Advertisement

ಸಂಗೀತ ಸನ್ನಿದಾನ, ರವಿ ಕಾಣದ್ದನ್ನು ಸಂಗೀತ ಕಂಡಾಗ

12:57 PM May 30, 2018 | Harsha Rao |

– ನಮ್ಮೆಜಮಾನ್ರ ವಿಲನ್‌ ಪಾತ್ರ ನಂಗಿಷ್ಟ
– ಹೆಣ್ಣು ಮಗು ಆಗ್ಲಿ ಅಂತ ಆಸೆಪಟ್ಟಿದ್ದೆ…
– ಒಂದು ನಿಮಿಷವೂ ಖಾಲಿ ಕೂರೋಲ್ಲ…

Advertisement

ಸಂಗೀತಾ ಗುರುರಾಜ್‌ ಎಂಬ ಹೆಸರು ಕನ್ನಡ ಸಂಗೀತಪ್ರಿಯರಿಗೆ, ಟೀವಿ ವೀಕ್ಷಕರಿಗೆ ಚಿರಪರಿಚಿತ. ಇವರು ಮೊದಮೊದಲಿಗೆ ಟೀವಿಯಲ್ಲಿ ಕಾಣಿಸಿಕೊಂಡಾಗ, “ಯಾರು ಈಕೆ? ಮಂಜುಳ ಗುರುರಾಜ್‌ ಇದ್ದ ಹಾಗೆ ಇದ್ದಾಳಲ್ಲ?’ ಎನ್ನುವ ಅನುಮಾನ ಹುಟ್ಟಿಸಿದ ಪ್ರತಿಭೆ. ಬಳಿಕ ಇವರು ಹಿನ್ನೆಲೆ ಗಾಯಕಿ ಮಂಜುಳ ಗುರುರಾಜ್‌ ದಂಪತಿ ಮಗಳು ಎಂದು ತಿಳಿದಾಗ “ತಾಯಿಗೆ ತಕ್ಕ ಮಗಳು’ ಎಂದು ಕೊಂಡಾಡಿದ್ದರು. ಗಾಯಕಿಯಾಗಿ, ನಿರೂಪಕಿಯಾಗಿ ಯಶಸ್ವಿಯಾದ ಸಂಗೀತಾ ಕಾರ್ಪೊರೇಟ್‌ ಉದ್ಯೋಗಿ. ಸಂಗೀತಾ ಮತ್ತು ಚಿತ್ರನಟ ರವಿಶಂಕರ್‌ ಪ್ರೀತಿಸಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾದವರು. ಈಗ ಅವರ ದಾಂಪತ್ಯಕ್ಕೆ ಬರೋಬ್ಬರಿ 15 ವರ್ಷ. ಅವರ ಸಂಸಾರದ ಕಥೆಯನ್ನು ಅವರೇ ಹೇಳಿಕೊಂಡಿದ್ದಾರೆ…

– ಕಳೆದ ವಾರವಷ್ಟೇ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದೀರಿ. ನಿಮ್ಮ ದಾಂಪತ್ಯ ಜೀವನದ ಅತ್ಯುತ್ತಮ ಸಂಗತಿ ಬಗ್ಗೆ ಹೇಳಿ…

ಮದುವೆಯಾಗಿ 15 ವರ್ಷ ಕಳೆದಿದೆ ಅಂತನ್ನಿಸುತ್ತಲೇ ಇಲ್ಲ. ನಿನ್ನೆ- ಮೊನ್ನೆಯಷ್ಟೇ ಮದುವೆಯಾಗಿದ್ದೇವೆ ಅಂತನ್ನಿಸುತ್ತದೆ. ಅದೇ ನಮ್ಮ ದಾಂಪತ್ಯದ ಅತ್ಯುತ್ತಮ ಸಂಗತಿ. ನಮಗಿಬ್ಬರಿಗೂ ಸಮಾನ ಆಸಕ್ತಿಗಳು ಬಹಳ ಕಡಿಮೆ. ಆದರೆ, ಐತಿಹಾಸಿಕ ಹಿನ್ನೆಲೆಯ ಸ್ಥಳಗಳನ್ನು ಸುತ್ತಾಡುವ ವಿಚಾರದಲ್ಲಿ ಇಬ್ಬರಿಗೂ ಸಮಾನ ಆಸಕ್ತಿ ಇದೆ. ಇಬ್ಬರೂ ಸಾಕಷ್ಟು ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಹೋಗಿದ್ದೇವೆ. ಇತ್ತೀಚೆಗೆ ರೋಮ್‌ಗೆ ಹೋಗಿದ್ದೆವು. ಒಟ್ಟಿಗೆ ಪ್ರವಾಸ ಮಾಡುವುದು ನಮ್ಮ ಜೀವನದ ಥ್ರಿಲ್ಲಿಂಗ್‌ ವಿಷಯ.

