2024ರ ಹೊಸವರ್ಷದಲ್ಲಿ ಕನ್ನಡದ ಬಹುತೇಕ ಸ್ಟಾರ್ ನಾಯಕ, ನಾಯಕಿಯರ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆಯಾಗಲು ಸಿದ್ಧವಾಗುತ್ತಿವೆ. ಈಗಾಗಲೇ ಕೆಲ ಸ್ಟಾರ್ ನಟರ ಹಲವು ಸಿನಿಮಾಗಳು ಅಂತಿಮ ಹಂತದಲ್ಲಿದ್ದರೆ, ಇನ್ನು ಕೆಲ ಸ್ಟಾರ್ ನಟರ ಒಂದಷ್ಟು ಸಿನಿಮಾಗಳು ಈಗಾಗಲೇ ಸೆನ್ಸಾರ್ ಕೂಡ ಆಗಿದ್ದು, ಬಿಡುಗಡೆಯಾಗಿ ತೆರೆಗೆ ಬರೋದಷ್ಟೇ ಬಾಕಿ.
ಇನ್ನು ಹೊಸವರ್ಷದ ಆರಂಭದಲ್ಲಿ, ಅತಿ ಹೆಚ್ಚು ಸಂಖ್ಯೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರಲು ತಯಾರಾಗಿರುವ ನಾಯಕ ನಟರ ಪೈಕಿ ರಾಜವರ್ಧನ್ ಹೆಸರು ಮೊದಲಿಗೆ ಕಾಣುತ್ತದೆ.
“ಬಿಚ್ಚುಗತ್ತಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ಪರಿಚಯವಾಗಿರುವ ಹಿರಿಯ ಕಲಾವಿದ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್, ತನ್ನ ಮೊದಲ ಸಿನಿಮಾದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಮಾಸ್ ಹೀರೋ ಆಗಿ ಭರವಸೆ ಮೂಡಿಸಿದ ನಟ. ಸದ್ಯ ಒಂದಷ್ಟು ವಿಭಿನ್ನ ಕಥೆಗಳು ಹಾಗೂ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತಿರುವ ರಾಜವರ್ಧನ್, ಹೊಸವರ್ಷದ ಮೊದಲ ಭಾಗದಲ್ಲೇ ಬರೋಬ್ಬರಿ ನಾಲ್ಕು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಹೌದು, ರಾಜವರ್ಧನ್ ನಾಯಕ ನಟನಾಗಿ ಅಭಿನಯಿಸಿರುವ “ಹಿರಣ್ಯ’, “ಪ್ರಣಯಂ’, “ಗಜರಾಮ’ ಮತ್ತು “ಕ್ಯಾಪcರ್’ ಹೀಗೆ ನಾಲ್ಕು ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಗೆ ಸಿದ್ಧವಾಗುತ್ತಿವೆ. ಈ ಸಿನಿಮಾಗಳ ಪೈಕಿ ಈಗಾಗಲೇ ಕೆಲ ಸಿನಿಮಾಗಳು ಸೆನ್ಸಾರ್ ಕೂಡ ಆಗಿದ್ದು, ನಿಧಾನವಾಗಿ ಆ ಸಿನಿಮಾಗಳ ಫಸ್ಟ್‌ಲುಕ್, ಸಾಂಗ್ಸ್, ಟೀಸರ್ ಬಿಡುಗಡೆಯಾಗುವ ಮೂಲಕ ಆಯಾಯಾ ಸಿನಿಮಾಗಳ ಪ್ರಚಾರ ಕಾರ್ಯಗಳೂ ಶುರುವಾಗಿದೆ. ಹೀಗಾಗಿ ಹೊಸವರ್ಷದ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಅತಿ ಹೆಚ್ಚು ಸಿನಿಮಾಗಳ ನಾಯಕ ನಟ ಎಂಬ ಹೆಗ್ಗಳಿಕೆ ನಾಯಕ ನಟ ರಾಜವರ್ಧನ್ ಅವರ ಪಾಲಾಗು ವುದು ಬಹುತೇಕ ಖಚಿತ.
ಇಷ್ಟೊಂದು ವೆರೈಟಿ ಸಿನಿಮಾಗಳ ಪಟ್ಟಿಯಲ್ಲಿ ಯಾವ ಯಾವ ಸಿನಿಮಾಗಳು ಎಷ್ಟರ ಮಟ್ಟಿಗೆ ಸಿನಿಪ್ರಿಯರ ಮನ – ಗಮನ ಸೆಳೆಯಲಿವೆ, ನಾಯಕ ನಟ ರಾಜವರ್ಧನ್ ಅವರಿಗೆ ಎಷ್ಟು ಹಿಟ್ ಸಿಗಲಿದೆ ಎಂಬುದು ಹೊಸ ವರ್ಷದ ಮಧ್ಯ ಭಾಗದೊಳಗೆ ಗೊತ್ತಾಗಲಿದೆ