Advertisement

Kannada Cinema; ತೆರೆ ಹಿಂದಿನ ಹೀರೊ: ದೇಸಿ ಕಥೆಗಳಲ್ಲಿ ‘ಜಡೇಶ್’ ಮಿಂಚು

03:23 PM Jan 12, 2024 | Team Udayavani |

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ದರ್ಶನ್‌ ಅಭಿನಯದ “ಕಾಟೇರ’ ಸಿನಿಮಾ ಗಳಿಕೆ ವಿಷಯದಲ್ಲಿ ಬಾಕ್ಸಾಫೀಸ್‌ ನಲ್ಲಿ ಜೋರಾಗಿ ಸೌಂಡ್‌ ಮಾಡುತ್ತಿದೆ. ಮತ್ತೂಂದೆಡೆ ಸಿನಿಮಾದ ನೋಡಿದ ಪ್ರೇಕ್ಷಕರು, ವಿಮರ್ಶಕರು “ಕಾಟೇರ’ ಸಿನಿಮಾದ ಕಥಾಹಂದರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

Advertisement

ಅಂದಹಾಗೆ, “ಕಾಟೇರ’ ಸಿನಿಮಾಕ್ಕೆ ಇಂಥದ್ದೊಂದು ಅಪ್ಪಟ ದೇಸಿ ಕಥೆಯನ್ನು ಬರೆದವರು ನಿರ್ದೇಶಕ ಕಂ ಚಿತ್ರಕಥೆ ಬರಹಗಾರ ಜಡೇಶ್‌ ಕೆ. ಹಂಪಿ. ತಮ್ಮ “ಬದುಕಿನ ಕಥೆ’ಯ ಬಗ್ಗೆ ಮಾತನಾಡುವ ಜಡೇಶ್‌ ಕೆ. ಹಂಪಿ, “ಹಂಪಿಯ ಬಳಿಯಿರುವ ಒಂದು ಚಿಕ್ಕ ಹಳಿ ನಮ್ಮೂರು. ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದೇನೆ. ಆರಂಭದಿಂದಲೂ ಹಳ್ಳಿಯ ಕಥೆಗಳು, ಈ ಮಣ್ಣಿನ ಕಥೆಗಳು ಇಲ್ಲಿನ ಜನರಿಗೆ ಬಹು ಬೇಗ ಕನೆಕ್ಟ್ ಆಗುತ್ತದೆ ಎಂಬುದು ನನ್ನ ಬಲವಾದ ನಂಬಿಕೆ. ಆ ನಂಬಿಕೆ ಈಗ ನಿಜವಾಗುತ್ತಿದೆ. ನಾನು ಬರೆದಿರುವ “ಗುರುಶಿಷ್ಯರು’ ಕಥೆ ಆದ ಮೇಲೆ, ಈ ನೆಲದ ಸೊಗಡಿನ “ಕಾಟೇರ’ ಕಥೆ ಗೆದ್ದಿದೆ. ಮೊದಲೆಲ್ಲ ಹಳ್ಳಿಯಲ್ಲಿ ಹುಟ್ಟಿದ್ದೆ ಶಾಪ ಎಂದು ಭಾವಿಸುತ್ತಿದ್ದೆ. ಆದರೆ ಈಗ ಆ ಹಳ್ಳಿಯಲ್ಲಿ ‌ಹುಟ್ಟಿದ್ದೇ ನನಗೊಂದು ವರ ಅನಿಸುತ್ತಿದೆ. ಹಳ್ಳಿಯಲ್ಲಿ ನಾನು ಕಂಡ ಅನುಭವಗಳೇ ಇಂಥ ಕಥೆಗಳು ಹುಟ್ಟಲು ಕಾರಣವಾಗುತ್ತಿವೆ’ ಎನ್ನುತ್ತಾರೆ.

“ಕಾಟೇರ’ ಚಿತ್ರದ ಕಥೆ ನೋಡುಗರ ಮನಗೆದ್ದಿದೆ. ಈ ಕಥೆ ಹುಟ್ಟಿನ ಬಗ್ಗೆ ಕೇಳಿದಾಗ, “ನನ್ನ ಮುತ್ತಜ್ಜಿ ನೂರಾಐದು ವರ್ಷ ಬದುಕಿದ್ದಳು, ಮೊಮ್ಮಕ್ಕಳಿಗೆ ಕಥೆ ಹೇಳುತ್ತಾ ಟೈಮ್‌ ಪಾಸ್‌ ಮಾಡ್ತಿದ್ದಳು. ಅವಳು ಹೇಳಿದ್ದ ಒಂದು ಕಥೆಯಲ್ಲಿ “ಕಾಟೇರ’ ಚಿತ್ರಕ್ಕೆ ಕಥೆಯಾಗುವಷ್ಟು ಸರಕಿದೆ ಅಂತ ಅಂದು ನಾನು ಎಣಿಸಿರಲಿಲ್ಲ. ಅದೇ ಒಂದು ಎಳೆ ಇಷ್ಟು ದೊಡ್ಡ ಸಿನಿಮಾವಾಯಿತು’ ಎಂದು ಆಶ್ಚರ್ಯಪಡುತ್ತಾರೆ. ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ ದಾರಿಯನ್ನ ಆದರ್ಶವಾಗಿಟ್ಟು ಕೊಂಡಿರುವ ಜಡೇಶ್‌, “ಇನ್ನಷ್ಟು ಅಪ್ಪಟ ಕನ್ನಡ ಮಣ್ಣಿನ ಕಥೆಗಳನ್ನು ಕೊಡಬೇಕು. ಅದನ್ನು ಆಸ್ವಾಧಿಸುವ, ಆನಂದಿಸುವ ದೊಡ್ಡ ಪ್ರೇಕ್ಷಕ ವರ್ಗವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next