Advertisement

‘ಯಾರಿಂದಾದರೂ ನನ್ನ ಮೈ ಮುಟ್ಟೋಕೆ ಆಗುತ್ತೇನ್ರಿ ?..ಆಕ್ರೋಶ ಹೊರಹಾಕಿದ ಜಗ್ಗೇಶ್

01:39 PM Feb 23, 2021 | Team Udayavani |

ಬೆಂಗಳೂರು: ಸೋಮವಾರ ( ಫೆ.22) ಮೈಸೂರಿನಲ್ಲಿ ತೋತಾಪುರಿ ಚಿತ್ರೀಕರಣದ ಸ್ಥಳದಲ್ಲಿ ‘ವಿವಾದಿತ ಆಡಿಯೋ’ ವಿಚಾರವಾಗಿ ದರ್ಶನ್ ಅಭಿಮಾನಿಗಳ ಜತೆ ನಡೆದ ವಾಗ್ವಾದ ಹಾಗೂ ನಂತರದಲ್ಲಿ ನಡೆದ ಬೆಳವಣೆಗೆಗಳು ನವರಸ ನಾಯಕ ಜಗ್ಗೇಶ್ ಅವರಿಗೆ ನೋವು ತಂದಿವೆ.

Advertisement

ಇಂದು (ಫೆ.23) ಮುಂಜಾನೆ ಟ್ವೀಟರ್ ಲೈವ್ ವಿಡಿಯೋದಲ್ಲಿ ಸುಮಾರು 14 ನಿಮಿಷ ಮಾತಾಡಿರುವ ಜಗ್ಗೇಶ್, ಆಕ್ರೋಶದ ಜತೆ ನೋವು ತೋಡಿಕೊಂಡಿದ್ದಾರೆ. ಜಗ್ಗೇಶ್ ಅವರ ಆಕ್ರೋಶದ ನುಡಿಗಳು ಇಲ್ಲಿವೆ ನೋಡಿ.

‘ನಾನು ಹಿಂದೆ ಮುಂದೆ ಯಾಕೆ ಮಾತಾಡಲಿ ? ನಾನೊಬ್ಬ ಆರ್ ಎಸ್ ಎಸ್ ಕಾರ್ಯಕರ್ತ, ನನ್ನ ಕರ್ತವ್ಯದ ಬಗ್ಗೆ ಮಾತಾಡುವುದು ನನ್ನ ಧರ್ಮ. ನಾನು ಏನು ಮಾತಾಡಿದ್ದೀನಿ ಅಂತಾ ಇಷ್ಟೆಲ್ಲಾ ನಡೆಯಿತು ? ನಾನೇನು ಕಳ್ಳತನ ಮಾಡಿದ್ದೇನಾ? ನಿನ್ನೆ ಬಂದ ಹುಡುಗರ ಮುಂದೇನೇ ಕುಳಿತುಕೊಂಡು ಮಾತನಾಡಿದ್ದೇನೆ ಎಲ್ಲಿಯೂ ಓಡಿಹೋಗಿಲ್ಲ’.

‘ಯಾವುದೋ ಒಂದು ಸಣ್ಣ ವಿಷಯ ಇಟ್ಟುಕೊಂಡು ಜಗ್ಗೇಶ್ ಗೆ ಅಪಮಾನ ಮಾಡಿದೀವಿ, ಮಾಡುತ್ತಿದ್ದೇವೆ ಅಂತಾ ನಿಮಗೆ ಅನ್ನಿಸಿದರೆ ಅದರಿಂದ ನನಗೆ ಯಾವ ನಷ್ಟವೂ ಇಲ್ಲ. ನಾನು ಏನಂತಾ ಮಾತಾಡಿದೀನಿ ? ಯಾವುದಾದರೂ ಆಸ್ತಿ ಹೊಡೆಯೋಣ ಅಂತಾ ಮಾತಾಡಿದ್ದೇನಾ? ಯಾವುದಾದರೂ ಕಾಂಟ್ರ್ಯಾಕ್ಟ್‌ ಮಾಡ್ತೀನಿ ಅಂತಾ ಮಾತಾಡಿದ್ದೇನಾ? ಅಥವಾ ಕೋಟ್ಯಂತರ ರೂಪಾಯಿ ವಂಚನೆ ಮಾಡೋಣ ಅಂತಾ ಮಾತಾಡಿದ್ದೇನಾ? ಅಥವಾ ಯಾರಿಗಾದರೂ ನೋವು ಕೊಡೋಣ ಅಂತಾ ಮಾಡಿದ್ದೇನಾ ? ಯಾರನ್ನಾದರೂ ಮರ್ಡರ್ ಮಾಡೋಣ ಅಂತಾ ಮಾತಾಡಿದ್ದೇನಾ ? ಅಥವಾ ಈ ಕನ್ನಡದ ನೆಲಕ್ಕೆ ಅವಮಾನ ಮಾಡುವಂತ ಮಾತು ಆಡಿದ್ದೇನಾ ? ನಾನು ನನ್ನ ಆರ್ ಎಸ್ಎಸ್ ಪತ್ರಿಕೆ ಬಗ್ಗೆ ಖಾಸಗಿಯವನ ಜತೆ ಮಾತಾಡಿದ್ದೇನೆ.  ಖಾಸಗಿಯಾಗಿ ನಡೆದಿರುವ ವಿಚಾರಧಾರೆಯನ್ನು ಸಾರ್ವಜನಿಕ ಮಾಡೋವಂತ ಕುತಂತ್ರ ವ್ಯವಸ್ಥೆಗೆ ನಾನು ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎನ್ನುವ ಭಾವನೆ ಬೇಡ. ನಾ ತಪ್ಪೇ ಮಾಡಿಲ್ಲ ಯಾಕೆ ಹೆದರಿಕೊಳ್ಳಿ’ ?

