Advertisement
ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಒಂದು ದಂಡೆಯಲ್ಲಿ ಕೊಡಲಾಗಿದ್ದ ಕುರ್ಚಿ, ಮೇಜಿನ ಸುತ್ತ ತಮ್ಮ ಕಸ್ತೂರಿ ಪ್ರಪಂಚವನ್ನು ಕಟ್ಟಿಕೊಂಡಿದ್ದರು. ಆಚಾರ್ಯರನ್ನು ಕಾಣಬೇಕೆಂಬ ನನ್ನ ಹಂಬಲವನ್ನು ಒಮ್ಮೆ ಅಲ್ಲಿದ್ದ ಗೋಪಾಲ ವಾಜಪೇಯಿ, ಜಿ. ಎಚ್. ರಾಘವೇಂದ್ರರಿಗೆ ಹೇಳಿದೆ. ಬಹುಶಃ ಆ ಕಚೇರಿಗೆ ಬಂದು, ಆಚಾರ್ಯರನ್ನು ಕಾಣುವ ಧೈರ್ಯ ಮಾಡಿದ್ದು ನನ್ನ ಸಾಹಸವೇ ಆಗಿತ್ತು. ಅಲ್ಲಿ ಮಾಧವ ಮಹಿಷಿಯವರು ಮಾತ್ರ ಆಗಾಗ ಆಚಾರ್ಯರ ಹತ್ತಿರ ಮಾತು, ಸಂಪರ್ಕ ಇಟ್ಟುಕೊಂಡ ಹಾಗಿತ್ತು. ಇದಕ್ಕೆ ಕಾರಣ ಹಲವು.
ಆಚಾರ್ಯರು ಕಚೇರಿಗೆ ಎಲ್ಲರಿಗಿಂತ ಮೊದಲೇ ಬಂದಿರುತ್ತಿದ್ದರು. ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ತಮಗೆ ಬಿಡುವಾದೊಡನೆ ಅದೇ ಸಂಸ್ಥೆಯ ದಿನಪತ್ರಿಕೆ, ವಾರಪತ್ರಿಕೆಗಳ ಕೆಲಸದಲ್ಲೂ ನೆರವಾಗುತ್ತಿದ್ದರು. ಅಂದಂದಿನ ಕೆಲಸ ಅಂದೇ ಮುಗಿಸುತ್ತಿದ್ದರು. ಕಸ್ತೂರಿಗೆ ಬರುತ್ತಿದ್ದ ಲೇಖನಗಳ ಓದು, ಆಯ್ಕೆಯ ಜೊತೆಗೆ, ರೀಡರ್ಸ್ ಡೈಜೆಸ್ಟ್, ನವನೀತ್, ಕಾದಂಬಿನೀ ಮುಂತಾದ ಪತ್ರಿಕೆಗಳಿಂದ ಆಯ್ದ ಶ್ರೇಷ್ಠ ಲೇಖನಗಳ ಖಚಿತ, ನಿರ್ದುಷ್ಟ ಅನುವಾದ ಮಾಡುತ್ತಿದ್ದರು. ಗ್ರಂಥಾಲಯದಲ್ಲಿದ್ದ ಅನೇಕ ಪುಸ್ತಕಗಳನ್ನು ನಿಯಮಿತವಾಗಿ ಓದುತ್ತಿದ್ದರು. ಯಾವುದಾದರೂ ಹೊಸ ಪದವನ್ನು ಬರೆಯುವ, ಬಳಸುವ ಮೊದಲು ಅದರ ಅರ್ಥವ್ಯಾಪ್ತಿ, ವಿಸ್ತಾರ ಮುಂತಾದುವನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಮುದ್ರಣಕ್ಕೆ ಅಣಿಯಾದ ಲೇಖನಗಳ ಕಡತವನ್ನು ಮಹಿಷಿಯವರು ನೋಡಿದ ನಂತರವೂ, ಸ್ವತಃ ತಾವೂ ನೋಡುತ್ತಿದ್ದರು. ಊಟ, ತಿಂಡಿ ಮನೆಯಿಂದ ತಂದಿರುತ್ತಿದ್ದರು. ಇವೆಲ್ಲ ಪಾವೆಂ ಅವರನ್ನು ಭಿನ್ನ ವ್ಯಕ್ತಿಯಾಗಿಸಿತ್ತು. ಇಂಥ ತತ್ಪರತೆ, ಕಾರ್ಯನಿಷ್ಠೆ ಉಳಿದವರಿಗೆ ಕಷ್ಟಸಾಧ್ಯ. ಗೋಪಾಲ ಹೆದರುತ್ತಲೇ ಮಹಿಷಿಯವರಿಗೆ ಹೇಳಿ, ಬಂದು ಬಾಗಿಲ ಹತ್ತಿರವೇ ಇದ್ದ ತನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದ. ಮಹಿಷಿಯವರು ಆಚಾರ್ಯರಿಗೆ ಏನೋ ಹೇಳಿದರು. ಆಚಾರ್ಯರು ತಲೆಎತ್ತಿ ನೋಡಿದರು, ಕೈಯಲ್ಲಿದ್ದ ಟಾಕು ಹಾಗೆಯೇ ಹಿಡಿದುಕೊಂಡು, ಹೊರಗಡೆ ದೃಷ್ಟಿ ಹರಿಸಿದರು. ಕಚೇರಿಯ ಎಲ್ಲರೂ ಕಾಣುವಂತಿದ್ದ ಆ ಸಭಾಂಗಣದ ಕೊನೆಯ ಬಾಗಿಲಲ್ಲಿ ನಿಂತು ಕುತೂಹಲದಿಂದ ನೋಡುತ್ತಿದ್ದ ನಾನು ಭಯ-ಸಂಕೋಚಗಳ ಮುದ್ದೆಯಾಗಿದ್ದೆ. ಆಚಾರ್ಯರತ್ತಲೇ ಕಣ್ಣಿಟ್ಟು ನೋಡುತ್ತಿದ್ದೆ. ನನ್ನನ್ನು ಗುರುತಿಸಿದ ಆಚಾರ್ಯರು, ಟಾಕು ಬಲಗೈಯಲ್ಲಿ ಹಿಡಿದುಕೊಂಡೇ ಎಡಗೈ ಎತ್ತಿ, “ಒಳಗೆ ಬನ್ನಿ’ ಎಂಬಂತೆ ಸನ್ನೆ ಮಾಡಿ, ತಮ್ಮ ಕೆಲಸದಲ್ಲಿ ಮುಳುಗಿದರು. ಎಲ್ಲವನ್ನೂ ನಿರುಕಿಸುತ್ತಿದ್ದ ಗೋಪಾಲ ನನ್ನನ್ನು ಒಳಗೆ ಕರೆತಂದು ಆಚಾರ್ಯರ ಮೇಜಿನ ಮುಂಭಾಗದಲ್ಲಿದ್ದ ಪುಟ್ಟ ಬಾಕಿನ ಮೇಲೆ ಕೂಡಿಸಿ ಹೋದ. ಸದ್ದು, ಗದ್ದಲ, ಮಾತು ಇತ್ಯಾದಿಗೆ ಆಚಾರ್ಯರ ಸುತ್ತಮುತ್ತ ಅವಕಾಶವೇ ಇರಲಿಲ್ಲ, ಅವರ ಮೌನ ಕಾರ್ಯವಿಧಾನವೇ ಅಂಥ ವಾತಾವರಣವನ್ನು ಸೃಷ್ಟಿಸಿತ್ತು. ನಾನು ಆಚಾರ್ಯರ ಮುಖವನ್ನೇ ನೋಡುತ್ತಿದ್ದೆ. ತಾವು ಬರೆಯುತ್ತಿದ್ದ ಯಾವುದೋ ಲೇಖನವನ್ನು ಮುಗಿಸಿ, ನನ್ನನ್ನು ನೋಡಿದ ಆಚಾರ್ಯರು, “ಯಾವಾಗ ಬಂದಿರಿ?’ ಎಂದರು. ನನ್ನ ಅಪರಿಚಯದ ದಿಗಿಲು ಒಮ್ಮೆಲೇ ಕಳಚಿ ಬಿತ್ತು. ಇದು 1964ರ ಕೊನೆಯಲ್ಲಿ ನಡೆದ ಪ್ರಸಂಗ.