Advertisement

– ಇಬ್ಬರು ಗಂಡು ಮಕ್ಕಳನ್ನು ಸಂಭಾಳಿಸುವ ಅನುಭವ ಹೇಗಿದೆ? 
ನನಗೆ ಹೆಣ್ಣು ಮಗುವೇ ಜನಿಸಲಿ ಅಂತ ಬಹಳ ಆಸೆ ಇತ್ತು. ಆದರೆ, ಮೊದಲನೇ ಮಗುವೇ ಗಂಡು ಮಗು. ತಾಯಿಯಾಗಿ ಮೊದಲ ಅನುಭವ ಅಲ್ವಾ? ಹಾಗಾಗಿ ಆ ಕ್ಷಣವನ್ನು ಸಂಭ್ರಮಿಸಿದ್ದೆ. ಆದರೆ, ಎರಡನೆಯದೂ ಗಂಡು ಮಗುವೇ ಆದಾಗ ದುಃಖ ತಡೆಯಲಾರದೇ ಆಪರೇಷನ್‌ ಥಿಯೇಟರ್‌ನಲ್ಲೇ ಅತ್ತುಬಿಟ್ಟಿದ್ದೆ. ಈಗ ನನ್ನ ಸ್ಥಿತಿ ಹುಡುಗರ ಹಾಸ್ಟೆಲ್‌ ವಾರ್ಡನ್‌ ರೀತಿ ಆಗಿದೆ. ಇವರ ಕಿತಾಪತಿ, ತಲೆಹರಟೆ ನಿಯಂತ್ರಿಸುವುದು, ಇವರನ್ನು ತಿದ್ದಿ ತೀಡುವುದೇ ನನಗೆ ದೊಡ್ಡ ಕೆಲಸ. ರವಿ ಕೂಡ ಕೆಲವೊಮ್ಮೆ ಚಿಕ್ಕ ಮಕ್ಕಳಂತೆಯೇ ಆಡ್ತಾರೆ. ಕೆಲವೊಮ್ಮೆ ಮಕ್ಕಳ ಜೊತೆ ಅವರು ಜಗಳ ಆಡ್ತಾ ಕೂರುತ್ತಾರೆ. 

