ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಮೊಸರು ಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳು, ಯುವಕ ಮಂಡಲ ಸಮಿತಿ ಸೇರಿದಂತೆ ಹಲವು ಸಂಘಟನೆಗಳಿಂದ ಉತ್ಸವ ನಡೆಯಿತು.
ಜಿಲ್ಲೆಯ ಅತಿ ಪುರಾತನ ಮೊಸರು ಕುಡಿಕೆ ಉತ್ಸವ ಎಂಬ ಹಿರಿಮೆಯ ಅತ್ತಾವರ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿಯ ವತಿಯಿಂದ 115ನೇ ವರ್ಷದ ಮೊಸರು ಕುಡಿಕೆ ಉತ್ಸವ ನೆರವೇರಿತು. ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ವತಿಯಿಂದ 55ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.
ಕೊಟ್ಟಾರ ದ್ವಾರಕನಗರ, ಉರ್ವ, ಕಾವೂರು ಸಹಿತ ವಿವಿಧ ಕಡೆಗಳಲ್ಲಿ ಮೊಸರುಕುಡಿಕೆ, ಮೆರವಣಿಗೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರಗಿದವು.
ಕೆಲವು ಕಡೆಗಳಲ್ಲಿ ಸಾಂಸ್ಕೃತಿಕ ಸಂಭ್ರಮವಿತ್ತು. ವಿವಿಧ ರಸ್ತೆಗಳನ್ನು ಸಿಂಗರಿಸಲಾಗಿತ್ತು. ವಾಹನ ಸಂಚಾರ ಮಾರ್ಪಾಡು ಮಾಡಲಾಗಿತ್ತು. ವಿವಿಧ ಕಡೆಗಳಲ್ಲಿ ಜನಜಾತ್ರೆಯೇ ಇತ್ತು.