Advertisement
ತ್ಯೂಬಿಂಗನ್ ವಿವಿ ಗ್ರಂಥಾಲಯದಲ್ಲಿ ಕನ್ನಡ ಹಸ್ತ ಪ್ರತಿಗಳನ್ನು ಅವಲೋಕಿಸು ತ್ತಿದ್ದಾಗ ಮಲಯಾಳ ಹಸ್ತಪ್ರತಿಗಳ ಜೊತೆಗೆ ಸೇರಿಹೋಗಿದ್ದ ಕನ್ನಡ ಲಿಪಿಯಲ್ಲಿ ಇದ್ದ ತುಳು ಪಾಡªನಗಳ ಹಸ್ತಪ್ರತಿ ನನ್ನ ಗಮನ ಸೆಳೆಯಿತು. ಅವು ಕಾಂತೇರಿ ಜುಮಾದಿ ಮತ್ತು ಮಲರಾಯ ದೈವದ ಸಂದಿಗಳು ಎಂದು ಗುರುತಿಸಿದೆ. ಅವುಗಳ ಅಧ್ಯಯನಕ್ಕಾಗಿ ನಾನು ಸಲ್ಲಿಸಿದ ಯೋಜನೆಗೆ ಜರ್ಮನ್ ಸಂಶೋಧನಾ ಸಂಸ್ಥೆ “ಡಾಡ್’ ಒಪ್ಪಿಗೆ ಕೊಟ್ಟ ಕಾರಣ, 1993 ಜುಲೈ-ಸೆಪ್ಟಂಬರ್ ಮೂರು ತಿಂಗಳ ಕಾಲ ತ್ಯೂಬಿಂಗನ್ ವಿವಿಯ ಇಂಡಾಲಜಿ ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಾಪಕನಾಗಿ ಹೋದೆ. ಆಗ ಪ್ರೊ. ಬ್ರೂಕ್ನರ್ ಪ್ರಾಧ್ಯಾಪಕರಾಗಿ ತ್ಯೂಬಿಂಗನ್ ವಿವಿಗೆ ಬಂದಿದ್ದರು. ಅಲ್ಲಿ ತುಳು ಪಾಡªನದ ಅಧ್ಯಯನ ನಡೆಸುವುದರ ಜೊತೆಗೆ ಅಲ್ಲಿನ ಗ್ರಂಥಾಲಯದಲ್ಲಿ ಇದ್ದ ಕನ್ನಡ ಹಸ್ತಪ್ರತಿಗಳನ್ನು ವಿವರವಾಗಿ ಓದಿ ಟಿಪ್ಪಣಿ ಮಾಡಿಕೊಂಡೆ. ಹೆಚ್ಚಿನ ಕನ್ನಡ ಹಸ್ತಪ್ರತಿಗಳು ಮೋಗ್ಲಿಂಗ್ ಮತ್ತು ವೈಗ್ಲೆ ಅವರದ್ದು ಆಗಿದ್ದವು; ಅವರ ಕನ್ನಡ ಅಭ್ಯಾಸದ ಟಿಪ್ಪಣಿಗಳೂ ಸಾಕಷ್ಟು ಇದ್ದವು. ಈ ಕೆಲಸಗಳ ಜೊತೆಗೆ ಬ್ರೂಕ್ನರ್ ಜರ್ಮನ್ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವ ಹೊಸ ಉಪಕ್ರಮವನ್ನು ಆರಂಭಿಸಿದರು. ನಾನು ಜರ್ಮನ್ ಆಸಕ್ತರಿಗೆ ಕನ್ನಡ ಭಾಷೆಯನ್ನು ಕಲಿಸಲು ಆರಂಭಿಸಿದ್ದು 1993ರಲ್ಲಿ ತ್ಯೂಬಿಂಗನ್ ವಿವಿಯಲ್ಲಿ. ಅದೊಂದು ಪ್ರಾಥಮಿಕ ಹಂತದ ಸಣ್ಣ ಪ್ರಯತ್ನ ಆಗಿತ್ತು.
