Advertisement

Kannada: ಹೆದರಬೇಡಿ; ಬಿಂದಾಸ್‌ ಆಗಿ ಕನ್ನಡ ಮಾತಾಡಿ

10:09 AM Nov 02, 2023 | Team Udayavani |

ಬೆಂಗಳೂರು: “ಕಾಸ್ಮೋಪಾಲಿಟನ್‌ ಸಿಟಿ’ ಎಂಬ ಕಾರಣಕ್ಕೆ ಬೆಂಗಳೂರಿಗೆ ದೇಶ-ವಿದೇಶಗಳಿಂದ ಜನ ಶಿಕ್ಷಣ-ಉದ್ಯೋಗ ಅರಸಿ ಬರುವುದು ಸರ್ವೆ ಸಾಮಾನ್ಯ. ಹೀಗಾಗಿ, ಕರ್ನಾಟಕದ ರಾಜಧಾನಿಯಲ್ಲೇ ಕನ್ನಡ ಮಾಯವಾಗುತ್ತಿದೆ. ನಗರದಲ್ಲಿ ಅನ್ಯಭಾಷಿಕರ ಸಂಖ್ಯೆ ಹೆಚ್ಚುತ್ತಿದೆ. ಇದರ ಮಧ್ಯೆಯೇ ಕರ್ನಾಟಕದ 50ರ ಸಂಭ್ರಮಕ್ಕೊಂದು ಮುಕುಟ ಎಂಬಂತೆ ಕನ್ನಡ ಬಾರದವರನ್ನು ಕನ್ನಡ ಕಲಿಸುವ ವಿನೂತನ ಪ್ರಯತ್ನಕ್ಕೆ ನ.1ರಿಂದ ಚಾಲನೆ ಸಿಕ್ಕಿದೆ.

Advertisement

ಆ ಪ್ರಯತ್ನದ ಹೆಸರೇ “ಬಿಂದಾಸ್‌ ಆಗಿ ಕನ್ನಡ ಮಾತಾಡಿ’ ವೇದಿಕೆ. ರಾಜ್ಯದಲ್ಲಿ ಕಾಮಿಡಿ, ಸಂಗೀತ ಹೀಗೆ ಇನ್ನಿತರೆ ಕಲೆಗಳನ್ನು ಪ್ರದರ್ಶಿಸಲು ವೇದಿಕೆಗಳು ಇವೆ. ಅದೇ ರೀತಿ ಕನ್ನಡದಲ್ಲಿ ಮಾತನಾಡಲು, ಬರೆಯಲು, ಕನ್ನಡದವರೊಂದಿಗೆ ಬೆರೆಯಲು, ತಪ್ಪೋ-ಸರಿನೋ “ಬಿಂದಾಸ್‌ ಆಗಿ ಕನ್ನಡ ಮಾತಾಡಲು’ ಈ ವೇದಿಕೆ ಸೃಷ್ಟಿಯಾಗಿದೆ.

ಬೆಂಗಳೂರಿಗೆ ರಾಜ್ಯವಷ್ಟೆ ಅಲ್ಲ, ದೇಶ- ವಿದೇಶದಿಂದಲೂ ಶಿಕ್ಷಣ- ಉದ್ಯೋಗಕ್ಕಾಗಿ ಅನೇಕ ಮಂದಿ ಆಗಮಿಸಿದ್ದಾರೆ. ಇಂತಹವರಿಗೆ ಕನ್ನಡದಲ್ಲಿ ಮಾತನಾಡುವ ಆಸಕ್ತಿಯುಳ್ಳವರು ಹಾಗೂ ಕನ್ನಡಕ್ಕಾಗಿ ತುಡಿಯುವವರು ಬಿಂದಾಸ್‌ ಆಗಿ ಕನ್ನಡ ಮಾತಾಡಬಹುದು, ಆಗ ತಪ್ಪಾದರೆ ತಿದ್ದುವ ಕೆಲಸವನ್ನೂ ವೇದಿಕೆ ಮಾಡಲಿದೆ.

