ವಿನೋದ್ ಪ್ರಭಾಕರ್ ಈಗ ಸದ್ಯಕ್ಕೆ ಒಂದರ ಮೇಲೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. “ಟೈಸನ್’ ನಂತರ “ಕ್ರ್ಯಾಕ್’ ಎಂಬ ಚಿತ್ರ ಮಾಡಿದ ಅವರು, ಆ ಚಿತ್ರ ಬಿಡುಗಡೆ ಮುನ್ನವೇ “ರಗಡ್’ ಎಂಬ ಚಿತ್ರಕ್ಕೂ ಹೀರೋ ಆದರು. ಆ ಚಿತ್ರವೀಗ ಚಿತ್ರೀಕರಣದ ಅಂತಿಮ ಹಂತದಲ್ಲಿದೆ. ಈಗ ವಿನೋದ್ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಅಂದ ಹಾಗೆ, ಅವರು ಒಪ್ಪಿಕೊಂಡಿರುವ ಆ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಅವರ ಶಿಷ್ಯ ರವಿ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲಿ ಇವರಿಗಿದು ಮೊದಲ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ನಿರ್ದೇಶಕರದ್ದೇ. ಇನ್ನು, ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈವರೆಗೆ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿರುವ ಕುಮಾರ್ ಅವರಿಗೆ ಮೊದಲ ನಿರ್ಮಾಣದ ಚಿತ್ರವಿದು. ಬಹುತೇಕ ತೆಲುಗು ಚಿತ್ರರಂಗದ ತಂತ್ರಜ್ಞರೇ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಕುಮಾರ್ ಮಾತು. ವಿನೋದ್ ಪ್ರಭಾಕರ್ ಅವರ ಇಮೇಜ್‌ಗೆ ತಕ್ಕಂತೆ ಇರುವ ಕಥೆ ಹೆಣೆದಿದ್ದು, ಅವರನ್ನು ಈ ಚಿತ್ರದ ಮೂಲಕ ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಕನ್ನಡದ ಮಟ್ಟಿಗೆ ಹೊಸ ಶೈಲಿಯ, ತಾಂತ್ರಿಕತೆಯಲ್ಲೂ ವಿಭಿನ್ನತೆ ಕಾಪಾಡಿಕೊಂಡು ಮಾಡುತ್ತಿರುವ ಚಿತ್ರವಿದು ಎಂಬುದು ಕುಮಾರ್ ಹೇಳಿಕೆ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಆ್ಯಕ್ಷನ್, ಲವ್, ಎಮೋಷನ್ಸ್, ಇರುವ ಕಥಾಹಂದರ ಇಲ್ಲಿರಲಿದೆ. ತೆಲುಗಿನ ನುರಿತ ತಂತ್ರಜ್ಞರ ತಂಡ ಸೇರಿ ಮಾಡುತ್ತಿರುವ ಕನ್ನಡ ಚಿತ್ರವಿದು. ಹಾಗಂತ ಇದು ಯಾವುದೇ ಚಿತ್ರದ ರಿಮೇಕ್ ಅಲ್ಲ, ಪಕ್ಕಾ ಸ್ವಮೇಕ್ ಸಿನಿಮಾ.
ಚಿತ್ರಕ್ಕೆ ಮಣಿ ಶರ್ಮ ಅವರು ಸಂಗೀತ ನೀಡುತ್ತಿದ್ದಾರೆ. ಶ್ಯಾಮ್ ಕೆ. ನಾಯ್ಡು ಛಾಯಾಗ್ರಹಣ ಮಾಡಲಿದ್ದಾರೆ. ಬೆಂಗಳೂರು, ಸಕಲೇಶಪುರ ಸೇರಿದಂತೆ ವಿದೇಶದಲ್ಲೂ ಚಿತ್ರೀಕರಿಸುವ ಯೋಚನೆ ಇದೆ. ಮಾರ್ಚ್ 23 ಕ್ಕೆ ಪೂಜೆ ನಡೆಯಲಿದ್ದು, ಏಪ್ರಿಲ್ 10 ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ ಎಂಬುದು ನಿರ್ಮಾಪಕರ ಮಾತು.
ಸದ್ಯ ವಿನೋದ್ ಪ್ರಭಾಕರ್ ಅವರು “ರಗಡ್’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಇದರೊಂದಿಗೆ “ಗ್ಯಾಂಬ್ಲಿರ್’ ಎಂಬ ಚಿತ್ರವನ್ನೂ ಅವರು ಮಾಡಲಿದ್ದಾರೆ. ಈಗ ಹೊಸ ಚಿತ್ರಕ್ಕೂ ತಯಾರಿ ನಡೆದಿದೆ. ಈ ಎರಡರ ಪೈಕಿ ಯಾವುದು ಮೊದಲಾಗುತ್ತೆ ಎಂಬುದನ್ನು ಕಾದು ನೋಡಬೇಕು.