ಮುಂಬೈ: ವಾಣಿಜ್ಯ ನಗರಿ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಆಡಳಿತಾರೂಢ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಮುಂಬೈಗೆ ಆಗಮಿಸಿದ್ದು, ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವಿನ ಜಟಾಪಟಿ ಮುಂದುವರಿದಿದೆ. ಬುಧವಾರ ಬೆಳಗ್ಗೆ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್ (ಬಿಎಂಸಿ) ಅಧಿಕಾರಿಗಳು ಅಕ್ರಮವಾಗಿ ಕಚೇರಿ ಕಟ್ಟಿರುವುದಾಗಿ ಆರೋಪಿಸಿದ್ದು, ಕಟ್ಟಡವನ್ನು ನೆಲಸಮಗೊಳಿಸಲು ಆರಂಭಿಸಿದ್ದಾರೆ.
ಮುಂಬೈನ ಪ್ರತಿಷ್ಠಿತ ಪಾಲಿ ಹಿಲ್ ಪ್ರದೇಶದಲ್ಲಿರುವ ನಟಿ ಕಂಗನಾ ರನೌತ್ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ಒಡೆಯುತ್ತಿರುವುದಾಗಿ ಕಂಗನಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಪೊಲೀಸರ ಭದ್ರತೆಯೊಂದಿಗೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಗನಾ ಕಚೇರಿಯನ್ನು ಧ್ವಂಸಗೊಳಿಸುತ್ತಿರುವ ವಿಡಿಯೋ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದು, ಮುಂಬೈ ಯಾರ ಆಸ್ತಿ ಎಂದು ಕಂಗನಾ ಮತ್ತೊಮ್ಮೆ ಕಿಡಿಕಾರಿದ್ದಾರೆ.
“ತನ್ನ ಕಚೇರಿಯನ್ನು ರಾಮಮಂದಿರಕ್ಕೆ ಹೋಲಿಸಿರುವ ಕಂಗನಾ ರನೌತ್, ಬಾಬರ್ ಇದನ್ನು ಒಡೆದು ಹಾಕುತ್ತಿರುವುದಾಗಿ ಪ್ರತಿಕ್ರಿಯೆ ನೀಡುವ ಮೂಲಕ ಶಿವಸೇನಾ ನೇತೃತ್ವದ ಸರ್ಕಾರಕ್ಕೆ” ತಿರುಗೇಟು ನೀಡಿದ್ದಾರೆ.
ಬೃಹನ್ಮುಂಬಯಿ ಮಹಾನಗರ ಪಾಲಿಕೆ ಅಧಿಕಾರಿಗಳು ಕಟ್ಟಡ ಒಡೆಯುವ ಬಗ್ಗೆ ಮಂಗಳವಾರ ಎಂಎಂಸಿ ಕಾಯ್ದೆಯ 351ನೇ ಸೆಕ್ಷನ್ ಪ್ರಕರಾ ಕಂಗನಾಗೆ ನೋಟಿಸ್ ಜಾರಿಗೊಳಿಸಿ, 24ಗಂಟೆಯೊಳಗೆ ಉತ್ತರ ನೀಡುವಂತೆ ತಿಳಿಸಿತ್ತು. ತನ್ನ ಕಟ್ಟಡವನ್ನು ಒಡೆಯುವ ಬಿಎಂಸಿ ನೋಟಿಸ್ ಗೆ ತನ್ನ ವಕೀಲ ರಿಜ್ವಾನ್ ಸಿದ್ದಿಖಿ ನೀಡಿರುವ ಉತ್ತರವನ್ನು ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಹಂಚಿಕೊಂಡಿದ್ದರು ಎಂದು ವರದಿ ಹೇಳಿದೆ.