ಪ್ರತಿ ವಾರ ನಾಲ್ಕಾರು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಲೇ ಇರು ತ್ತವೆ. ಈ ಸಿನಿಮಾಗಳ ಮೂಲಕ ಹತ್ತಾರು ಹೊಸ ಪ್ರತಿಭೆಗಳು ಕಲಾವಿದರಾಗಿ, ತಂತ್ರಜ್ಞರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಲೇ ಇರುತ್ತಾರೆ. ಈ ವಾರ ಹೀಗೆ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವವರು ನಿರೀಕ್ಷಾ ರಾಮ್.
ಹೌದು, ಈ ವಾರ ಬಿಡುಗಡೆಯಾಗುತ್ತಿರುವ “ರಾಜಯೋಗ’ ಸಿನಿ ಮಾದ ಮೂಲಕ ನಟಿ ನಿರೀಕ್ಷಾ ರಾವ್ ನಾಯಕಿಯಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ದಲ್ಲಿ ಅಭಿನಯ ತರಬೇತಿ ಪಡೆದುಕೊಂಡಿರುವ ನಿರೀಕ್ಷಾ ರಾವ್ ಈಗಾಗಲೇ ಹಲವು ರಂಗಪ್ರಯೋಗಗಳಲ್ಲಿ ಕಲಾವಿದೆಯಾಗಿ ಗುರುತಿಸಿಕೊಂಡು, ಗಮನ ಸೆಳೆದಿರುವ ಪ್ರತಿಭೆ. ಒಮ್ಮೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ದಲ್ಲಿ ನಡೆಯುತ್ತಿದ್ದ ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನದಲ್ಲಿ ನಿರೀಕ್ಷಾ ರಾವ್ ಅವರ ಅಭಿನಯವನ್ನು ಕಂಡ ನಿರ್ದೇಶಕ ಲಿಂಗರಾಜ್ ತಮ್ಮ ಚೊಚ್ಚಲ ನಿರ್ದೇಶನದ “ರಾಜಯೋಗ’ ಸಿನಿಮಾಕ್ಕೆ ಅವರನ್ನು ನಾಯಕಿಯಾಗಿ ಆಯ್ಕೆಯಾಗಿ ಮಾಡಿಕೊಂಡರು.
ತಮ್ಮ ಮೊದಲ ಸಿನಿಮಾದ ಬಗ್ಗೆ ಮಾತನಾಡುವ ನಿರೀಕ್ಷಾ ರಾವ್, “ನಮ್ಮ ತಂದೆ ಸೇನೆಯಲ್ಲಿದ್ದರು. ತಾಯಿ ತೆಲುಗು ಮೂಲದವರು. ತಂದೆ ಸೇನೆಯಲ್ಲಿದ್ದ ಕಾರಣ ಚಿಕ್ಕ ವಯಸ್ಸಿನಲ್ಲೇ ದೇಶದ ಹಲವು ಕಡೆಗಳಲ್ಲಿ ನಮ್ಮ ಕುಟುಂಬದ ಜೊತೆ ಸಂಚರಿಸಿ ದ್ದೇನೆ. ಚಿಕ್ಕವಯಸ್ಸಿನಿಂದಲೂ ನನಗೆ ಡ್ಯಾನ್ಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೆ ತುಂಬ ಆಸಕ್ತಿಯಿತ್ತು. ಈ ಆಸಕ್ತಿಯೇ ನಂತರ ನಂತರ ನನ್ನನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ಗೆ ಸೇರುವಂತೆ ಮಾಡಿತು. ಎನ್‌ಎಸ್‌ಡಿಯಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನಟಿಯಾಗಿ ಬೇಕಾದ ಎಲ್ಲ ತಯಾರಿ ಮಾಡಿ ಕೊಳ್ಳುವಲ್ಲಿ ಎನ್‌ಎಸ್‌ಡಿ ಪಾತ್ರ ದೊಡ್ಡದು. ಈಗ ರಂಗಭೂಮಿ ಯಿಂದ “ರಾಜಯೋಗ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದೇನೆ’ ಎನ್ನುತ್ತಾರೆ.