Related Articles
Advertisement
ಆಚಾರ್ಯರು ನಮ್ಮ ಸಂಕ್ರಮಣ ಪತ್ರಿಕೆ ನಿಯಮಿತವಾಗಿ ಓದುತ್ತಿದ್ದರು. ನನ್ನ ಜೊತೆ ಮುಕ್ತವಾಗಿ ಮಾತಾಡುತ್ತಿದ್ದರು. ನಮ್ಮ ಭಾಗದ ಅನೇಕ ಹಿರಿಯರ ಬಗ್ಗೆ ಅವರಿಗೆ ಬಹಳಷ್ಟು ಗೊತ್ತಿತ್ತು. ಕೆಲವರ ಬಗ್ಗೆ ಸದಭಿಪ್ರಾಯ ಹೊಂದಿರಲಿಲ್ಲ. ಅದನ್ನು ಸಂಕೋಚದಿಂದ ಒಂದೆರಡು ಶಬ್ದಗಳಲ್ಲಿಯೇ ಹೇಳಿಬಿಡುತ್ತಿದ್ದರು. ಯಾರ ಬಗೆಗೂ ಲಘುವಾಗಿ ಮಾತಾಡುತ್ತಿರಲಿಲ್ಲ. ಆಚಾರ್ಯರ ಒಡನಾಟದ ಅನೇಕ ಪ್ರಸಂಗಗಳು ನೆನಪಿವೆ. ಇಲ್ಲಿ ಕೆಲವನ್ನು ಮಾತ್ರ ಹೇಳುತ್ತೇನೆ.
ಈಗಿನಂತೆ ಆ ಕಾಲದಲ್ಲಿ ಫೋನ್‌ಗಳು ಇರಲಿಲ್ಲ. ಆಚಾರ್ಯರು ತಮ್ಮ ಕಚೇರಿ ಕೆಲಸಕ್ಕೆ ಸಹ ಅಲ್ಲಿದ್ದ ಸ್ಥಿರವಾಣಿಯನ್ನು ಬಳಸುತ್ತಿರಲಿಲ್ಲವೇನೊ. ಆದರೆ, ಪೋಸ್ಟ್‌ಕಾರ್ಡ್ ತಪ್ಪದೇ ಬರೆಯುತ್ತಿದ್ದರು. ಅವರ ಮುಖದ ಹಾಗೆಯೇ ಚಪ್ಪಟೆ ಚೌಕಾಕಾರದ, ದೊಡ್ಡ ದೊಡ್ಡ ಅಕ್ಷರಗಳಲ್ಲಿ ಆರೇಳು ಸಾಲುಗಳಲ್ಲಿ ತಾವು ಹೇಳಬೇಕಾದುದೆಲ್ಲವನ್ನೂ ಲೇಖೀಸುವ ಶಕ್ತಿ ಅವರಿಗಿತ್ತು.