‘ರೀ ನೆನಪಿಟ್ಟುಕೊಳ್ಳಿ ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ಈಗ ಜಾಲರಿ ಹಿಡಿಯುತ್ತಿರುವ ನೀವ್ಯಾರೂ ಹುಟ್ಟಿರಲಿಲ್ಲ. ನೀವು ಯಾರಿಗೆ ಬಕೀಟು ಹಿಡಿತಿದ್ದೀರಲ್ಲಾ ಅವರು ಯಾರೂ ಹುಟ್ಟಿರಲಿಲ್ಲ. 80ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು ನಾನು. ಡಾ.ರಾಜ್‌ಕುಮಾರ್‌, ಅಂಬರೀಷ್‌, ವಿಷ್ಣುವರ್ಧನ್‌, ಪ್ರಭಾಕರ್‌, ಶಂಕರ್‌ನಾಗ್‌, ಅನಂತನಾಗ್‌ ಅವರ ಜೊತೆ ಹೆಜ್ಜೆ ಹಾಕಿದವನು ನಾನು, ಅವರ ಜತೆ ಮಾತಾಡಿದವನು ನಾನು, ಬದುಕಿದವನು, ನಕ್ಕವನು, ಅತ್ತವನು ನಾನು. ಇವತ್ತಿಗೂ ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ಅದು ನಿಮ್ಮ ಯಾರಿಂದೂ ಇಲ್ಲ, ಅದು ಕನ್ನಡಿಗರಿಂದ. ಕನ್ನಡಿಗರ ಪ್ರೀತಿ ಹೃದಯದಿಂದ’.

Advertisement

‘ನಾನು ಇವತ್ತಿಗೂ ಕೂಡ ಬೇರೆ ಭಾಷೆಯತ್ತ ಎಡಗಾಲನ್ನೂ ಇಟ್ಟಿಲ್ಲ. ಬೇರೆ ಭಾಷೆಯವರಿಗೂ ನಾನು ಜಾಲರಿ ಹಿಡಿದಿಲ್ಲ. ಯಾವ ಭಾಷೆಯವರನ್ನ ಕಟ್ಟುಕೊಂಡು ನನಗೆ ಏನೂ ಆಗಬೇಕಿಲ್ಲ. ಕನ್ನಡ ಕನ್ನಡ ಎಂದು ಸತ್ತಿದ್ದೇನೆ ಮುಂದೆ ಕೂಡಾ ಸಾಯುತ್ತೇನೆ. ನಾನು ಕಾಗೆ ಹಾರಿಸುವಂತಿದ್ದರೆ 20 ಬಾರಿ ಶಾಸಕನಾಗುತ್ತಿದ್ದೆ, ಮಂತ್ರಿಯಾಗುತ್ತಿದ್ದೆ. ಬಕೀಟು ಹಿಡಿದಿದ್ದರೆ ಬೂಟು ನೆಕ್ಕಿದ್ದರೆ ನೂರಾರು ಹುದ್ದೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ, ನಾನು ಸ್ವಾಭಿಮಾನದಿಂದ ಬದುಕಿದ್ದೇನಂದರೆ ನಿಮ್ಮಿಂದ ಇಂತಹ ಮಾತುಗಳನ್ನು ಕೇಳೋಕಲ್ಲ ಎಂದು ಗುಡುಗಿದ್ದಾರೆ.

