Advertisement

ಕಂಗನಾ ವರ್ಸಸ್‌ ಮಹಾ ಸರಕಾರ

12:34 AM Sep 05, 2020 | mahesh |

ಮುಂಬಯಿ: ಮುಂಬಯಿಯನ್ನು “ಪಾಕ್‌ ಆಕ್ರಮಿತ ಕಾಶ್ಮೀರ’ಕ್ಕೂ, ಮಹಾರಾಷ್ಟ್ರದ ಆಡಳಿತಾರೂಢ ಮೈತ್ರಿ ಪಕ್ಷವನ್ನು “ತಾಲಿಬಾನ್‌’ಗೂ ಹೋಲಿಕೆ ಮಾಡಿರುವ ಬಾಲಿವುಡ್‌ ನಟಿ ಕಂಗನಾ ರಣೌತ್‌ ವಿರುದ್ಧ ಮಹಾರಾಷ್ಟ್ರ ಸರಕಾರ ಕೆಂಡಕಾರಿದೆ.

Advertisement

ಕಂಗನಾ ಹೇಳಿಕೆಗೆ ಸಂಬಂಧಿಸಿದ ವಾಕ್ಸಮರ ಶುಕ್ರವಾರವೂ ಮುಂದುವರಿದಿದ್ದು, ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮಾತನಾಡಿ, ಮುಂಬಯಿ ಅಥವಾ ಮಹಾರಾಷ್ಟ್ರವು ಸುರಕ್ಷಿತವಾಗಿಲ್ಲ ಎಂದು ಯಾರಿಗಾದರೂ ಅನಿಸಿದರೆ, ಅಂಥವರಿಗೆ ಇಲ್ಲಿ ಬದುಕುವ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

ಧೈರ್ಯವಿದ್ದರೆ ತಡೆಯಿರಿ: ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ ನಟಿ ಕಂಗನಾ, ನಾನು ಮುಂಬಯಿಗೆ ಬರದಂತೆ ಅನೇಕರು ಬೆದರಿಕೆ ಹಾಕುತ್ತಿದ್ದಾರೆ. ಸೆ. 9ರಂದೇ ಮುಂಬಯಿಗೆ ಬರಲು ನಾನು ನಿರ್ಧರಿಸಿದ್ದೇನೆ. ತಾಕತ್ತಿದ್ದರೆ ನನ್ನನ್ನು ತಡೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಆಗಿದ್ದೇನು?: ಸದ್ಯ ಹಿಮಾಚಲ ಪ್ರದೇಶದಲ್ಲಿರುವ ಕಂಗನಾ ಅವರು ಗುರುವಾರವಷ್ಟೇ ಟ್ವೀಟ್‌ ಮಾಡಿ, ಮುಂಬಯಿ ಪೊಲೀಸರನ್ನು ದೂಷಿಸಿದ್ದರು. ಮೂವಿ ಮಾಫಿಯಾ ಗೂಂಡಾಗಳಿಗಿಂತಲೂ ಹೆಚ್ಚು ನನಗೆ ಮುಂಬಯಿ ಪೊಲೀಸರ ಬಗ್ಗೆಯೇ ಭಯವಾಗುತ್ತಿದೆ ಎಂದೂ ಹೇಳಿದ್ದರು. ತಮಗೆ ಮುಂಬಯಿ ಪೊಲೀಸರ ಭದ್ರತೆ ಮಾತ್ರ ಬೇಡವೇ ಬೇಡ ಎಂದೂ ಹೇಳಿದ್ದರು. ಈ ಟ್ವೀಟ್‌ಗೆ ಪ್ರತಿಯಾಗಿ ಕಂಗನಾ ವಿರುದ್ಧ ಸಿಡಿದೆದ್ದಿದ್ದ ಸಂಜಯ್‌ ರಾವತ್‌, ಮುಂಬಯಿ ಪೊಲೀಸರಿಗೆ ಅವಮಾನ ಮಾಡಿರುವ ಕಂಗನಾ ಇನ್ನು ಮುಂಬಯಿಗೆ ಬರುವುದೇ ಬೇಡ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, “ರಾವತ್‌ ನನಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ. ಇನ್ನು ಮುಂದೆ ಮುಂಬಯಿಗೆ ಬರಬೇಡ ಎಂದು ಹೇಳುತ್ತಿದ್ದಾರೆ. ಮುಂಬಯಿ ಏಕೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ?’ ಎಂದು ಪ್ರಶ್ನಿಸಿದ್ದರು.

ಬಿಜೆಪಿ ಆಕ್ರೋಶ
ಮುಂಬಯಿ ಕುರಿತು ಕಂಗನಾ ಆಡಿದ ಮಾತುಗಳಿಗೆ ಬಿಜೆಪಿ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಮಹಾರಾಷ್ಟ್ರ, ಮುಂಬಯಿ ಅಥವಾ ಇಲ್ಲಿನ ಜನರು ಹೇಗೆ ನಡೆದು­ಕೊಳ್ಳಬೇಕೆಂದು ಕಂಗನಾ ಕಲಿಸಿಕೊಡಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ಶಾಸಕ ಆಶಿಷ್‌ ಶೇಲಾರ್‌ ಹೇಳಿದ್ದಾರೆ. ಇದೇ ವೇಳೆ, ಶಿವಸೇನೆ ನಾಯಕ ರಾವತ್‌ ವಿರುದ್ಧವೂ ವಾಗ್ಧಾಳಿ ನಡೆಸಿರುವ ಅವರು, ಸುಶಾಂತ್‌ ಸಿಂಗ್‌ ಪ್ರಕರಣದಲ್ಲಿ ರಾವತ್‌ ಅವರು ಸುಖಾಸುಮ್ಮನೆ ಬಿಜೆಪಿಯನ್ನು ಟೀಕಿಸಿ, ತನಿಖೆಯ ಹಾದಿ ತಪ್ಪಿಸುವುದು ಬೇಡ ಎಂದೂ ಹೇಳಿದ್ದಾರೆ.

Advertisement

“ಮಾನಸಿಕ ಸ್ವಾಸ್ಥ್ಯ ಸರಿಯಿಲ್ಲ’
ಇನ್ನೊಂದೆಡೆ, ಕಂಗನಾ ವಿರುದ್ಧ ಮತ್ತೂಮ್ಮೆ ಹರಿಹಾಯ್ದಿರುವ ಶಿವಸೇನೆ ಸಂಸದ ಸಂಜಯ್‌ ರಾವತ್‌, “ಕಂಗನಾ ಅವರು ತಾವು ಉಣ್ಣುತ್ತಿರುವ ತಟ್ಟೆಗೇ ಉಗುಳುತ್ತಿದ್ದಾರೆ. ಅವರು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ. ಅವರಿಗೆ ಕೆಲವು ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿವೆ’ ಎಂದಿದ್ದಾರೆ.

ನಾನೊಬ್ಬಳು ಮರಾಠಾ ಹೆಣ್ಣು ಮಗಳು. ಮುಸ್ಲಿಂ ಬಾಹುಳ್ಯದ ಇಂಡಸ್ಟ್ರಿಯಲ್ಲಿ ರಾಣಿ ಲಕ್ಷ್ಮೀಬಾಯಿ, ಛತ್ರಪತಿ ಶಿವಾಜಿ ಮಹರಾಜ್‌ರಂತಹ ಸಿನಿಮಾ ಮಾಡಲು ನನ್ನ ಬದುಕು ಮತ್ತು ಭವಿಷ್ಯ ವನ್ನೇ ಪಣಕ್ಕಿಡಬೇಕಾಯಿತು. ಇಷ್ಟೆಲ್ಲ ಮಾತಾಡುತ್ತಿರುವ ನೀವು ರಾಜ್ಯಕ್ಕಾಗಿ ಏನು ಕೊಡುಗೆ ನೀಡಿದ್ದೀರಿ?
ಕಂಗನಾ ರಣೌತ್‌, ಬಾಲಿವುಡ್‌ ನಟಿ

Advertisement

Udayavani is now on Telegram. Click here to join our channel and stay updated with the latest news.

Next