ಮೊದಲ ಕತೆ ಬರೆಸಿದರು !ಒಂದು ರವಿವಾರ ಯಾವ ಪತ್ರ ಸೂಚನೆಯೂ ಇಲ್ಲದೆ ನಮ್ಮ ಮನೆಗೆ ಬಂದುಬಿಟ್ಟರು. ಅವರೊಡನೆ ಗ್ರಾಮಾಯಣದ ರಾವಬಹಾದ್ದೂರ (ಆರ್‌ಬಿ ಕುಲಕರ್ಣಿ) ಅವರೂ ಇದ್ದರು. ಅವರಿಬ್ಬರೂ ಬಹುಕಾಲದ ಆಪ್ತ ಗಾಂಧೀವಾದೀ ಮಿತ್ರರು. ನನಗೆ ಅವರ ಅನಿರೀಕ್ಷಿತ ಆಗಮನದಿಂದ ಅಪಾರ ಆನಂದವಾಗಿತ್ತು. “ನಾವು ಒಂದು ವಿಶಿಷ್ಟ ಕೆಲಸಕ್ಕಾಗಿ ಬಂದಿದ್ದೇವೆ, ಆಚಾರ್ಯರ ಉಪೋದ್ಘಾತ. ಅದು ನಿಮ್ಮಿಂದಲೇ ಆಗಬೇಕು ಅಂತ ಮಾತಾಡಿಕೊಂಡಿದ್ದೇವೆ’- ರಾವಬಹಾದ್ದೂರರ ವಿವರಣೆ. “ಮೊದಲು ಚಾ ಕುಡಿಯೋಣ, ಆಮೇಲೆ ಮಾತಾಡೋಣ’ ಎಂದೆ. ತಕ್ಷಣ ಆಚಾರ್ಯರು, “ನೀವು ನಮಗೆ ಬೇಕಾದವರು, ಒಳ್ಳೆಯ ಅಧ್ಯಾಪಕರು, ಸಂಪಾದಕರು, ಒಳ್ಳೆಯ ಕವಿತೆ ಬರೆಯುತ್ತೀರಿ…’ ಎನ್ನುತ್ತಿದ್ದಂತೆ ಎಂದೂ ಎರಡು ಶಬ್ದ ಸಹ ಹೆಚ್ಚು ಮಾತಾಡದ ಇವರು ಇಂದು ಇಷ್ಟೇಕೆ ಮಾತಾಡುತ್ತಿದ್ದಾರೆ… ಆನಂದವೆನಿಸಿತು, ಅಭಿಮಾನವೆನಿಸಿತು. ರಾವಬಹಾದ್ದೂರ ಮಾತನ್ನು ಪೂರ್ಣಗೊಳಿಸುತ್ತ, “ಈಗ ನಮ್ಮ ಕಸ್ತೂರಿ ವಸಂತ ಸಂಚಿಕೆಗೆ ನಿಮ್ಮಿಂದ ಒಂದು ಕತೆ ಬೇಕು’ ಅಂದರು. ನನಗೆ ಆಶ್ಚರ್ಯ, ಗಾಬರಿ. ನಾನು ಎಂದೂ ಕತೆ ಬರೆದವನಲ್ಲ, ಕನಸು-ಮನಸಿನಲ್ಲಿಯೂ ಆ ಬಗ್ಗೆ ಯೋಚಿಸಿದವನಲ್ಲ. ಆಚಾರ್ಯರು ಕೆಲಸ ಮಾಡುವುದನ್ನಷ್ಟೇ ಅಲ್ಲ, ಮಾಡಿಸಿಕೊಳ್ಳುವ ಪ್ರೀತಿಯನ್ನೂ ಅರಗಿಸಿಕೊಂಡಿದ್ದವರು. ಅವರ ಅಕ್ಕರೆ, ಅಭಿಮಾನ, ವಿಶ್ವಾಸ ನನ್ನನ್ನು ಮೂಕನನ್ನಾಗಿಸಿದುವು. ಚಹಾ ಮುಗಿಯುವಷ್ಟರಲ್ಲಿ ಆಚಾರ್ಯರು ನಾಟಕೀಯವಾಗಿ ನನ್ನೊಳಗೆ ಒಬ್ಬ ಕತೆಗಾರನನ್ನು ಸೃಜಿಸಿಬಿಟ್ಟಿದ್ದರು. ಅವರ ಅಪೇಕ್ಷೆ, ಆಶೀರ್ವಾದದ ಫಲವಾಗಿ ಆ ವರ್ಷದ ಕಸ್ತೂರಿ ವಿಶೇಷ ಸಂಚಿಕೆಯಲ್ಲಿ ನಾನು ಬರೆದ ಮಾವ ಕತೆ ಪ್ರಕಟವಾಯಿತು. ನಂತರದ ಕಾಲದಲ್ಲಿಯೂ ಅವರ ಒತ್ತಾಸೆಯಿಂದಾಗಿ ಕೆಲವು ಕತೆ, ಅನುವಾದ, ಕಾದಂಬರಿ ಸಂಕ್ಷೇಪ ಇತ್ಯಾದಿ ಬರೆದೆ. 1977ರಲ್ಲಿ ಪ್ರಕಟವಾದ ನನ್ನ ಮೊದಲ ಕಥಾಸಂಗ್ರಹಕ್ಕೆ ಮಾವ ಎಂದೇ ಹೆಸರಿಟ್ಟೆ. ಆ ಸಂಗ್ರಹವನ್ನು ಸಾಲಿ ರಾಮಚಂದ್ರರಾಯರಿಗೆ ಮತ್ತು ಪಾ. ವೆಂ. ಆಚಾರ್ಯರಿಗೆ ಅತ್ಯಂತ ಗೌರವದಿಂದ ಅರ್ಪಿಸಿದೆ. ಅವರು ನನ್ನ ಸಾಹಿತ್ಯ ವ್ಯಕ್ತಿತ್ವಕ್ಕೆ ಹೊಸ ಆಕರ್ಷಕ ಟಿಸಿಲನ್ನು ಮೂಡಿಸಿದವರು ಎಂಬ ಹೆಮ್ಮೆ ನನಗೆ. ಆಚಾರ್ಯರು ಅನೇಕ ಭಾಷೆಗಳನ್ನು ಅರಿತ ವಿದ್ವಾಂಸರು. ಕಸ್ತೂರಿ ಕೆಲಸದಿಂದ ನಿವೃತ್ತರಾದ ನಂತರವೂ ಆ ಪತ್ರಿಕೆಗೆ ಅಪರೂಪದ ಕೃತಿಗಳನ್ನು ನೀಡಿದ್ದಾರೆ. ಅಂಥ ಸಂದರ್ಭದಲ್ಲಿ ಆಗಾಗ ನನ್ನ ಕಡೆ ಬರುತ್ತಿದ್ದರು. ಸಾಮಾನ್ಯವಾಗಿ ಸಂಜೆ 4ರ ಹೊತ್ತಿಗೆ ನನ್ನ ಕ್ಲಾಸುಗಳು ಮುಗಿಯುವ ಸಮಯಕ್ಕೆ ಕರ್ನಾಟಕ ಕಾಲೇಜಿಗೆ ಬರುತ್ತಿದ್ದರು. ನನ್ನೊಡನೆ ನಮ್ಮ ಗ್ರಂಥಾಲಯದಲ್ಲಿ ಕುಳಿತು ಅಪರೂಪದ ಸಾಹಿತ್ಯ ಕೃತಿಗಳನ್ನು, ನಿಘಂಟುಗಳನ್ನು ಪರಿಶೀಲಿಸುತ್ತಿದ್ದರು. ಅವರ ಭಾಷಾಜ್ಞಾನ, ಅಗಾಧ ಓದು ಅವರ ಮಾತು, ಚರ್ಚೆಗಳಲ್ಲಿ ವ್ಯಕ್ತವಾಗುತ್ತಿತ್ತು. ಅವರು ಉರ್ದು, ಪರ್ಶಿಯನ್ ನಿಘಂಟುಗಳನ್ನು