ಹೊಸದಿಲ್ಲಿ: ಕರ್ನಾಟಕ ಸರಕಾರವು ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಲು ಮುಂದಾಗಿರುವುದು, ಡಿಐಜಿ ರೂಪಾ ವರ್ಗಾವಣೆ, ಗೋರಕ್ಷಣೆ ಹೆಸರಲ್ಲಿ ಹಲ್ಲೆ, ಹತ್ಯೆ ವಿಚಾರಗಳೇ ಗುರುವಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದವು. ಈ ವಿಚಾರಗಳಿಗೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಭಾರೀ ವಾಗ್ವಾದ ನಡೆಯಿತು. ಇನ್ನು ಲೋಕಸಭೆಯಲ್ಲಿ ರೈತರ ಆತ್ಮಹತ್ಯೆ ಕುರಿತು ವಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದ ಕಾರಣ, ಕಲಾಪ ವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, “ಪ್ರಧಾನಿ ಮೋದಿ ಅವರು ಗೋರಕ್ಷಣೆ ಹೆಸರಿನ ಹತ್ಯೆ ಬಗ್ಗೆ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ವಿಎಚ್‌ಪಿ, ಬಜರಂಗದಳದ ಕಾರ್ಯಕರ್ತರು ಜನರ ಹತ್ಯೆಯಲ್ಲಿ ತೊಡಗಿದ್ದರೆ ಅದನ್ನು ತಡೆಯಲು ಮೋದಿ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿ ಬೆಳಗ್ಗೊಂದು, ರಾತ್ರಿಯೊಂದು ಮಾತಾಡುತ್ತಾರೆ. ಮೊದಲು ಇಂತಹ ದ್ವಿಮುಖ ನೀತಿ ನಿಲ್ಲಿಸಲಿ,’ ಎಂದರು. ಜತೆಗೆ, ಪ್ರಸ್ತುತ ಸಮಾಜದಲ್ಲಿ ನೈಜ ಹಿಂದೂ ಮತ್ತು ನಕಲಿ ಹಿಂದೂ ನಡುವೆ ಹೋರಾಟ ನಡೆಯುತ್ತಿದೆ ಎಂದೂ ಸಿಬಲ್ ಹೇಳಿದರು. ಇದಕ್ಕೆ ಜೆಡಿಯು ನಾಯಕ ಶರದ್ ಯಾದವ್ ಅವರೂ ಧ್ವನಿಗೂಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್, “1984ರಲ್ಲಿ ನಡೆದ ಸಿಕ್ಖ್ ವಿರೋಧಿ ಗಲಭೆಯು ದೇಶದ ಇತಿಹಾಸದಲ್ಲೇ ಅತಿದೊಡ್ಡ ಲಿಂಚಿಂಗ್(ಗುಂಪಿನ ದಾಳಿ)’ ಎಂದರು. ಈ ನಡುವೆ, ಕೇಂದ್ರ ಸಚಿವ ಅರುಣ್ ಜೇಟಿÉ ಅವರು, “ಗೋವಿನ ವಿಚಾರದಲ್ಲಿ ವ್ಯಕ್ತಿಗಳನ್ನು ಕೊಲ್ಲುವುದನ್ನು ಒಪ್ಪಲಾಗದು. ತಪ್ಪಿತಸ್ಥರ ವಿರುದ್ಧ ರಾಜ್ಯ ಸರಕಾರಗಳು ಕಠಿನ ಕ್ರಮ ಕೈಗೊಳ್ಳಬೇಕು’ ಎಂದರು.
ರೂಪಾ ವರ್ಗಾವಣೆ ಪ್ರಸ್ತಾವ: ಇದೇ ವೇಳೆ, ಕರ್ನಾಟಕದ ಡಿಐಜಿ ರೂಪಾ ಪ್ರಕರಣವನ್ನು ಪ್ರಸ್ತಾವಿಸಿದ ಬಿಜೆಪಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಮೇಲೆ ಹರಿಹಾಯ್ದಿದ್ದು ಕಂಡು ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, “ಉತ್ತರಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಜಗಳವಾಡಿದ್ದಕ್ಕೆ ಅಲ್ಲಿನ ಮಹಿಳಾ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಬಿಜೆಪಿಗೆ ಇದನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ’ ಎಂದರು.
ಧ್ವಜದ ವಿಚಾರವೇಕೆ ಮಾತಾಡುತ್ತಿಲ್ಲ?: ಚರ್ಚೆಯ ವೇಳೆ ಕನ್ನಡ ಧ್ವಜದ ವಿಚಾರವೆತ್ತಿದ ಬಿಜೆಪಿಯ ಪ್ರಭಾತ್ ಜಾ, “ಕರ್ನಾಟಕ ಸರಕಾರವು ಪ್ರತ್ಯೇಕ ಧ್ವಜ ರೂಪಿಸಲು ಮುಂದಾಗಿರುವ ಬಗ್ಗೆ ಕಾಂಗ್ರೆಸ್ ಏಕೆ ಮೌನಕ್ಕೆ ಶರಣಾಗಿದೆ’ ಎಂದು ಪ್ರಶ್ನಿಸಿದರು. ದೇಶವು ಎಲ್ಲರಿಗೆ ಸೇರಿದ್ದು, ಎಲ್ಲರೂ ಸಮಾನ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು’ ಎಂದರು.
ಹಾರಾಟ ನಿರ್ಬಂಧ ಹೇರುವಂತಿಲ್ಲ
ಸಂಸದರೂ ಸೇರಿದಂತೆ ಯಾರ ಮೇಲೂ ವಿಮಾನಯಾನ ಸಂಸ್ಥೆಗಳು ಹಾರಾಟ ನಿರ್ಬಂಧ ಹೇರುವಂತಿಲ್ಲ ಎಂದು ರಾಜ್ಯಸಭೆ ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಹೇಳಿದ್ದಾರೆ. ಏರ್‌ಇಂಡಿಯಾ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಹೇರಿದ್ದ ನಿರ್ಬಂಧದ ಕುರಿತು ಎಸ್ಪಿ ಸದಸ್ಯ ನರೇಶ್ ಅಗರ್ವಾಲ್ ಅವರು ರಾಜ್ಯಸಭೆಯಲ್ಲಿ ಪ್ರಸ್ತಾವಿಸಿದರು. ವಿಮಾನಯಾನ ಸಂಸ್ಥೆಗಳಿಗೆ ಅಂಥದ್ದೊಂದು ಹಕ್ಕಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುರಿಯನ್, “ನೀವು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದೀರಿ. ಸಂಸದರು ತಪ್ಪು ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೇ ಹೊರತು, ಹಾರಾಟಕ್ಕೆ ನಿರ್ಬಂಧ ಹೇರುವ ಅಧಿಕಾರ ವೈಮಾನಿಕ ಸಂಸ್ಥೆಗಳಿಗೆ ಇರುವುದಿಲ್ಲ. ಇದನ್ನು ಸರಕಾರ ಗಮನಿಸಲಿ’ ಎಂದರು.