Advertisement

ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ಕಲರವ

11:26 AM Nov 02, 2018 | Team Udayavani |

ಬೆಂಗಳೂರು: ಕ್ರೀಡಾಂಗಣದ ತುಂಬಾ ಅನುರಣಿಸಿದ ಕನ್ನಡ ಡಿಂಡಿಮ, ಗಮನಸೆಳೆದ ನೃತ್ಯರೂಪಕಗಳು, ಮೈದಾನದ ತುಂಬಾ ಅನಾವರಣಗೊಂಡ ನಾಡಿನ ಕಲೆ-ಸಂಸ್ಕೃತಿ, ಪಥಸಂಚಲನ, ಯೋಗ, ಕವಾಯತು ಗಣ್ಯರ ಮನಗೆದ್ದಿತು.

Advertisement

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 63ನೇ ಕನ್ನಡ ರಾಜ್ಯೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು. ಕನ್ನಡದ ಹಬ್ಬವನ್ನು ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು, ಮುಖ್ಯಮಂತ್ರಿ ಸೇರಿದಂತೆ ಜನಪ್ರತಿನಿಧಿಗಳು ಅತ್ಯಂತ ಸಡಗರದಿಂದ ಆಚರಿಸಿದರು. 

ಪೂರ್ಣಪ್ರಜ್ಞಾ ಶಾಲೆಯ ಕರುನಾಡ ಕರುಳಿನ ಕಲೆ ಜನಪದ ನೃತ್ಯರೂಪಕದಲ್ಲಿ ಇಡೀ ಜನಪದ ಲೋಕವನ್ನು ಪರಿಚಯಿಸಿದದರು. ಪೂಜಾ ಕುಣಿತ, ಡೊಳ್ಳುಕುಣಿತ, ವೀರಗಾಸೆ, ನಂದಿಕೋಲು, ಯಕ್ಷಗಾನ, ಕಂಸಾಳೆ, ಹುಲಿವೇಷ, ಪಟ ಕುಣಿತ, ಹಾಲಕ್ಕಿ ಕುಣಿತ ಎಲ್ಲವೂ ಇದರಲ್ಲಿ ಸಮ್ಮಿಲನಗೊಂಡಿತ್ತು.

ಅದೇ ರೀತಿ, ಬಸವೇಶ್ವರ ನಗರದ ಇಂಡಿಯನ್‌ ಹೈಸ್ಕೂಲ್‌ ಮಕ್ಕಳು ಪ್ರದರ್ಶಿಸಿದ “ಕರುನಾಡು ನಮ್ಮ ಗುಡಿ ಕರುನಾಡು ನಮ್ಮ ನುಡಿ’ ನೃತ್ಯ ರೂಪಕದಲ್ಲಿ ಕವಿ, ಸಾಹಿತಿಗಳು, ಕಲೆ-ಸಂಸ್ಕೃತಿ ಅನಾವರಣಗೊಳಿಸುವ ಮೂಲಕ ನಾಡಿನ ಶ್ರೀಮಂತಿಕೆಯನ್ನು ಕಟ್ಟಿಕೊಟ್ಟರು. 

ಇನ್ನು ಚಿಕ್ಕಬಿದರಕಲ್ಲಿನ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು “ಸಮಗ್ರ ಶಿಕ್ಷಣ ಅಭಿಯಾನ’ದ ಇಡೀ ಆಶಯವನ್ನು ಕಟ್ಟಿಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಾಗಲುಕುಂಟೆ ಮತ್ತು ಮಂಜುನಾಥನಗರದ ಶಾಲಾಮಕ್ಕಳ ನೃತ್ಯ ವೈಭವವು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಸಾಧನೆಯನ್ನು ಅಚ್ಚುಕಟ್ಟಾಗಿ ಅನಾವರಣಗೊಳಿಸಿತು.

Advertisement

ಕೊನೆಗೆ ಯೋಗಾಸನ, ಸ್ಟೆಪ್‌ ಏರೋಬಿಕ್‌ ವ್ಯಾಯಾಮ, ಸಾಮೂಹಿಕ ಕವಾಯತು ನೆರೆದವರಲ್ಲಿ ಹುರುಪು ತುಂಬಿತು. ಈ ಮಧ್ಯೆ ಆಗಸದಲ್ಲಿ ಆಗಾಗ್ಗೆ ಹಾರಿಬಿಡಲಾಗುತ್ತಿದ್ದ ಹಳದಿ-ಕೆಂಪು ಬಣ್ಣದ ಬಲೂನುಗಳನ್ನು ಹಾರಿಬಿಡಲಾಗುತ್ತಿತ್ತು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಕೊನೆಯವರೆಗೂ ಕುಳಿತು ವೀಕ್ಷಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ರೋಷನ್‌ ಬೇಗ್‌, ಮೇಯರ್‌ ಗಂಗಾಂಬಿಕೆ ಮತ್ತಿತರರು ಉಪಸ್ಥಿತರಿದ್ದರು. ನಾಡಹಬ್ಬಕ್ಕೆ ಇಡೀ ಕ್ರೀಡಾಂಗಣ ವಧುವಿನಂತೆ ಸಿಂಗಾರಗೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next