Related Articles
Advertisement
2009-2012ರ ಅವಧಿಯಲ್ಲಿ ಬೇರೆ ಬೇರೆ ತರಗತಿಗಳಲ್ಲಿ ಕರ್ನಾಟಕ ಅಧ್ಯಯನ, ಕನ್ನಡ ಸಾಹಿತ್ಯ ಚರಿತ್ರೆ (ಅನ್ನೆತ್ತೆ), ಕರ್ನಾಟಕದ ಮೌಖೀಕ ಪರಂಪರೆ, ಕರ್ನಾಟಕದ ಧಾರ್ಮಿಕ ಪರಂಪರೆ (ಕತ್ರಿನ್ ಹೊಲ್ಜ್, ಲಲಿತ ದೀಕರ್ಸ್), ಸಾಂಸ್ಕೃತಿಕ ಅನನ್ಯತೆ (ಪೌಲಿನೆ)- ಇಂತಹ ವಿಷಯಗಳನ್ನು ನಾನೇ ಸಿಲೆಬಸ್ ತಯಾರಿಸಿ ಪಾಠಮಾಡಿದೆ. ವಿದ್ಯಾರ್ಥಿಗಳಿಗೆ ಇಮೈಲ್ ಮೂಲಕ ಮುಂಚಿತವಾಗಿ ಮಾಹಿತಿಗಳನ್ನು ಕಳುಹಿಸುತ್ತಿದ್ದೆ. ಲೇಖನಗಳನ್ನು ಪ್ರತಿಮಾಡಿ ಕೊಡುತ್ತಿದ್ದೆ. ಒಂದು ಸೆಮಿಸ್ಟರ್‌ಗೆ ಬೇಕಾದ ಸಿಲೆಬಸ್‌ನ್ನು ರೂಪಿಸುವುದು, ಇಂಗ್ಲಿಷ್‌ನಲ್ಲಿ ಪಾಠಮಾಡುವುದು, ಮೂಲಪಠ್ಯಗಳನ್ನು ಕನ್ನಡದಲ್ಲೇ ಓದುವುದು, ಪರೀಕ್ಷೆಗಳನ್ನು ನಡೆಸುವುದು- ಈ ಎಲ್ಲ ವಿಷಯಗಳಲ್ಲೂ ಪ್ರಾಧ್ಯಾಪಕರು ಸ್ವತಂತ್ರರು.
ನಾನು ಅಲ್ಲಿ ಅತಿಥಿ ಪ್ರಾಧ್ಯಾಪಕನಾಗಿ ಇದ್ದ ಕಾಲದಲ್ಲಿ 2012 ಫೆಬ್ರವರಿ 5ರಂದು ಒಂದು ಅಂತಾರಾಷ್ಟ್ರೀಯ ಕಮ್ಮಟವನ್ನು ನಡೆಸಿದೆವು. ಪ್ರೊ. ಬ್ರೂಕ್ನರ್, ತಮಿಳುನಾಡಿನ ಜಾನಪದ ವಿದ್ವಾಂಸ ಡಾ. ಮುತ್ತುಕುಮಾರಸ್ವಾಮಿ ಮತ್ತು ನಾನು ಸಂಯೋಜಕರಾಗಿ ನಡೆಸಿದ ಕಮ್ಮಟ- New Perspectives on Gender and Transgender in South Asia. ಈ ಕಮ್ಮಟದಲ್ಲಿ ನಾನು ಮಂಡಿಸಿದ ಪ್ರಬಂಧ: Transgression of Genders in a Classical Kannada Epic Pampabharata. ಪಂಪಭಾರತದ ಭೀಷ್ಮ ಮತ್ತು ಅಂಬೆ ಪಾತ್ರಗಳನ್ನು ಮುಖಾಮುಖೀಯಾಗಿಸಿ ಮೂರನೆಯ ಲಿಂಗದ ಪರಿಕಲ್ಪನೆಯ ನೆಲೆಯಲ್ಲಿ ರಚಿಸಿದ ಪ್ರಬಂಧವು ವಿದ್ವಾಂಸರ ಗಮನಸೆಳೆಯಿತು. ಅನೇಕರು ಬಂದು ಪಂಪಭಾರತದ ಇಂಗ್ಲಿಷ್ ಅನುವಾದ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದರು. “ಅನುವಾದ ಆಗಿಲ್ಲ’ ಎಂದು ಸಂಕೋಚದಿಂದ ಹೇಳಿದೆ. ಭಾರತದ ಅನೇಕ ಭಾಷೆಗಳ ಕ್ಲಾಸಿಕಲ್ ಪಠ್ಯಗಳು ಇಂಗ್ಲಿಷ್‌ಗೆ ಅನುವಾದವಾಗಿ ವಿದ್ವಾಂಸರ ಓದಿಗೆ ದೊರೆತಿವೆ. ಊರಿಗೆ ಬಂದೊಡನೆಯೇ ಪ್ರೊ. ಸಿ. ಎನ್. ರಾಮಚಂದ್ರನ್ ಅವರಲ್ಲಿ ವಿನಂತಿಮಾಡಿದೆ- “ಹಳಗನ್ನಡ ಕಾವ್ಯಗಳ ಆಯ್ದಭಾಗಗಳ ಇಂಗ್ಲಿಷ್ ಅನುವಾದದ ಪಠ್ಯವೊಂದನ್ನು ನಿರ್ಮಾಣ ಮಾಡೋಣ’ ಎಂದು. ಅನುವಾದ ಕ್ಷೇತ್ರದಲ್ಲಿ ವಿಶೇಷ ಅನುಭವಿಗಳಾದ ಪ್ರೊ. ರಾಮಚಂದ್ರನ್ ಒಪ್ಪಿಕೊಂಡರು. ಎರಡು ವರ್ಷಗಳ ನಮ್ಮ ಸತತ ಸಮಾಲೋಚನೆ ಮತ್ತು ಕೆಲಸಗಳ ಹಂಚುವಿಕೆಯ ಫಲವಾಗಿ ಪ್ರಾಚೀನ ಕನ್ನಡ ಸಾಹಿತ್ಯದ ಒಂದು ಉಪಯುಕ್ತ ರೀಡರ್ ಕನ್ನಡ ವಿವಿ ಹಂಪಿಯಿಂದ ಪ್ರಕಟವಾಯಿತು: Classical Kannada Poetry and Prose: A Reader (C N Ramachandran, B A Viveka Rai, 2015). ಈ ಗ್ರಂಥದಲ್ಲಿ ಹಲ್ಮಿಡಿ ಮತ್ತು ಬಾದಾಮಿ ಶಾಸನ, ಕವಿರಾಜಮಾರ್ಗ, ವಡ್ಡಾರಾಧನೆ, ಚಾವುಂಡರಾಯ ಪುರಾಣ, ಪಂಚತಂತ್ರ ಮತ್ತು ಕವಿಗಳಾದ ಪಂಪ, ಪೊನ್ನ, ರನ್ನ, ನಾಗವರ್ಮ, ನಾಗಚಂದ್ರ, ಶಾಂತಿನಾಥ, ನಯಸೇನ, ನೇಮಿಚಂದ್ರ, ರುದ್ರಭಟ್ಟ, ಬ್ರಹ್ಮಶಿವ, ಜನ್ನ ಮತ್ತು ಆಂಡಯ್ಯರ ಕವಿಕಾವ್ಯ ಪರಿಚಯ ಹಾಗೂ ಅವರ ಕೃತಿಭಾಗಗಳ ಇಂಗ್ಲಿಷ್ ಅನುವಾದ ಇದೆ. ಈ ರೀಡರ್ ಅನ್ನು ಜರ್ಮನಿಯಲ್ಲಿ ಕನ್ನಡ ಶಿಬಿರಗಳ ವಿದ್ಯಾರ್ಥಿಗಳು ಮುಖ್ಯ ಆಕರಗ್ರಂಥವಾಗಿ ಬಳಸುತ್ತಿ¨ªಾರೆ. ಯುರೋಪಿನಲ್ಲಿ ಪ್ರಾಚೀನ ಕನ್ನಡ ಕಾವ್ಯಗಳ ಈ ಇಂಗ್ಲಿಷ್ ರೀಡರ್ ಕನ್ನಡದ ಸಣ್ಣ ಮಾನಸ್ತಂಭವಾಗಿ ಜನಪ್ರಿಯವಾಗಿದೆ.
