ಕನಕಗಿರಿ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸರ್ಕಾರ ಪ್ರತಿ ವರ್ಷವೂ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಲ್ಲಿನ ಕುಡಿಯುವ ನೀರಿನ ಯೋಜನೆ 7 ವರ್ಷಗಳಾದರೂ ಅರ್ಧವೂ ಮುಗಿದಿಲ್ಲ.
ಹೌದು. ಹೇರೂರು ಮತ್ತು ಹುಲಿಹೈದರ್ ಜಿಪಂ ವ್ಯಾಪ್ತಿಯ 27 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ರಾಜೀವ್ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿಯುತ್ತಿದೆ. ಬೇಸಿಗೆಯಲ್ಲಿ ಹಲವಾರು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಸಾಮಾನ್ಯವಾಗಿದೆ. ಇದನ್ನರಿತ ಮಾಜಿ ಸಚಿವ ಶಿವರಾಜ ತಂಗಡಗಿ 27 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ 2012-13ನೇ ಸಾಲಿನಲ್ಲಿ ಭೂಮಿಪೂಜೆ ನೆರವೇರಿಸುವ ಮೂಲಕ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಭೂಮಿಪೂಜೆ ನೆರವೇರಿಸಿ 7 ವರ್ಷಗಳಾದರೂ ಅರ್ಧದಷ್ಟು ಕಾಗಮಾರಿ ಮುಗಿದಿಲ್ಲ.
ಇದು 21 ಕೋಟಿ ರೂ. ವೆಚ್ಚದಲ್ಲಿ ಹೇರೂರು ಮತ್ತು ಹುಲಿಹೈದರ್ ಜಿಪಂ ವ್ಯಾಪ್ತಿಯ 27 ಗ್ರಾಮಗಳಿಗೆ ತುಂಗಭದ್ರಾ ಡ್ಯಾಮ್‌ನಿಂದ ನೀರು ಪೂರೈಸುವ ಯೋಜನೆ ಇದಾಗಿದೆ. ಸುಳೇಕಲ್ಲ ಹತ್ತಿರ 21 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿ ಎಡದಂಡೆ ಕಾಲುವೆಯಿಂದ ಪೈಪ್‌ಲೈನ್ ಮೂಲಕ ಕೆರೆ ತುಂಬಿಸುವುದು, ನಂತರ ನೀರು ಶುದ್ಧೀಕರಿಸಿ ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಪೂರೈಸುವ ಯೋಜನೆ ಇದ್ದಾಗಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತೆದಾರರ ನಿರ್ಲಕ್ಷ್ಯದಿಂದ ಯೋಜನೆ ಅರ್ಧಕ್ಕೆ ನಿಂತಿದೆ. ಕಾಮಗಾರಿಗೆ ನಿಗದಿಪಡಿಸಿದ ಅವಧಿಯೊಳಗೆ ಗ್ರಾಮಗಳಿಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಕೆರೆ ನಿರ್ಮಾಣ, ಟ್ಯಾಂಕ್ ನಿರ್ಮಾಣ, ಪಂಪ್‌ಹೌಸ್, ಮೇಲ್ಮಟ್ಟದ ಜಲಾಗಾರ ಸೇರಿದಂತೆ ವಿವಿಧ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಗುತ್ತಿಗೆಯನ್ನು ಬಳ್ಳಾರಿಯ ಶ್ರೀನಿವಾಸ ಕನ್‌ಸ್ಟ್ರಕ್ಷನ್ಸ್‌ನವರು ಪಡೆದಿದ್ದಾರೆ.
ಇಚ್ಛಾಶಕ್ತಿ ಕೊರತೆ: ಈ ಭಾಗದ ಜಿಪಂ ಸದಸ್ಯರು ಒಂದೇ ಒಂದು ಬಾರಿಯೂ ರಾಜೀವ್ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆಯ ಬಗ್ಗೆ ಜಿಪಂ ಸಾಮಾನ್ಯ ಸಭೆಯಲ್ಲಿ ಚಕಾರ ಎತ್ತಿಲ್ಲ್ಲ. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಾಮಗಾರಿಯು 7 ವರ್ಷಗಾಳದರೂ ಅರ್ಧದಷ್ಟು ಮುಗಿದಿಲ್ಲ. ಇದರಿಂದ ಜನರಿಗೆ ಶುದ್ಧ ಕುಡಿಯುವ ನೀರು ಸಿಗದೇ, ಫ್ಲ್ಲೋರೈಡ್‌ಯುಕ್ತ ನೀರೇ ಗತಿಯಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು, 27 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತೆ ಉಲ್ಬಣಗೊಳ್ಳಲಿದೆ!