– ಸೆಲೆಬ್ರಿಟಿ ಪೋಷಕರ ಮಗಳಾಗಿ ನಿಮ್ಮ ಬಾಲ್ಯ ಹೇಗಿತ್ತು? 
ಅಪ್ಪ- ಅಮ್ಮ ಇಬ್ಬರೂ ಸದಾ ಬ್ಯುಸಿ ಇರುತ್ತಿದ್ದರು. ಅಮ್ಮ, ಅಡುಗೆ ಮಾಡುತ್ತಲೇ ನನಗೆ ಸಂಗೀತ ಹೇಳಿಕೊಡ್ತಾ ಇದ್ರು. ಹಾಲ್‌ನಲ್ಲಿ ಟೀವಿ ನೋಡಲು ಕುಳಿತರೆ ಅಪ್ಪನಿಂದ ಸಂಗೀತ ಪಾಠ, ಜೀವನ ಪಾಠ ಸಿಗುತ್ತಿತ್ತು. ನಾವು ಅಪ್ಪ- ಅಮ್ಮನನ್ನು ಹಚ್ಚಿಕೊಂಡಷ್ಟೇ ಅಜ್ಜಿ, ತಾತ, ದೊಡ್ಡಪ್ಪ, ದೊಡ್ಡಮ್ಮನನ್ನೂ ಹಚ್ಚಿಕೊಂಡಿದ್ದೆವು. ಎಲ್ಲರ ಮಧ್ಯೆ ಬೆಳೆದಿದ್ದರಿಂದ ಬಾಲ್ಯದಲ್ಲಿ  ಪ್ರೀತಿ, ವಾತ್ಸಲ್ಯ ಹೆಚ್ಚೇ ಸಿಗುತ್ತಿತ್ತು. ನಾನು ಚಿಕ್ಕ ಮಗುವಾಗಿದ್ದಾಗಿನಿಂದಲೂ ಅಮ್ಮ ನನ್ನನ್ನು ಸಂಗೀತ ಕಛೇರಿಗಳಿಗೆ ಕರೆದೊಯ್ಯುತ್ತಿದ್ದರು. ಹೀಗಾಗಿ, ನನಗೆ ಸ್ಟೇಜ್‌ ಫಿಯರ್‌ ಅಂದರೆ ಏನು ಅಂತಲೇ ಗೊತ್ತಿರಲಿಲ್ಲ. 4 ವರ್ಷದವಳಿದ್ದಾಗಲೇ ವೇದಿಕೆ ಮೇಲೆ ಹಾಡುತ್ತಿದ್ದೆ. ವೇದಿಕೆ ಹತ್ತುವುದೆಂದರೆ, ಮನೆಯ ರೂಮ್‌ನಿಂದ ಹಾಲ್‌ಗೆ ಹೋದಷ್ಟು ಸರಳ ವಿಷಯವಾಗಿತ್ತು.

– ಬಾಲ್ಯದಿಂದಲೇ ಸಂಗೀತ ಕಲಿತ ನೀವು ಕಾರ್ಪೊರೇಟ್‌ ಉದ್ಯೋಗ ಅರಸಿಹೋಗಿದ್ದೇಕೆ?
ಮನೆಯಲ್ಲೇ ಸಂಗೀತದ ವಾತಾವರಣ ಇದ್ದರೂ ಸಂಗೀತವನ್ನು ಯಾವತ್ತೂ ನಾನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ನನಗೆ ಸಂಗೀತ ಹವ್ಯಾಸದಂತೆ ಭಾಸವಾಗಿತ್ತು. ಅದನ್ನೇ ವೃತ್ತಿಯಾಗಿ ಸ್ವೀಕರಿಸಬೇಕು ಎಂದು ಯಾವತ್ತೂ ಅನ್ನಿಸಲಿಲ್ಲ. ಇನ್ನೊಂದು ವಿಷಯವೆಂದರೆ, ನಾನು ಯಾವತ್ತೂ ಒಂದು ಕಡೆ ಕೂತು ಸಂಗೀತಾಭ್ಯಾಸ ಮಾಡಿದವಳೇ ಅಲ್ಲ. ಜೊತೆಗೆ ನಾನು ಓದುವುದರಲ್ಲಿ ಮುಂದೆ ಇದ್ದೆ. ಎಂಬಿಎನಲ್ಲಿ ರ್‍ಯಾಂಕ್‌ ತೆಗೆದುಕೊಂಡಿದ್ದೆ. ಕಾರ್ಪೊರೇಟ್‌ ಜಾಬ್‌ ಸೇರಬೇಕು ಎಂಬುದೇ ನನ್ನ ಗುರಿಯಾಗಿತ್ತು. ಆ ಕೆಲಸದಲ್ಲಿದ್ದುಕೊಂಡೇ ಹಿನ್ನೆಲೆ ಸಂಗೀತ, ಅಕ್ಷರ ಮಾಲೆ, ಮತ್ತಿತರ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೇನೆ. ಒಂದು ನಿಮಿಷವೂ ಖಾಲಿ ಕುಳಿತಳವಲ್ಲ.
   