ಪ್ರಿಯ ಪ್ರೊಫೆಸರ್, ನಮಸ್ಕಾರ! ಹೇಗೆ ಇದ್ದೀರಿ?
ನಮ್ಮ ಸಣ್ಣ ಕನ್ನಡ ಗುಂಪಿನ ಮೊತ್ತಮೊದಲನೆಯ ತರಗತಿಯನ್ನು ನಾನು ನೆನೆದುಕೊಳ್ಳುತ್ತಿದ್ದೇನೆ: ಲೀಸಾ, ಸ್ಟೆಫನ್, ಫ್ರೆಡೆರಿಕೆ, ಮರಿಯೊನ್, ಲೌರ ಮತ್ತು ನಾನು-ನಾವು ಕನ್ನಡದಲ್ಲಿ ಮೊದಲ ವಾಕ್ಯಗಳನ್ನು ಮಾತನಾಡಲು ಪ್ರಯತ್ನಿಸುತ್ತಿದ್ದೆವು: “ನಾನು ಕನ್ನಡ ವಿದ್ಯಾಥಿ ìನಿ. ನಿಮ್ಮ ಹೆಸರು ಏನು?’ ನಾವು ಕಲಿಯಬೇಕಾದ ಕನ್ನಡ ಅಕ್ಷರಮಾಲೆಯನ್ನು ಅದರ ಸ್ವರ ಮತ್ತು ವ್ಯಂಜನ ಅಕ್ಷರಗಳನ್ನು ನೋಡಿದಾಗ ಹೆದರಿಕೊಂಡೆ. ಈ ಕನ್ನಡವನ್ನು ಓದಲು ಮತ್ತು ಬರೆಯಲು ಅರ್ಧ ಶತಮಾನ ಬೇಕಾಗಬಹುದು ಅಂದುಕೊಂಡೆ. ಆದರೆ ನಮಗೆ ಯಾವುದೇ ಸಂಶಯಗಳು ಸಮಸ್ಯೆಗಳು ಬಂದರೂ ನೀವು ಅವನ್ನು ಕೂಡಲೇ ಸುಲಭವಾಗಿ ನಿವಾರಣೆ ಮಾಡಿದಿರಿ. ಮೊದಲನೆಯ ದಿನದಿಂದಲೇ ನಿಮ್ಮ ತರಗತಿಗಳಲ್ಲಿ ವಿದ್ಯಾರ್ಥಿ ಆಗುವುದು ನನಗೆ ಬಹಳ ಖುಷಿಯ ಸಂಗತಿಯಾಗಿತ್ತು. ನಾನು ನನ್ನ ಪ್ರಾಥಮಿಕ ಶಾಲೆಯಿಂದ ತೊಡಗಿ ವಿಶ್ವವಿದ್ಯಾಲಯದವರೆಗೆ ಹತ್ತು ಭಾಷೆಗಳನ್ನು ಮೂವತ್ತು ಅಧ್ಯಾಪಕರಿಂದ ಕಲಿತಿದ್ದೇನೆ. ಆ ಎಲ್ಲಾ ಭಾಷಾ ಅಧ್ಯಾಪಕರಲ್ಲಿ ಅತ್ಯಂತ ಉಲ್ಲಾಸದಿಂದ ಪ್ರೀತಿಯಿಂದ ತಾಳ್ಮೆಯಿಂದ ಭಾಷೆಯನ್ನು ಕಲಿಸಿದ ನೀವು ಮೆಚ್ಚುಗೆಯವರು. ವಿದ್ಯಾರ್ಥಿಗಳು ಹೊಸ ಭಾಷೆಯನ್ನು ಕಲಿಯುವಾಗ ಒತ್ತಡಕ್ಕೆ ಒಳಗಾದಾಗ, ನೀವು ಅವರನ್ನು ಉತ್ತೇಜಿಸುತ್ತೀರಿ, ಪ್ರೋತ್ಸಾಹಿಸುತ್ತೀರಿ. ಇದು ನಾನು ನಿಮ್ಮಲ್ಲಿ ಕಂಡ ವಿಶಿಷ್ಟ ಗುಣ. ನೀವು ವಿದ್ಯಾರ್ಥಿಗಳ ದುರ್ಬಲ ಅಂಶಗಳ ಬದಲು ಅವರ ಪ್ರಬಲ ಅಂಶಗಳ ಬಗ್ಗೆ ಗಮನ ಕೊಡುತ್ತೀರಿ.