ರಾಜಧಾನಿಯಲ್ಲಿ ಶೇ.50ರಿಂದ 60ರಷ್ಟು ಅನ್ಯಭಾಷಿಗರಿದ್ದಾರೆ. ಇವರಲ್ಲಿ ಬಹುತೇಕರಿಗೆ ಕನ್ನಡದಲ್ಲಿ ಮಾತಾಡುವ ಆಸಕ್ತಿಯಿದ್ದರೂ ಕಲಿಸುವವರ ಕೊರತೆಯಿದೆ. ಇಂಥವರಿಗೆ ಪ್ರೋತ್ಸಾಹ ನೀಡಲು “ಬಿಂದಾಸ್‌ ಆಗಿ ಕನ್ನಡ ಮಾತಾಡಿ’ ವೇದಿಕೆ ಪ್ರತಿ ಭಾನುವಾರ ಒಂದು ಗಂಟೆಯ ಕಾಲ ಉಚಿತವಾಗಿ ಕನ್ನಡ ಆನ್‌ಲೈನ್‌ ಟ್ಯೂಷನ್ಸ್‌ ಮೂಲಕ ಕನ್ನಡ ಭಾಷೆ ಹೇಳಿಕೊಡಲಾಗುತ್ತದೆ. ಮಾತನಾಡಲು ಹೆದರಿಕೆ, ಹಿಂಜರಿಕೆ ಇರುವವರಿಗೆ ಧೈರ್ಯತುಂಬಿ “ಏನಾದರೂ ಮಾತಾಡಿ, ಹೆಂಗಾದ್ರೂ ಮಾತಾಡು, ತಪ್ಪಾದರೂ ಮಾತಾಡಿ, ಒಟ್ಟಾರೆ ಕನ್ನಡ ಮಾತಾಡಿ’ ಎಂಬ ಘೋಷ ವಾಕ್ಯಗಳ ಮೂಲಕ ಹುರಿದುಂಬಿಸಲಾಗುತ್ತದೆ.

ಅನ್ಯಭಾಷಿಕರ ಕನ್ನಡ ಕಲಿಕೆಗೆ ಸುವರ್ಣ ಸಂಭ್ರಮ:

Advertisement

ಗಿರಿನಗರದ ರಾಘವನ್‌ ಅವರು ಸುಮಾರು 50 ವರ್ಷಗಳಿಂದ ಅನ್ಯಭಾಷಿಗರಿಗೆ ಉಚಿತವಾಗಿ ಕನ್ನಡವನ್ನು ಹೇಳಿಕೊಡುತ್ತಿದ್ದಾರೆ. “ಕನ್ನಡ ಪ್ರಸಾರ ಪರಿಷತ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಲಕ್ಷಾಂತರ ಅನ್ಯಭಾಷಿಗರಿಗೆ ಕನ್ನಡವನ್ನು ಕಲಿಸಿದ್ದಾರೆ. ರಾಘವನ್‌ ಅವರು ಬೆಂಗಳೂರಿಗೆ ಉದ್ಯೋಗ ಅರಸಿ ಬಂದ ವಿದೇಶಿಗರಿಗೆ ಮಾತ್ರವಲ್ಲದೇ ಅವರ ಮಕ್ಕಳಿಗೆ, ಐಎಎಸ್‌, ಕೆಎಎಸ್‌ ಅಧಿಕಾರಿಗಳಿಗೆ, ತೆರಿಗೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ, ಇನ್ಫೋಸಿಸ್‌, ವಿಪ್ರೋ ಮುಂತಾದ ಐಟಿ-ಬಿಟಿ ಉದ್ಯೋಗಿಗಳು, ಐಐಎಸ್‌ಸಿ, ಐಐಎಂಗೆ ಬರುವ ಸಂಶೋಧನಾಭ್ಯರ್ಥಿಗಳಿಗೆ, ಮಾಜಿ ಸಿಎಂ ರಾಮಕೃಷ್ಣ ಹೆಗ್ಡೆ, ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌, ಯು.ಆರ್‌. ಅನಂತಮೂರ್ತಿ ಸೇರಿದಂತೆ ವಿವಿಧ ರಾಜಕಾರಣಿ ಮತ್ತು ಸಾಹಿತಿಗಳ ಮಕ್ಕಳು-ಮೊಮ್ಮಕ್ಕಳಿಗೂ ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಿದ ಹೆಗ್ಗಳಿಕೆ ಇವರಿಗಿದೆ. ಪರಿಷತ್ತಿನ ಪರೀಕ್ಷೆ ಪಾಸು ಮಾಡಿಕೊಳ್ಳುವ ಉದ್ದೇಶದಿಂದ ಕೆಲವರು ಕನ್ನಡ ಕಲಿತರೆ, ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಬೇಕು ಎಂದು ಶೇ.80 ಮಂದಿ ಕಲಿಯುತ್ತಾರೆ. ಸಿಂಗಪುರನಲ್ಲಿ ಹುಟ್ಟಿ-ಬೆಳೆದ ಡಾ. ಪ್ರಿಯದರ್ಶನಿ ಕಾರಣಾಂತರ ಬೆಂಗಳೂರಿಗೆ ಬಂದ ಅವರು, ರಾಘವನ್‌ ಅವರ ಕನ್ನಡ ತರಗತಿಗೆ ಸೇರಿಕೊಂಡರು. ಇದೀಗ 70ಕ್ಕೂ ಹೆಚ್ಚು ಕನ್ನಡ ಹಾಡುಗಳನ್ನು ನಿರರ್ಗಳವಾಗಿ ಹಾಡಿದ್ದಾರೆ. ಇಷ್ಟೇ ಅಲ್ಲದೇ, ಫ್ರೆಂಚ್‌, ಜರ್ಮನಿ ಕಲಿಸುವವರಿಗೂ ಕನ್ನಡವನ್ನು ಹೇಳಿಕೊಟ್ಟಿದ್ದೇನೆ ಎನ್ನುತ್ತಾರೆ ರಾಘವನ್‌.

