ಕಾಣಿಯೂರು: ಗ್ರಾಮೀಣ ಭಾಗದ ಜನ ದೈವ-ದೇವರ ನಂಬಿಕೆ ಯೊಂದಿಗೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ದೇವಸ್ಥಾನಗಳಿಂದ ಹಾಗೂ ದೇವತಾರಾಧನೆಯಿಂದ ಮನಶ್ಯಾಂತಿ ದೊರಕಲು ಸಾಧ್ಯವೇ ಹೊರತು ಯಾವುದೇ ಐಶಾರಾಮಿ ವ್ಯವಸ್ಥೆಯಿಂದ ಅಲ್ಲ ಎಂದು ಕೇಂದ್ರ ರಸಗೊಬ್ಬರ ಹಾಗೂ ರಾಸಾಯಿನಿಕ ಖಾತೆಯ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಶನಿವಾರ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ -ಡಾ| ಆಶಾ ಅಭಿಕಾರ ದಂಪತಿ ಬಾರೆಂಗಳಗುತ್ತು ಶ್ರೀ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿಕೊಟ್ಟ ನೂತನ ಚಂದ್ರಮಂಡಲ ರಥವನ್ನು ಸಮರ್ಪಣೆ ಮಾಡಿ, ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರ ಎಂಬ ನಾಲ್ಕು ಸೂತ್ರಗಳನ್ನು ಅಳವಡಿಸಿಕೊಂಡು ಸಮೃದ್ಧ ಜೀವನ ನಡೆಸಿದಾಗ ಸರ್ವರಿಗೂ ಒಳಿತಾಗಿ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಇದರ ಹೊರತಾಗಿ ಬದುಕಿದಾಗ ಸಾಮಾ ಜಿಕ ಸ್ವಾಸ್ಥ್ಯ ಕೆಡುತ್ತದೆ. ದೇಶದ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರ ಬೇಕಾದರೆ, ಶ್ರದ್ಧಾಕೇಂದ್ರಗಳಲ್ಲಿ ಬಂದು ದೇವರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಬಾರೆಂಗಳ ಗುತ್ತು ಶ್ರೀ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಮುದ್ರಿಸಿದ ಲಿಂಗಾಷ್ಟಕಂ ಮಂತ್ರ ಪುಸ್ತಿಕೆಯನ್ನು ಡಿ.ವಿ. ಸದಾನಂದ ಗೌಡ ಬಿಡುಗಡೆ ಮಾಡಿದರು. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಲ್ಲೇಗ ಕಲ್ಕುಡ ದೈವಸ್ಥಾನದ ಆಡಳಿತೆ ಮೊಕ್ತೇಸರ ಸಂಜೀವ ನಾಯಕ್ ಕಲ್ಲೇಗ, ಡಾ| ಆಶಾ ಮೋಹನ ಗೌಡ, ಕಾಸ್ಪಾಡಿ ಜೋಡುದೈವಗಳ ಮೊಕ್ತೇಸರ ಕುಸುಮಾಧರ ರೈ ಕಾಸ್ಪಾಡಿಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಸಹಕರಿಸಿದ ಗಣ್ಯರನ್ನು ಅಭಿನಂದಿಸಲಾಯಿತು. ಮೋಹನ ಗೌಡ ಇಡ್ಯಡ್ಕ ಪ್ರಸ್ತಾವನೆಗೈದರು. ಅಧ್ಯಕ್ಷ ಡಾ| ಧರ್ಮಪಾಲ ಗೌಡ ಕರಂದ್ಲಾಜೆ ಸ್ವಾಗತಿಸಿದರು. ಗೋಪಾಲಕೃಷ್ಣ ಪಟೇಲ್ ಚಾರ್ವಾಕ ವಂದಿಸಿದರು. ಶಿಕ್ಷಕ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.