ಗಂಗಾವತಿ: ಕನಕಗಿರಿ ಮತ್ತು ಕಾರಟಗಿ ಪಟ್ಟಣಗಳನ್ನು ನೂತನ ತಾಲೂಕುಗಳೆಂದು ಘೋಷಣೆ ಮಾಡಿ ಈಗಾಗಲೇ ಕೆಲ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದೆ. ನೂತನ ತಾಲೂಕುಗಳಿಗೆ ನೂತನ ಎಪಿಎಂಸಿಗಳನ್ನು ರಚನೆ ಮಾಡಲು ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಸಿದ್ಧತೆ ನಡೆಸಿದೆ. ಗಂಗಾವತಿ ಎಪಿಎಂಸಿಯನ್ನು ಮೂರು ಭಾಗ ಮಾಡಿ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ಎಪಿಎಂಸಿ ಎಂದು ಘೋಷಣೆ ಮಾಡಲು ಯೋಜಿಸಲಾಗಿದೆ.
ಎಪಿಎಂಸಿಯಲ್ಲಿ ಹಳೆಯ ಪದ್ಧತಿಯಂತೆ 11 ರೈತ ಪ್ರತಿನಿಧಿಗಳು ಒಂದು ಟಿಎಪಿಸಿಎಂಎಸ್ ಒಂದು ಸಹಕಾರಿ ಸಂಸ್ಕರಣಾ ಘಟಕ, ಸರಕಾರದಿಂದ ಮೂರು ನಿರ್ದೇಶಕರು ನಾಮನಿರ್ದೇಶನಗೊಂಡು ಒಟ್ಟು 17 ಜನ ನಿರ್ದೇಶಕರು ರೈತರು ಮತ್ತು ವರ್ತಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಲ್ಲಿಯ ಎಪಿಎಂಸಿ ಆದಾಯ ಕಾರಟಗಿಯಲ್ಲಿ ವಿಶೇಷ ಎಪಿಎಂಸಿ ಸ್ಥಾಪನೆಗೂ ಮೊದಲು ರಾಜ್ಯಕ್ಕೆ ಎರಡನೇಯ ಸ್ಥಾನದಲ್ಲಿತ್ತು. ನವಲಿ ರೈಸ್ ಪಾರ್ಕ್ ಸ್ಥಾಪನೆ ಹಿನ್ನೆಲೆಯಲ್ಲಿ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ ಕಾರಟಗಿಯಲ್ಲಿ ವಿಶೇಷ ಭತ್ತ ಎಪಿಎಂಸಿ ಸ್ಥಾಪನೆಯಾದಾಗಿನಿಂದಲೂ ಗಂಗಾವತಿ ಎಪಿಎಂಸಿ ಆದಾಯ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ಬಹಳಷ್ಟು ಹಿನ್ನೆಡೆಯಾಗಿದೆ. ಇದೀಗ ಎಪಿಎಂಸಿ ವಿಭಜನೆ ಮಾಡುವ ಮೂಲಕ ಗಂಗಾವತಿ ಎಪಿಎಂಸಿ ಶಕ್ತಿಯನ್ನು ಇನ್ನಷ್ಟು ಕುಸಿಯುವಂತೆ ಮಾಡಲಾಗುತ್ತಿದೆ.
ಯಾಕೆ ಬೇಕಿತ್ತು ಚುನಾವಣೆ: ನೂತನ ತಾಲೂಕು ರಚನೆ ಹಿನ್ನೆಲೆಯಲ್ಲಿ ಎಪಿಎಂಸಿ ನಿಯಮದಂತೆ ನೂತನ ಕೃಷಿ ಮಾರುಕಟ್ಟೆ ರಚನೆಯಾಗಬೇಕಾಗಿರುವುದು ನಿಯಮದಂತೆ ಸರಿಯಿದ್ದರೆ ಇತ್ತೀಚೆಗೆ ಕಾರಟಗಿ ಮತ್ತು ಗಂಗಾವತಿ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸುವ ಅಗತ್ಯವೆನಿತ್ತು. ಹಣ ಮತ್ತು ಸಮಯದ ಪೋಲು ಮಾಡಲು ಈ ಚುನಾವಣೆ ನಡೆಯಿತೇ ಎಂಬ ಪ್ರಶ್ನೆ ರೈತರಲ್ಲಿ ಕಾಡುತ್ತಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರು ರೈತರಿಗಾಗಿ ಹಲವು ಯೋಜನೆ ಸರಕಾರದಿಂದ ತರಲು ಸಿದ್ಧತೆ ನಡೆಸಿದ ಸಂದರ್ಭದಲ್ಲೇ ಈ ವಿಭಜನೆ ಮಾತು ಕೇಳಿ ಬರುತ್ತಿದೆ. ಕಾರಟಗಿ ಮತ್ತು ಗಂಗಾವತಿ ಎಪಿಎಂಸಿಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರು ಇರುವುದರಿಂದ ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಿ ನೂತನ ಎಪಿಎಂಸಿ ರಚಿಸಿ ಸರಕಾರದಿಂದ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಎಲ್ಲಾ ನಿರ್ದೇಶಕರನ್ನು ನಾಮನಿರ್ದೇಶನ ಮಾಡಿಸುವ ಮೂಲಕ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನೂತನ ಕೃಷಿ ಉತ್ಪನ್ನ ಮಾರುಕಟ್ಟೆ ರಚಿಸಲು ಯಾರ ಆಕ್ಷೇಪವೂ ಇಲ್ಲ. ಆದರೆ ಇದೀಗ ಗಂಗಾವತಿ, ಕಾರಟಗಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದೆ. ಅವರ ಅವಧಿ ಇನ್ನೂ 40 ತಿಂಗಳಿದ್ದು, ನಂತರ ವಿಭಜನೆಯಾಗಬೇಕು. ಕಾಂಗ್ರೆಸ್‌ನವರು ತಮಗೆ ಅಧಿಕಾರ ಸಿಕ್ಕಿಲ್ಲ, ಕಾನೂನಿನಲ್ಲಿ ಅವಕಾಶವಿದೆ ಎಂದು ಕುಂಟು ನೆಪ ಹೇಳಿ ಈಗಿರುವ ಆಡಳಿತ ಮಂಡಳಿಯನ್ನು ವಿಸರ್ಜನೆ ಮಾಡಿ ನೂತನ ಎಪಿಎಂಸಿಗಳಿಗೆ ಆಡಳಿತ ಮಂಡಳಿಯನ್ನು ನಾಮನಿರ್ದೇಶನ ಮಾಡಲು ಯತ್ನಿಸಿದರೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತದೆ.
ಪರಣ್ಣ ಮುನವಳ್ಳಿ,
ಶಾಸಕರು
ಕೆ. ನಿಂಗಜ್ಜ