– ಈಗ ಉದ್ಯೋಗ, ಸಂಸಾರ ಮತ್ತು ಹವ್ಯಾಸವನ್ನು ಹೇಗೆ ನಿಭಾಯಿಸುತ್ತೀರಿ?
ನಾನು ಕೋರಲ್‌ ಟೆಕ್ನಾಲಜೀಸ್‌ನಲ್ಲಿ ಅಡ್ಮಿನಿಸ್ಟ್ರೇಟರ್‌ ಆ್ಯಂಡ್‌ ಎಚ್‌ಆರ್‌ ಆಗಿದ್ದೇನೆ. ಈ ಹುದ್ದೆಗೇರಿದ ಕಿರಿಯಳು ನಾನೇ ಇದ್ದಿರಬೇಕು. ನನಗೆ ಸಾಧ್ಯವಾಗುವ ಮ್ಯೂಸಿಕ್‌ ಶೋಗಳಲ್ಲಿ ಭಾಗವಹಿಸುತ್ತೇನೆ. ಕರೋಕೆ ಕ್ಲಬ್‌ನಲ್ಲಿ ಹಾಡುತ್ತೇನೆ. ಮನೆ ಜವಾಬ್ದಾರಿ ಇದ್ದೇ ಇದೆ. ಅದನ್ನೂ ತುಂಬಾ ವ್ಯವಸ್ಥಿತವಾಗಿ ನಿಭಾಯಿಸುತ್ತೇನೆ. ನನ್ನ ಕುಟುಂಬಕ್ಕೆ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಸಹಾಯಕರನ್ನು ನೇಮಿಸಿಕೊಂಡಿದ್ದೇನೆ. ರವಿ ಬಿಡುವಾಗಿದ್ದರೆ ಮಕ್ಕಳ ಸಂಪೂರ್ಣ ಜವಾಬ್ದಾರಿ ಅವರದ್ದೇ. ಮನೆ ನಿಭಾಯಿಸುವಾಗ ಅವರಿಂದ ಸಂಪೂರ್ಣ ಸಹಕಾರ ಸಿಗುತ್ತದೆ.

– ರವಿಶಂಕರ್‌ ಮತ್ತು ನಿಮ್ಮ ಪ್ರೀತಿಯ ದಿನಗಳು ಮತ್ತು ಮದುವೆ ನಂತರದ ದಿನಗಳ ಬಗ್ಗೆ ಹೇಳಿ?
ಅವರು ನಮ್ಮ ಅಮ್ಮನ ಬಳಿ ಸಂಗೀತ ಕಲಿಯುತ್ತಿದ್ದರು. ನಮ್ಮ ಮನೆಯಲ್ಲೇ ನಮ್ಮಿಬ್ಬರ ಮಧ್ಯೆ ಪ್ರೀತಿ ಚಿಗುರಿದ್ದು. ಮದುವೆಗೂ ಮೊದಲು ಹೊರಗಡೆ ಭೇಟಿಯಾಗುವುದು, ಸುತ್ತಾಡುವುದನ್ನು ನಾವು ಮಾಡಿಯೇ ಇಲ್ಲ. ಅಷ್ಟು ಭಯ ಇತ್ತು, ಪೋಷಕರ ಬಗ್ಗೆ. ನಾವು ಮದುವೆಯಾಗುತ್ತಲೇ ರವಿ “ಸಿಲ್ಲಿಲಲ್ಲಿ’ ಧಾರಾವಾಹಿಯಲ್ಲಿ ಬ್ಯುಸಿ ಆಗಿಬಿಟ್ಟರು. ದಿನಕ್ಕೆ 15-16 ಗಂಟೆ ಶೂಟಿಂಗ್‌ನಲ್ಲೇ ಕಳೆಯುತ್ತಿದ್ದರು. ಅವರು ನನ್ನ ಕೈಗೇ ಸಿಗುತ್ತಿರಲಿಲ್ಲ. ಶನಿವಾರ ನಾನೇ ಹೋಗಿ ಶೂಟಿಂಗ್‌ ಸೆಟ್‌ನಲ್ಲಿ ಕುಳಿತು ಬಿಡುತ್ತಿದ್ದೆ. ನಾನು ಕ್ವಾಲಿಟಿ ಟೈಮ್‌ನಲ್ಲಿ ನಂಬಿಕೆ ಇಟ್ಟಿಲ್ಲ. ಅವರು ಬ್ಯುಸಿ ಅಂತ ಒಮ್ಮೆಯೂ ದೂರಿಲ್ಲ. ಹತ್ತೇ ನಿಮಿಷ ಒಟ್ಟಿಗೆ ಇರಲು ಸಮಯ ಸಿಕ್ಕರೂ ಆ ಸಮಯವನ್ನು ಖುಷಿಯಿಂದ ಕಳೆಯಬೇಕು ಅಷ್ಟೆ.