– ಮರ್ತಿನ,
ಕನ್ನಡ ವಿದ್ಯಾರ್ಥಿನಿ ಪ್ರಿಯ ಪ್ರೊಫೆಸರ್,
ಇಲ್ಲಿ ವ್ಯೂತ್ಸ್ìಬುರ್ಗ್‌ನಲ್ಲಿ ನಿಮ್ಮ ಮೊದಲನೆಯ ಸೆಮಿಸ್ಟರ್ ನನ್ನ ಕನ್ನಡದ ಮೊದಲನೆಯ ಸೆಮಿಸ್ಟರ್ ಕೂಡಾ ಆಗಿತ್ತು. ಶೈಕ್ಷಣಿಕವಾಗಿ ಅಗತ್ಯವಾದ ಎರಡು ಸೆಮಿಸ್ಟರ್‌ಗಳನ್ನು ಕನ್ನಡದಲ್ಲಿ ಮುಗಿಸಿ ಮತ್ತೆ ಬೇರೆ ವಿಷಯವನ್ನು ತೆಗೆದುಕೊಳ್ಳುವ ಯೋಜನೆ ನನ್ನದಾಗಿತ್ತು. ಆದರೆ, ನಿಮ್ಮ ಕನ್ನಡ ಪಾಠಗಳನ್ನು ಕೇಳಿದ ಮೇಲೆ ಅವನ್ನು ಮಿಸ್ ಮಾಡಿಕೊಳ್ಳಲು ಮನಸ್ಸಾಗಲಿಲ್ಲ. ಈಗ ನಿಮ್ಮ ಕನ್ನಡ ಪಾಠದ ಆರು ಸೆಮೆಸ್ಟರ್‌ಗಳನ್ನು ಮುಗಿಸಿದ್ದೇನೆ; ನಾನು ಅಂತಿಮ ಪರೀಕ್ಷೆಗೂ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಮತ್ತು ಯೂರೋಪಿನ ಪರಂಪರೆಗಳ ಎಲ್ಲಾ ಒಳ್ಳೆಯ ಅಂಶಗಳನ್ನು ಒಳಗೊಂಡ ನಿಮ್ಮ ಅಧ್ಯಾಪನಕ್ಕಾಗಿ, ನಿಮ್ಮ ಅಪಾರ ಸಹನೆಯ ಗುಣಕ್ಕಾಗಿ, ಪ್ರತೀದಿನ ನಮ್ಮ ಬಗ್ಗೆ ನೀವು ತೋರಿಸಿದ ಅಕ್ಕರೆಗಾಗಿ ನಿಮಗೆ ನನ್ನ ಕೃತಜ್ಞತೆಗಳು.
– ಲೀಸಾ,
ಕನ್ನಡ ವಿದ್ಯಾರ್ಥಿನಿ ಬಿ. ಎ. ವಿವೇಕ ರೈ