ಯೋಜನೆಗೆ ಒಳಪಡುವ ಗ್ರಾಮ: ಹೇರೂರು, ಗೋನಾಳ್, ಬಾಪಿರೆಡ್ಡಿ ಕ್ಯಾಂಪ್, ಡಾಕ್ಟರ್ ಕ್ಯಾಂಪ್, ಕೇಸರಹಟ್ಟಿ, ಕೆಸಕ್ಕಿ ಹಂಚಿನಾಳ, ಕೆಸಕ್ಕಿ ಹಂಚಿನಾಳ ಕ್ಯಾಂಪ್, ಗುಳದಾಳ, ಮರಕುಂಬಿ, ಹಣವಾಳ, ಹಣವಾಳ ಕ್ಯಾಂಪ್, ಸೊಂಗನಾಳ, ಬಟ್ಟರ ನರಸಾಪುರ, ವಡ್ಡರಹಟ್ಟಿ, ವಡ್ಡರಹಟ್ಟಿ ಕ್ಯಾಂಪ್, ಹುಲಿಹೈದರ್, ಹೊಸಗುಡ್ಡ, ಕನಕಾಪುರ, ಮಲ್ಲಿಗೆವಾಡ, ನೀರಲೂಟಿ, ಲಾಯದಹುಣಸಿ, ಹನುಮನಾಳ, ಸಿರಿವಾರ, ಗೋಡಿನಾಳ, ಕೆ. ಕಾಟಾಪುರ, ಬೈಲಕ್ಕಂಪುರ, ಹಿರೇಖೇಡಾ, ಚಿಕ್ಕಖೇಡಾ, ವರನಖೇಡ ಗ್ರಾಮಗಳು ಈ ಯೋಜನೆಗೆ ಒಳಪಡಲಿವೆ.
ರಾಜೀವ್ ಗಾಂಧಿ ಕುಡಿಯುವ ನೀರಿನ ಯೋಜನೆಗೆ 36 ಎಕರೆ ಭೂಮಿ ಅವಶ್ಯವಿದ್ದು, ಭೂಮಿಯನ್ನು ಮಂಜೂರು ಮಾಡಿಲ್ಲ. ಸದ್ಯ 21 ಎಕರೆ ಭೂವಿ ನೀಡುವುದಾಗಿ ಕಂದಾಯ ಇಲಾಖೆಯವರು ಹೇಳಿದ್ದಾರೆ. ಕಾಮಗಾರಿಗೆ ನಿಗದಿ ಪಡಿಸಿದ ಅನುದಾನವಿದೆ. ಆದರೆ ಕಾಮಗಾರಿ ಬೇಕಾದ ಭೂಮಿ ಮಂಜೂರಾಗಿಲ್ಲ. ಆದ್ದರಿಂದ ಕಾಮಗಾರಿಯನ್ನು ಪ್ರಾರಂಭಿಸಿಲ್ಲ. ಈಗಾಗಲೇ ಪೈಪ್‌ಲೈನ್ ಕೆಲಸ, ಮೇಲ್ತೊಟ್ಟಿ ಕೆಲಸ ಕೊನೆಯ ಹಂತದಲ್ಲಿದೆ.
•ಚಿದಾನಂದ, ಕಿರಿಯ ಅಭಿಯಂತರ
ರಾಜೀವ್ ಗಾಂಧಿ ಶುದ್ಧ ಕುಡಿಯುವ ನೀರಿನ ಯೋಜನೆಗೆ ಭೂಮಿಯ ಕೊರತೆ ಇದ್ದು, ಈಗಾಲೇ 21 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಕೆರೆ ನಿರ್ಮಾಣ ಮಾಡಲು ನೀಲ ನಕ್ಷಾಶೆ ತಯಾರಿಸಿ ಅನುಮೋದನೆ ಕಳಿಸಲಾಗಿದೆ. ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ.
•ಬಸವರಾಜ ದಢೇಸುಗೂರು, ಶಾಸಕ
•ಶರಣಪ್ಪ ಗೋಡಿನಾಳ