Advertisement

ಬೇಸಿಗೆ ಮುನ್ನವೇ ನೀರಿಗೆ ಸಮಸ್ಯೆ

01:26 PM Feb 26, 2020 | Naveen |

ಕಂಪ್ಲಿ: ಬೇಸಿಗೆ ಮುನ್ನವೇ ಪಟ್ಟಣದ ಜನತೆಗೆ ನೀರಿನ ಸಮಸ್ಯೆ ಎದುರಾಗಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಕಲುಷಿತ ನೀರು ಸರಬರಾಜಿನಿಂದ ಜನರು ರೋಗಕ್ಕೆ ತುತ್ತಾಗುವ ಭಯ ಇನ್ನೊಂದು ಕಡೆಯಾಗಿದೆ.

Advertisement

ಪಟ್ಟಣದ 23 ವಾರ್ಡ್‌ಗಳಿಗೆ ಪುರಸಭೆಯಿಂದ ನೀರು ಪೂರೈಕೆಯಾಗುತ್ತಿದೆ. ಆದರೆ, ಶುದ್ಧೀಕರಣ ಘಟಕವು ಕಳೆದ 2 ವರ್ಷದಿಂದ ಹಾಳಾಗಿದ್ದರೂ, ದುರಸ್ತಿ ಗೋಜಿಗೆ ಹೋಗಿಲ್ಲ. ಘಟಕದಲ್ಲಿರುವ ಫಿಲ್ಟರ್‌ ಬೆಡ್‌, ಆಲಂಟ್ಯಾಂಕ್‌, ಯಂತ್ರಗಳು ಹಾಳಾಗಿದ್ದು, ಪಟ್ಟಣದ ಜನರು ಕಲುಷಿತ ನೀರು ಸೇವಿಸುವ ದುಸ್ಥಿತಿಯಾಗಿದೆ.

ನೀರು ಸಂಗ್ರಹದ ಘಟಕಗಳಲ್ಲಿ ಹಸಿರು ಪಾಚಿಗಟ್ಟಿದ್ದು, ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೆಲ ವಾರ್ಡ್‌ಗಳ ಜನರು ನೀರು ಪೂರೈಕೆಗೆ ಒತ್ತಡ ಹಾಕಿದರೂ, ಅಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸುವಲ್ಲಿ ಮುಂದಾಗದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಪಕ್ಕದಲ್ಲಿ ತುಂಗಭದ್ರಾ ನದಿ ಇದ್ದರೂ ಜನ ನೀರಿನ ಸಮಸ್ಯೆ ಎದುರಿಸುತ್ತಿರುವುದು ವಿಪರ್ಯಾಸ. ಪಟ್ಟಣದ 23 ವಾರ್ಡ್ಗಳಲ್ಲಿ ಸುಮಾರು 49 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. 300ಕ್ಕೂ ಹೆಚ್ಚು ಸಾರ್ವಜನಿಕ ನಲ್ಲಿಗಳು, 3656 ಖಾಸಗಿನಲ್ಲಿಗಳು ಇವೆ. ಇದರ ಜತೆಗೆ 26 ಕೈ ಪಂಪ್‌ಗ್ಳಿದ್ದು, ಇದರಲ್ಲಿ ಕೆಲ ಪಂಪ್‌ಗ್ಳು ಕಾರ್ಯನಿರ್ವಹಿಸಿದರೆ, ಇನ್ನೂ ಕೆಲ ಪಂಪ್‌ ಗಳಲ್ಲಿ ನೀರಿಲ್ಲದಂತಾಗಿದೆ. 16 ಸಿಸ್ಟನ್‌ ಟ್ಯಾಂಕ್‌ಗಳನ್ನು ಪುರಸಭೆ ವತಿಯಿಂದ ನಿರ್ಮಾಣ ಮಾಡಲಾಗಿದೆ. 10 ಲಕ್ಷ ಲೀ. ಸಾಮರ್ಥ್ಯದ 2 ಹಾಗೂ 5ಲಕ್ಷ ಲೀ.3 ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. 6.60 ಲಕ್ಷ ಲೀ. ಸಾಮರ್ಥ್ಯದ ನೆಲಮಟ್ಟದಲ್ಲಿ ಟ್ಯಾಂಕ್‌ಗಳಿವೆ.

ಸರ್ಕಾರ ಕುಡಿಯುವ ನೀರಿಗಾಗಿ ಪ್ರತಿವರ್ಷ ಲಕ್ಷಾಂತರ ಅನುದಾನ ಬಿಡುಗಡೆ ಆಗುತ್ತದೆ. ಆದರೆ, ಜನತೆಗೆ ನೀರಿನ ಸಮಸ್ಯೆ ನೀಗುತ್ತಿಲ್ಲ. 23 ವಾರ್ಡ್‌ಗಳ ಪೈಕಿ ಕೆಲ ವಾರ್ಡ್ಗಳನ್ನು ಹೊರತುಪಡಿಸಿದರೆ, ಇನ್ನುಳಿದ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಕೆಲ ವಾರ್ಡ್‌ಗಳಲ್ಲಿ ನೀರು ಸಿಗುತ್ತದೆ ಎಂಬುದು ಬಿಟ್ಟರೆ, ಇನ್ನೂಳಿದ ವಾರ್ಡ್‌ಗಳಲ್ಲಿ 5 ದಿನಕೊಮ್ಮೆ ನೀರು ಸಿಗುವುದು ಕಷ್ಟಕರವಾಗಿದೆ. ಪಕ್ಕದ ನದಿಯಿಂದ ಸಾಕಷ್ಟು ನೀರು ಆಂಧ್ರಕ್ಕೆ ಹೋಗುತ್ತಿದೆ. ಆದರೆ, ನದಿ ಪಕ್ಕದಲ್ಲಿರುವ ಕಂಪ್ಲಿ ಜನತೆಗೆ ನೀರಿನ ದಾಹದ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ.

Advertisement

ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ತಲೆದೋರಿದ್ದು, ಪುರಸಭೆ ಅಧಿಕಾರಿಗಳು ಎಚ್ಚೆತ್ತು ಎಲ್ಲ ವಾರ್ಡ್‌ಗಳಿಗೆ ನೀರು ಹಾಯಿಸಲು ಸೂಕ್ತ ಕ್ರಮವಹಿಸುವ ಜತೆಗೆ ಜನತೆಗೆ ಶುದ್ಧ ನೀರು ಸರಬರಾಜು ಮಾಡಲು ಮುಂದಾಗಬೇಕಾಗಿದೆ.

ಪಟ್ಟಣದ ನೀರು ಸರಬರಾಜು ಮಾಡುವ ಯಂತ್ರ ದುರಸ್ತಿಗೆ ಬಂದಿದ್ದು, ಶೀಘ್ರ ದುರಸ್ತಿ ಮಾಡಿಸಿ ಸಮರ್ಪಕವಾಗಿ ನೀರು ಒದಗಿಸಲಾಗುವುದು. ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ 24×7 ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿರುವುದರಿಂದ ನೀರಿನ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದು, ಶೀಘ್ರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲಾಗುವುದು.
ರಮೇಶ್‌ ಬಡಿಗೇರ,
ಮುಖ್ಯಾಧಿಕಾರಿ, ಪುರಸಭೆ.

„ಜಿ.ಚಂದ್ರಶೇಖರಗೌಡ

Advertisement

Udayavani is now on Telegram. Click here to join our channel and stay updated with the latest news.

Next