‘ಇವತ್ತು ಯಾರಿಂದಾದರೂ ನನ್ನ ಮೈ ಮುಟ್ಟೋಕೆ ಆಗುತ್ತೇನ್ರಿ ? ಏನ್ ಮಾತಾಡ್ತೀರಿ ನೀವು’ ? ಎಂದು ಗುಡುಗಿರುವ ಜಗ್ಗಣ್ಣ, ಇಂದು ಅನ್ಯಭಾಷಿಗರು ಬಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನ್ನಡದ ಮಕ್ಕಳನ್ನ ಬೆಳೆಯದಂತೆ ತುಳಿಯುತ್ತಿದ್ದಾರೆ. ಈ ಕನ್ನಡ ಚಿತ್ರರಂಗ ಹಾಳಾಗಿ ಹೋಗಲಾ ? ಯಾರು ಹೇಳೋರು ಇಲ್ಲ ಕೇಳೋರು ಇಲ್ವಾ? ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಸತ್ತ ಮಾರನೇ ದಿನವೇ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದವರು ನಾವೇ ಮೂರು ನಾಲ್ಕು ಜನ. ನಾನು, ಶಿವರಾಜ್‌ಕುಮಾರ್‌, ರವಿಚಂದ್ರನ್‌, ರಮೇಶ್‌. ನಾವೆಲ್ಲಾ ಸತ್ತ ಮೇಲೆ ನಮ್ಮ ತಿಥಿ ಮಾಡಿ. ಆನಂದಪಡಿ, ಸಂತೋಷ ಪಡಿ ನಿವೇಲ್ಲ. ನಿಮ್ಮ ಮೇಲೆ ನಂಗೆ ಅಸಹ್ಯ ಹುಟ್ಟುತ್ತಿದೆ ಎಂದು ನೋವು ಹೊರಹಾಕಿದ್ದಾರೆ.

‘ನನಗೆ ಭಾಳ ನೋವು ಕೊಟ್ಟಿದ್ದೀರಿ ನೀವು. ನಾನು ಒಬ್ಬ ದೀಕ್ಷೆ ತೊಟ್ಟ ಮನುಷ್ಯ. ಮಠ, ದೇವರು, ದಿಂಡರು, ನನ್ನ ಸಂಸಾರ ಅಂತ ಬದುಕಿರುವವನು. ನಾನು ಒಕ್ಕಲಿಗನಾ ಎಂದು ಕೇಳಿದಾಗಲೂ ಸುಮ್ಮನಿದ್ದವನು. ನಿನ್ನೆ ನೂರಾರು ಜನ ಬಂದು ಕಿರುಚುತ್ತಿದ್ದಾಗ ನಾನು ಓಡಿ ಹೋದ್ನಾ ? ಅವರ ಮುಂದೆ ಗಂಡಸತರ ಕುಳಿತುಕೊಂಡು ವಿವರಣೆ ನೀಡದ್ದೇನೆ. ಆದರೆ, ಅವರಿಗೆ ಕೇಳುವ ಸೌಜನ್ಯವಿರಲಿಲ್ಲ. ನನಗೆ ಬುದ್ಧಿಹೇಳಬೇಕಾದವರು ರಾಘವೇಂದ್ರ ಸ್ವಾಮಿಗಳು, ಕನ್ನಡದ ಜನ. ನನ್ನನ್ನು ಹೆತ್ತ ಜನ. ಯಾರೋ ಒಬ್ಬ ನಟ, ಅವನ ಅಭಿಮಾನಿಗಳು ನನ್ನ ಬಳಿ ಬರಲು ಆಗುವುದಿಲ್ಲ ಎಂದಿದ್ದಾರೆ.

‘ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನ ಪಾಡಿಗೆ ನಾನು ಕನ್ನಡದ ಕೆಲಸ ಮಾಡ್ತೀನಿ. ಇನ್ನೂ 10 ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಅಂತಾ ಮಾಡಿದ್ದೀನಿ, ನನಗೆ ಮಸಿ ಬಳಿಬೇಡಿ ನೀವು. ನನ್ನನ್ನು ಅವಮಾನ ಮಾಡಲು ಬರಬೇಡಿ. ಇಂಥ ಸ್ಥಿತಿಗತಿಗಳನ್ನು ಶುರು ಮಾಡಿದರೆ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಶುರುವಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಜಗ್ಗೇಶ್ ಮಾತಾಡಿರುವ ವಿಡಿಯೋ ಇಲ್ಲಿದೆ ನೋಡಿ..

Advertisement

Udayavani is now on Telegram. Click here to join our channel and stay updated with the latest news.

Next