿಟ್ಟು ಹೊಸಥರದಲ್ಲೇ ಚಿತ್ರವನ್ನು ಹೇಳಲು ಒಪ್ಪಿಕೊಂಡರು. ಆದರೆ, ಆ ಗೊಂದಲ ಏನು ಎಂಬುದನ್ನು ಮಾತ್ರ ನಾನು ಹೇಳಲಾರೆ. ಒಳ್ಳೆಯ ಪಾತ್ರ ಸಿಕ್ಕಿರುವುದು ಖುಷಿ ತಂದಿದೆ’ ಎನ್ನುತ್ತಾರೆ ಮೇಘನಾ.
ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ಕವಿರಾಜ್, “ಇವತ್ತು ನಮ್ಮ ಬೇಕು-ಬೇಡ ಎಲ್ಲವನ್ನೂ ಕಾರ್ಪೋರೆಟ್ ಕಂಪೆನಿಗಳು ನಿರ್ಧರಿಸುವ ಮಟ್ಟಕ್ಕೆ ಬಂದಿವೆ. ಹಾಗೆ ನಮ್ಮ ಮಕ್ಕಳಿಗೆ ಯಾವ ಶಿಕ್ಷಣ ಕೊಡಬೇಕು ಎಂಬುದನ್ನೂ ಬೇರೊಬ್ಬರು ನಿರ್ಧರಿಸುವಂತಾಗಿದೆ. ಇದನ್ನೇ ಇಟ್ಟುಕೊಂಡು ಈ ಚಿತ್ರ ಮಾಡಲು ಮುಂದಾಗಿದ್ದೇವೆ. ಇದೊಂದು ಶೈಕ್ಷಣಿಕ ವ್ಯವಸ್ಥೆಯನ್ನು ಹಿನ್ನೆಲೆಯಾಗಿಟ್ಟುಕೊಂಡಿರುವ ಚಿತ್ರ. ಇಲ್ಲಿನ ಅನೇಕ ಸಂಗತಿಗಳು ಕಣ್ಣು ತೆರೆಸುತ್ತವೆ. ಚಿಂತನೆಗೆ ಹಚ್ಚುತ್ತವೆ. ಮೊದಲರ್ಧ ಹಾಸ್ಯದ ಮೂಲಕ ಸಾಗಿದರೆ, ದ್ವಿತೀಯರ್ಧ ಗಂಭೀರವಾಗುತ್ತದೆ. ವಿಷಯ, ಸಂದೇಶ ಮತ್ತು ಮನರಂಜನೆ ಎಲ್ಲವೂ ಚಿತ್ರದಲ್ಲಿದೆ’ ಎಂಬುದು ಕವಿರಾಜ್ ಹೇಳಿಕೆ.
ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದು, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿದೆ. ಉದಯ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಕಾಳಿದಾಸ ಮೇಷ್ಟ್ರ ಕನ್ನಡ ಕ್ಲಾಸ್ ಹೇಗಿರಲಿದೆ ಎಂಬುದು ಮುಂದಿನ ಏಪ್ರಿಲ್-ಮೇ ವೇಳೆಗೆ ಗೊತ್ತಾಗಲಿದೆ.