Advertisement

Forbes; ಬೆಂಗಳೂರಿನ ಕಾಮತ್‌ ಸೋದರರು ದೇಶದ ಕಿರಿಯ ಶ್ರೀಮಂತರು

12:53 AM Apr 04, 2024 | Team Udayavani |

ಹೊಸದಿಲ್ಲಿ/ಮುಂಬಯಿ: ಪ್ರಸಕ್ತ ವರ್ಷಕ್ಕೆ ಸಂಬಂಧಿಸಿ ಫೋರ್ಬ್ಸ್ ಶ್ರೀಮಂತರ ಪಟ್ಟಿ ಪ್ರಕಟವಾಗಿದ್ದು, ಅದರಲ್ಲಿ ಕರ್ನಾಟಕದ ಐವರು ಸೇರಿದ್ದಾರೆ. ಆನ್‌ಲೈನ್‌ ಷೇರು ಮಾರುಕಟ್ಟೆ ಝೆರೋದಾ ಡಾಟ್‌ ಕಾಂ ಸ್ಥಾಪಿಸಿ ಜನಪ್ರಿಯತೆ ಪಡೆದುಕೊಂಡ ಬೆಂಗಳೂರಿನ ನಿಖಿಲ್‌ ಕಾಮತ್‌ ಮತ್ತು ನಿತಿನ್‌ ಕಾಮತ್‌ ಅವರು ದೇಶದ ಅತ್ಯಂತ ಕಿರಿಯ ಶ್ರೀಮಂತರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕರಾಗಿರುವ ಬಿನ್ನಿ ಬನ್ಸಲ್‌ ಮತ್ತು ಸಚಿನ್‌ ಬನ್ಸಲ್‌ ಕೂಡ ಸ್ಥಾನ ಪಡೆದಿದ್ದಾರೆ.

Advertisement

37 ವರ್ಷದ ನಿತಿನ್‌ ಕಾಮತ್‌ 3.1 ಬಿಲಿಯನ್‌ ಡಾಲರ್‌ (25,890 ಕೋ. ರೂ.) ಸಂಪತ್ತು ಹೊಂದಿ ದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅವರ ಸಂಪತ್ತಿನ ಪ್ರಮಾಣ ಏರಿಕೆಯಾಗಿದೆ. ಅವರ ಅಣ್ಣ 44 ವರ್ಷದ ನಿಖಿಲ್‌ ಕಾಮತ್‌ 4.8 ಬಿಲಿಯನ್‌ ಡಾಲರ್‌ (40,000 ಕೋ. ರೂ.) ಸಂಪತ್ತು ಹೊಂದಿದ್ದಾರೆ. 2010ರಲ್ಲಿ ಬೆಂಗಳೂರಿನಲ್ಲಿ ಸ್ಟಾಕ್‌ ಮಾರ್ಕೆಟ್‌ ಬ್ರೋಕರೇಜ್‌ ಕಂಪೆನಿ ಝೆರೋದಾ ಸ್ಥಾಪಿಸಿರುವ ಈ ಸಹೋದರರ ಒಟ್ಟು ಆಸ್ತಿ ಮೌಲ್ಯ 7.9 ಬಿ. ಡಾಲರ್‌.

ಝೆರೋದಾಗೆ ಒಂದು ಕೋಟಿ ಗ್ರಾಹಕರಿದ್ದಾರೆ. ನಿಖೀಲ್‌ ಕಾಮತ್‌ ಶ್ರೀಮಂತರ ಪಟ್ಟಿಯಲ್ಲಿ 1062 ಹಾಗೂ ನಿತಿನ್‌ ಕಾಮತ್‌ 648ನೇ ಸ್ಥಾನ ಪಡೆದುಕೊಂಡಿದ್ದಾರೆ.

ಪಟ್ಟಿಯಲ್ಲಿ ಸ್ಥಾನ
ಆನ್‌ಲೈನ್‌ ಮಾರುಕಟ್ಟೆ ಕಂಪೆನಿ ಫ್ಲಿಪ್‌ಕಾರ್ಟ್‌ನ ಸಂಸ್ಥಾಪಕರಾಗಿರುವ ಬಿನ್ನಿ ಬನ್ಸಲ್‌ ಮತ್ತು ಸಚಿನ್‌ ಬನ್ಸಲ್‌ ಒಟ್ಟು 2.8 ಬಿಲಿಯನ್‌ ಡಾಲರ್‌ (23,385 ಕೋಟಿ ರೂ.) ಸಂಪತ್ತು ಹೊಂದಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಬಿನ್ನಿ ಬನ್ಸಲ್‌ ಹೊಂದಿರುವ ಸಂಪತ್ತಿನ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯೇ ಆಗಿದೆ. ಇದರ ಹೊರತಾಗಿಯೂ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಕಿರಿಯರು ಎಂಬ ಹೆಗ್ಗಳಿಕೆಯಲ್ಲಿ ಮುಂದುವರಿದಿದ್ದಾರೆ. ಶ್ರೀಮಂತರ ಪಟ್ಟಿಯಲ್ಲಿ ಬಿನ್ನಿ ಬನ್ಸಲ್‌ 2,162 ಹಾಗೂ ಸಚಿನ್‌ ಬನ್ಸಲ್‌ 2,410ನೇ ಸ್ಥಾನದಲ್ಲಿದ್ದಾರೆ.

ಇದಲ್ಲದೆ ಈ ಪಟ್ಟಿಯಲ್ಲಿ ಬೆಂಗಳೂರಿನವರೇ ಆಗಿರುವ ಸಾಫ್ಟ್ವೇರ್‌ ದೈತ್ಯ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿಗೆೆ 165ನೇ ರ್‍ಯಾಂಕ್‌ ಪ್ರಾಪ್ತವಾಗಿದ್ದು, ಅವರ ಒಟ್ಟು ಸಂಪತ್ತಿನ ಮೌಲ್ಯ 12 ಬಿಲಿಯನ್‌ ಡಾಲರ್‌ (1 ಲಕ್ಷ ಕೋಟಿ ರೂ.) ಆಗಿದೆ. ಕಳೆದ ವರ್ಷ ಭಾರತಕ್ಕೆ ಸಂಬಂಧಿಸಿದ ಶ್ರೀಮಂತರ ಪಟ್ಟಿಯಲ್ಲಿ ಅವರು 17ನೇ ಸ್ಥಾನವನ್ನು ಪಡೆದುಕೊಂಡಿದ್ದರು.

Advertisement

ಎಷ್ಟು ಶ್ರೀಮಂತರು?
-ಝೆರೋದಾದ ನಿಖಿಲ್‌ ಕಾಮತ್‌ 40,000, ನಿತಿನ್‌ ಕಾಮತ್‌ 25,890 ಕೋಟಿ ರೂ. ಒಡೆಯರು.
-ಫ್ಲಿಪ್‌ಕಾರ್ಟ್‌ ಸಂಸ್ಥಾಪಕರಾದ
ಬಿನ್ನಿ ಬನ್ಸಲ್‌-ಸಚಿನ್‌ ಬನ್ಸಲ್‌ ಒಟ್ಟು ಆಸ್ತಿಮೌಲ್ಯ 23,385 ಕೋಟಿ ರೂ.
-ವಿಪ್ರೋ ಮಾಲಕ ಅಜೀಮ್‌ ಪ್ರೇಮ್‌ಜಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 165ನೇ ಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next