ಸಹ ನೋಡುತ್ತಿದ್ದರು. ನನ್ನ ಅಜ್ಞಾನ ಮತ್ತು ಸೀಮಿತ ತಿಳಿವಳಿಕೆಯ ಬಗ್ಗೆ ನನಗೆ ನಾಚಿಕೆಯೆನಿಸುತ್ತಿತ್ತು. ಹೀಗೆ 4-5 ಹೆಬ್ಬೊತ್ತಿಗೆಗಳನ್ನು ಹೊತ್ತು ದಾರಿಗುಂಟ ಮಾತಾಡುತ್ತ, ಇಬ್ಬರೂ ಅವರ ಭಾವ ಜನಾರ್ದನರ ಹೊಟೇಲ್ ಧಾರವಾಡಕ್ಕೆ ಹೋಗುತ್ತಿದ್ದೆವು. ಅಲ್ಲಿ ಅವರಿಗಾಗಿಯೇ ಒಂದು ರೂಮ್ ಇಡಲಾಗಿತ್ತು. ಅವರ ಪ್ರೀತಿಯ ಉಪ್ಪಿಟ್ಟು ಅಥವಾ ಸಿಂಗಲ್ ಇಡ್ಲಿ, ಚಹಾ. ಶಬ್ದಕೋಶಗಳನ್ನು ನೋಡುತ್ತ, ಪದ-ಮೂಲಗಳನ್ನು ಶೋಧಿಸುತ್ತ, ಪದಾರ್ಥಚಿಂತಾಮಣಿಗಳ ಮಗ್ಗುಲಲ್ಲಿ ಮರೆಯಾಗಿದ್ದ ಭೂಖಂಡ, ಪದಪ್ರಯಾಣ, ಇತಿಹಾಸ, ಮಾನವಚರಿತ್ರೆ, ವ್ಯಾಕರಣ, ಉಚ್ಚಾರಾಯಣದ ವಿಚಿತ್ರ ಸಂಗತಿಗಳಲ್ಲಿ ತೇಲುತ್ತ, ಆಚಾರ್ಯರು ಸ್ವತಃ ಒಂದು ವಿಶಿಷ್ಟ, ವಿನೂತನ ನಿಘಂಟುವಾಗುತ್ತಿದ್ದರು. ಈ ಆಳ ನಮ್ಮಲ್ಲಿ ಅನೇಕರಿಗೆ ನಿಲುಕಲೇ ಇಲ್ಲ. ಆಚಾರ್ಯರು ತಾವು ಹಿಂದಿ, ಇಂಗ್ಲಿಷ್ ಭಾಷಾಂತರಗಳ ಮೂಲಕ ಓದಿ ಮೆಚ್ಚಿದ, ಆಯ್ದ ಅನೇಕ ಶ್ರೇಷ್ಠ ಕತೆಗಳನ್ನು ನನಗೆ ಓದಲು ಸೂಚಿಸುತ್ತಿದ್ದರು. ನನ್ನ ಇಚ್ಛೆ, ಸಲಹೆಗಳನ್ನು ಎಂದೂ ಅವಗಣಿಸಲಿಲ್ಲ. ನನ್ನ ಒತ್ತಾಯಕ್ಕೆ ಒಪ್ಪಿ ತಮ್ಮ ಕೆಲವು ಕವಿತೆಗಳನ್ನು ಹೊಂದಿಸಿಕೊಟ್ಟರು. ಅದರ ಮೊಳೆ-ಜೋಡಣೆ ಹೊತ್ತಿಗೆ ಸಹ ಹೆಬ್ಬಳ್ಳಿ ಅಗಸಿಯಲ್ಲಿದ್ದ ಸಾಧನಿಯ ಪ್ರಸ್‌ಗೆ ಇಬ್ಬರೂ ಹೋಗುತ್ತಿದ್ದೆವು. ಧಾರವಾಡದ ಸಂದಿಗೊಂದಿಗಳನ್ನು ನೋಡುತ್ತ, ಹರಟುತ್ತ ನಡೆಯುತ್ತಿದ್ದೆವು. ತುಳು ಅಲ್ಲದೇ ಅವರು