– ಎಲ್ಲಾ ಉದ್ಯೋಗಸ್ಥ ಮಹಿಳೆಗಿರುವಂತೆ ಸಂಸಾರದ ಒತ್ತಡಗಳು ನಿಮಗೂ ಇವೆಯಾ? 
ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ ಜಾಸ್ತಿ ಆಗುವುದೇ ಅವರ ಗಂಡಂದಿರು ನೀಡುವ ಟೆನÒನ್‌ನಿಂದ. ಗಂಡ ಎಲ್ಲದಕ್ಕೂ ಕಿರಿಕಿರಿ ಮಾಡುತ್ತಿದ್ದರೆ ಹೆಂಡತಿಗೆ ಏನು ಮಾಡಬೇಕು, ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಎಂದು ತೋಚುವುದೇ ಇಲ್ಲ.  ನಾನು ಈ ವಿಷಯದಲ್ಲಿ ಬಹಳ ಅದೃಷ್ಟವಂತೆ. ರವಿ ಯಾವುದಕ್ಕೂ ಒಮ್ಮೆಯೂ ಕಿರಿಕಿರಿ ಮಾಡಿದವರಲ್ಲ. ನಾನು ಬ್ಯುಸಿ ಇದ್ದರೆ ಅವರು ಬಿಡುವು ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುತ್ತಾರೆ. ನನಗೆ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಅವರೇ ಆ ಹೊತ್ತಿಗೆ ಏನಾದರೂ ಹೊಂದಿಸಿಕೊಳ್ಳುತ್ತಾರೆ. ಯಾವ ವಿಷಯಕ್ಕೂ ನನ್ನ ಮೇಲೆ ಒತ್ತಡ ಹೇರಿಲ್ಲ. 

– ನಿಮ್ಮಿಬ್ಬರ ಮಧ್ಯೆ ಜಗಳ ಹೇಗಿರುತ್ತದೆ? 
ಜಗಳಕ್ಕೇನೂ ಬರ ಇಲ್ಲ. ನಾನು ಬಹಳ ನೇರವಾಗಿ ಮಾತಾಡುವವಳು. ರವಿ ಹಾಗಲ್ಲ; ಅಂತರ್ಮುಖೀ. ಯಾವುದಾದರು ವಿಷಯಕ್ಕೆ ಬೇಸರವಾದರೆ ಅದನ್ನು ಹೊರಹಾಕಲು ಅವರಿಗೆ ಕನಿಷ್ಠ 3 ದಿವಸ ಸಮಯ ಬೇಕು. ಅಷ್ಟರೊಳಗೆ ನನ್ನ ತಾಳ್ಮೆ ಮುಗಿದು ಹೋಗಿರುತ್ತದೆ. ಮೊದಮೊದಲ ದಿನಗಳಲ್ಲಿ ನಾವಿಬ್ಬರೂ ಒಟ್ಟಿಗೇ ಇರುವುದು ಅಷ್ಟು ಸುಲಭವಿರಲಿಲ್ಲ. ನಾವಿಬ್ಬರೂ ತದ್ವಿರುದ್ಧ ವಾತಾವರಣದಲ್ಲಿ ಹುಟ್ಟಿ ಬೆಳೆದವರು. ನಾನು ಸಂಪೂರ್ಣವಾಗಿ ಸಿಟಿ ಹುಡುಗಿಯಾದರೆ, ಅವರು ಪಕ್ಕಾ ಮಂಡ್ಯದ ಹೈದ. ಜೊತೆಗೆ ನಮ್ಮ ಊಟ, ಆಚಾರ, ವಿಚಾರ ಎಲ್ಲವೂ ಬೇರೆಯೇ. ಅಂಥ ತೊಡಕುಗಳನ್ನೆಲ್ಲಾ ನಿವಾರಿಸಿಕೊಂಡು, ಸದಾ ಖುಷಿಯಾಗಿಯೇ ಸಂಸಾರ ಮಾಡಿದ್ದೇವೆ. 