ಅರಸರ ಹೆಸರಲ್ಲಿ ಚಾನೆಲ್‌ಗ‌ಳು:

“ಬಿಂದಾಸ್‌ ಆಗಿ ಕನ್ನಡ ಮಾತಾಡಿ’ ಇದನ್ನು ಗೂಗಲ್‌ ಮೀಟ್‌ನ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲಾಗುತ್ತಿದ್ದು, ವೈವಿಧ್ಯಮಯ ಭಾಷಾ ಹಿನ್ನೆಲೆಗಳನ್ನು ಪೂರೈಸಲು ಮೈಸೂರು ಒಡೆಯರು (ಕನ್ನಡ- ಇಂಗ್ಲೀಷ್‌), ಚಾಲುಕ್ಯ(ಕನ್ನಡ-ಹಿಂದಿ), ವಿಜಯ ನಗರ ಅರಸು (ಕನ್ನಡ-ತೆಲುಗು), ಹೊಯ್ಸಳರು (ಕನ್ನಡ-ತಮಿಳು) ಹಾಗೂ ರಾಷ್ಟ್ರಕೂಟರು (ಕನ್ನಡ-ಮಲಯಾಳಂ) ಎಂದು ಕರ್ನಾಟಕವನ್ನು ಆಳಿದ ರಾಜರ ಹೆಸರಲ್ಲಿ ಐದು ವಿಶೇಷ ಚಾನೆಲ್‌ಗಳನ್ನು ಹೊಂದಿದೆ. ಬುಧ ವಾರದಿಂದ ಸಾಂಕೇತಿಕ ಹಾಗೂ ಪ್ರಾಯೋಗಿಕವಾಗಿ ಒಂದು ಚಾನೆಲ್‌ ಅನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಂಯೋಜಕ ಜಗದೀಶ ಕೊಟ್ಟೂರಶೆಟ್ಟರ ತಿಳಿಸುತ್ತಾರೆ.

ಕಲಿಸುವುದು ಹೇಗೆ?:

ಪ್ರತಿ ಭಾನುವಾರ ಮಧ್ಯಾಹ್ನ 12-1ರವರೆಗೆ ಆನ್‌ಲೆನಿನಲ್ಲಿ ಕನ್ನಡ ತರಗತಿ ನಡೆಯಲಿದ್ದು, ಇದರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನಿರ್ದಿಷ್ಟ ವಯೋಮಿತಿ ಇಲ್ಲದೇ ಕನ್ನಡ ಕಲಿಯುವ ಆಸಕ್ತಿಯುಳ್ಳ ಪ್ರತಿಯೊಬ್ಬರೂ ತರಗತಿಗೆ ಸೇರಬಹುದು. ಮೊದಲ ಅರ್ಧ ಗಂಟೆ ಸಾಮಾನ್ಯ ವೇದಿಕೆಯಾಗಿದ್ದು, ಇದರಲ್ಲಿ ಯಾರೂ ಬೇಕಾದರೂ, ತಪ್ಪಾದರೂ ಚಿಂತಿಸದೇ ಕನ್ನಡದಲ್ಲಿ ಮಾತನಾಡುವ ಅವಕಾಶ ನೀಡಲಾಗುತ್ತದೆ. ಉಳಿದ ಅರ್ಧ ಗಂಟೆಯಲ್ಲಿ ನಿತ್ಯ ಜೀವನದ ವ್ಯವಹಾರಿಕ ಭಾಷೆ ಸಂಭಾಷಣೆ ನಡೆಸಲಾಗುತ್ತದೆ.

ಗೂಗಲ್‌ ಮೀಟ್‌ಗೆ ಸೇರುವುದು ಹೇಗೆ?:

ಆಸಕ್ತರು, ಕನ್ನಡ ಆನ್‌ಲೈನ್‌ ಟ್ಯೂಷನ್‌ ವೆಬೆÕ„ಟ್‌ನಲ್ಲಿರುವ “ಬಿಂದಾಸ್‌ ಆಗಿ ಕನ್ನಡ ಮಾತಾಡಿ’ ವಿಭಾಗವನ್ನು ಪ್ರವೇಶಿಸಿ, ಅಲ್ಲಿರುವ ಗೂಗಲ್‌ ಮೀಟ್‌ ಚಾನಲ್‌ನಲ್ಲಿನ ಕೊಂಡಿಯನ್ನು ಒತ್ತಿ, ವೇದಿಕೆಯಲ್ಲಿ ಭಾಗವಹಿಸಬಹುದು ಅಥವಾ https://bit.ly/BindaasKannada_Mathadi ಲಿಂಕ್‌ ಮೂಲಕ ಸೇರಿಕೊಳ್ಳಬಹುದಾಗಿದೆ.

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next