ಹಿಂದಿಯಲ್ಲಿಯೂ ಕವಿತೆ ರಚಿಸುತ್ತಿದ್ದರೆಂದು ನನಗೆ ತಿಳಿದದ್ದು ಆಗಲೇ. ತಮ್ಮ ಹಿಂದಿ ಕವಿತೆಗಳ ಹಸ್ತಪ್ರತಿ ನನ್ನ ಕೈಯಲ್ಲಿ ಕೊಟ್ಟಿದ್ದರು. ಆಚಾರ್ಯರು ಗತಿಸಿದ ನಂತರ ಅವರ ಸಮಗ್ರ ಕಾವ್ಯ ಸಂಕಲಿಸುತ್ತಿದ್ದ ಶ್ರೀನಿವಾಸ ಹಾವನೂರರಿಗೆ ಅವನ್ನು ಹಸ್ತಾಂತರಿಸಿದೆ. ಕೆಎಂಸಿ ಆಸ್ಪತ್ರೆಯಲ್ಲಿ ಅವರಿಗೆ ಒಂದು ಅಗತ್ಯದ ಶಸ್ತ್ರಕ್ರಿಯೆ ಆಗಲೇಬೇಕಿತ್ತು. ತಮಗೆ ಅರಿವಳಿಕೆ ಕೊಡುವುದು ಬೇಡ ಎಂದು, ಹಠಪೂರ್ವಕ ಒತ್ತಾಯಿಸಿ, ವೈದ್ಯರನ್ನು ಒಪ್ಪಿಸಿ, ಆ ಶಸ್ತ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಇಂಗ್ಲಿಷ್ ಲೇಖನ, ಪುಸ್ತಕ ತಾವು ಓದಿಕೊಂಡಿದ್ದನ್ನು ವಿವರಿಸುತ್ತಲೇ, ನೇರವಾಗಿ ತಮ್ಮ ಚಿಕಿತ್ಸೆಯನ್ನು ತಾವೇ ನೋಡುತ್ತ, ಸಹಿಸುತ್ತ ಮಾಡಿಸಿಕೊಂಡರು. ವೈದ್ಯರಿಗೆ ಅಚ್ಚರಿ. ಅದಾದ ಮರುದಿನ ಅವರನ್ನು ನೋಡಲು ಹೋಗಿದ್ದೆ. ಮೊದಲ ಸಲ ಕಚೇರಿಯಲ್ಲಿ ಕಂಡಿದ್ದ ಆಚಾರ್ಯಕಸ್ತೂರಿಯೇ ಆಗಿದ್ದರು. ಮೂರನೆಯ ದಿನವೇ ಆಸ್ಪತ್ರೆ ತೊರೆದು ಮನೆಗೆ ಹೋದರು. ಇದು ಹಠಯೋಗದ ಆಚಾರ್ಯ ಪ್ರಯೋಗ. ಸಂಸ್ಕೃತವನ್ನು ಆಮೂಲಚೂಲ ಅರಗಿಸಿಕೊಂಡಿದ್ದ ಪಾವೆಂ ಅವರು ಕನ್ನಡದಲ್ಲಿ ತಮ್ಮ ಹೆಸರನ್ನು ಆಚಾರ್ಯ ಎಂದೇ ಬರೆಯುತ್ತಿದ್ದರು, “ಪಾವೆಂ’ ಅಥವಾ “ಪಾವೆಂ ಆಚಾರ್ಯ’ ಎಂದೇ ಸಹಿ ಮಾಡುತ್ತಿದ್ದರು; “ಆಚಾರ್ಯ’ ಎಂದು ಅಲ್ಲ. ಕನ್ನಡ ವೈಯಾಕರಣಿಗಳು, ಬೋಧಕರು ಯೋಚಿಸಬೇಕು. ಸಿದ್ಧಲಿಂಗ ಪಟ್ಟಣಶೆಟ್ಟಿ