– ಮಕ್ಕಳ ವಿಚಾರದಲ್ಲಿ ನಿಮ್ಮಿಬ್ಬರ ನಡುವಳಿಕೆ ಹೇಗಿರುತ್ತದೆ? 
ನನ್ನ ದೊಡ್ಡ ಮಗ ಬಹಳ ಸೈಲೆಂಟ್‌. ಅವನನ್ನು ಬೆಳೆಸಿದ್ದೇ ಗೊತ್ತಾಗಲಿಲ್ಲ. ಅವನಿಂದಾಗಿ ಮಕ್ಕಳನ್ನು ಸಾಕುವುದು ಬಹಳ ಸುಲಭ ಎಂಬ ಭಾವನೆ ಮೂಡಿ, ಎರಡನೇ ಮಗು ಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಆದರೆ, ಎರಡನೆಯವನು ಹುಟ್ಟಿದ ಮೇಲೆ ಗೊತ್ತಾಗಿದ್ದು; ಇಂಥ ಪ್ರಳಯಾಂತಕ ಮಕ್ಕಳೂ ಇರ್ತಾವೆ ಅಂತ! ಅವನೊಬ್ಬನನ್ನು ಸಂಭಾಳಿಸುವುದು 10 ಮಕ್ಕಳನ್ನು ಸಂಭಾಳಿಸುವುದಕ್ಕೆ ಸಮ. ಅದರಲ್ಲೂ ಅವರ ಅಪ್ಪ ನನಗೆ ತಿಳಿಯದೇ ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸುವುದು, ಅವರು ಮಾಡಿದ ತಪ್ಪುಗಳನ್ನು ನನ್ನಿಂದ ಮುಚ್ಚಿಡುವುದು ಮಾಡ್ತಾರೆ. ನಾನು ಅದನ್ನೂ ಪತ್ತೆ ಮಾಡುವ ಕೆಲಸ ಮಾಡಬೇಕು.

– ರವಿಶಂಕರ್‌ರ ಯಾವ ಗುಣ ನಿಮಗೆ ಕಿರಿಕಿರಿ?
ಅವರು ಎಷ್ಟು ಶಾಂತವಾಗಿರುತ್ತಾರೋ, ಅಷ್ಟೇ ಬೇಗನೆ ಕೋಪಿಸಿಕೊಳ್ಳುತ್ತಾರೆ. ಕೋಪ ಬಂದಾಗ ಕೂಗಾಡುತ್ತಾರೆ. ಮನಸ್ಸಲ್ಲಿರೋದನ್ನು ಹೇಳದೇ ಸತಾಯಿಸುತ್ತಾರೆ. ಮೊದಲೆಲ್ಲಾ ಕೋಪ ಬಂದರೆ ಮೊಬೈಲ್‌ಗ‌ಳನ್ನು ಒಡೆದು ಹಾಕುತ್ತಿದ್ದರು. ಈಗ ಫೋನ್‌ ಬೆಲೆ ದುಬಾರಿಯಾಗಿರುವುದರಿಂದ ಅಂಥ ದುಸ್ಸಾಹಸಕ್ಕೆಲ್ಲ ಕೈಹಾಕಿಲ್ಲ, ನನ್ನ ಪುಣ್ಯ!

– ರವಿಶಂಕರ್‌ರನ್ನು ಎಂಥ ಪಾತ್ರಗಳಲ್ಲಿ ನೋಡಲು ಬಯಸುತ್ತೀರಿ? 
ಅವರು ಔಟ್‌ ಆ್ಯಂಡ್‌ ಔಟ್‌ ವಿಲನ್‌ ರೋಲ್‌ನಲ್ಲಿ ಅಭಿನಯಿಸಬೇಕು. ತೆರೆ ಮೇಲೆ ಅವರು ಕೊಲೆಗಡುಕನಾಗಿ ಕಾಣಿಸಿಕೊಳ್ಳಬೇಕು. ನನ್ನ ಪ್ರಕಾರ, ಅವರಿಂದ ಸಾಧ್ಯವಾಗದ ಪಾತ್ರಗಳೇ ಇಲ್ಲ. “ಜೋಗಯ್ಯ’ ಚಿತ್ರದಲ್ಲಿ ಅವರ ಪಾತ್ರ ನನಗೆ ಆಲ್‌ಟೈಮ್‌ ಫೇವರಿಟ್‌. “ದೇವ್ರಾಣೆ’ ಚಿತ್ರದ ಪಾತ್ರವೂ ಇಷ್ಟ. ರವಿ ಮತ್ತು ಗಣೇಶ್‌ ಕಾಂಬಿನೇಷನ್‌ನ ಎಲ್ಲಾ ಚಿತ್ರಗಳೂ ಇಷ್ಟ.

– ನೀವು ನೋಡಲು ನಿಮ್ಮ ಅಮ್ಮನಂತೆಯೇ ಇದ್ದೀರಿ. ಅಮ್ಮನ ಯಾವೆಲ್ಲ ಗುಣಗಳು ನಿಮಗೆ ಬಂದಿವೆ?
ನನ್ನ ಅಮ್ಮ ಮಹತ್ವಾಕಾಂಕ್ಷಿ, ಗಟ್ಟಿಗಿತ್ತಿ. ಅವರಿಗೆ ನಾನು ಶೇ.10ರಷ್ಟೂ ಸಮಾನಳಲ್ಲ. ನಾವು ಚಿಕ್ಕವರಿದ್ದಾಗ ನಮ್ಮಮ್ಮ ಸೂಪರ್‌ ಸ್ಟಾರ್‌. ಆದರೆ, ಯಾವತ್ತೂ ನಮಗೆ ನಾವು ಸೆಲೆಬ್ರಿಟಿಗಳ ಮಕ್ಕಳು ಎಂಬ ಭಾವನೆ ಮೂಡಲು ಅವರು ಬಿಡಲೇ ಇಲ್ಲ. ಇವತ್ತು ನಾನು ಏನಾಗಿದ್ದೀನೋ ಎಲ್ಲದಕ್ಕೂ ಅಮ್ಮನೇ ಕಾರಣ. ಅವರು ನಾನು ಹೆಣ್ಣು ಮಗಳು ಎಂದು  ಅತಿ ಕಾಳಜಿಯಲ್ಲಿ ಬೆಳೆಸಲಿಲ್ಲ. ಎಂಥ ಸಂದರ್ಭದಲ್ಲೂ ಧೈರ್ಯವಾಗಿ ಮುಂದುವರಿಯಲು ಹೇಳಿಕೊಟ್ಟರು. ನಾನು ಯಾವತ್ತೂ ಅಮ್ಮನಿಗೆ ಸರಿಸಮಳಲ್ಲ. 

– ಅಡುಗೆ ಮನೆ ಕತೆ ಹೇಳಿ…
ನಾನು ಅಗತ್ಯ ಬಿದ್ದಾಗಲಷ್ಟೇ ಸೌಟು ಹಿಡಿಯುವವಳು. ರವಿಗೆ ಅನ್ನ ಕೂಡ ಸರಿಯಾಗಿ ಮಾಡಲು ಬರುವುದಿಲ್ಲ. ನಮ್ಮ ಮನೆಯಲ್ಲಿ ಮದುವೆಯಾಗಿ 10 ವರ್ಷಗಳ ಕಾಲ ನಾನ್‌ವೆಜ್‌ ಮಾಡಿರಲಿಲ್ಲ. ನಮ್ಮ ಚಿಕ್ಕ ಮಗ ತುಂಬಾ ಇಷ್ಟಪಟ್ಟು ನಾನ್‌ವೆಜ್‌ ತಿನ್ನುವುದನ್ನು ನೋಡಿದ ಮೇಲೆ, ಮನೆಯಲ್ಲಿ ನಾನ್‌ವೆಜ್‌ ತಯಾರಿಸಲು ಶುರುಮಾಡಿದೆವು. ಪಾಪ, ರವಿ ಒಂದು ದಿನವೂ ಮನೆಯಲ್ಲಿ ನಾನ್‌ವೆಜ್‌ ಅಡುಗೆ ಮಾಡು ಅಂತ ಹೇಳಿಯೇ ಇರಲಿಲ್ಲ. ಅಷ್ಟು ಹೊಂದಾಣಿಕೆಯ ಗುಣ ಅವರದ್ದು.

– ಚೇತನ ಜೆ.ಕೆ.

Advertisement

Udayavani is now on Telegram. Click here to join our channel and stay updated with the latest news.

Next