Advertisement

Udupi: ಕಮಲಾಕ್ಷಿ ಸೊಸೈಟಿ ವಂಚನೆ ಸದನದಲ್ಲಿ ಪ್ರಸ್ತಾವ: ಶಾಸಕ ಯಶ್‌ಪಾಲ್‌ ಸುವರ್ಣ

12:16 AM Dec 09, 2024 | Team Udayavani |

ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ಠೇವಣಿ ಸಂಗ್ರಹಿಸಿ ವಂಚಿಸಿರುವ ಪ್ರಕರಣದ ಬಗ್ಗೆ ಇಲಾಖೆಯ ಅಧಿಕಾರಿಗಳಿಂದ ವಿಸ್ತೃತ ಮಾಹಿತಿ ಕೋರಿದ್ದು, ತನಿಖೆಯ ಪ್ರಗತಿ ಬಗ್ಗೆಯೂ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವಿಸಿ ವಂಚನೆಗೊಳಗಾದ ಠೇವಣಿದಾರರಿಗೆ ನ್ಯಾಯ ಒದಗಿಸಲು ರಾಜ್ಯ ಸರಕಾರವನ್ನು ಅಗ್ರಹಿಸುವುದಾಗಿ ಶಾಸಕ ಯಶ್‌ಪಾಲ್‌ ಸುವರ್ಣ ತಿಳಿಸಿದ್ದಾರೆ.

Advertisement

ಹಲವಾರು ಸಂತ್ರಸ್ತ ಠೇವಣಿದಾರರು ಶಾಸಕರ ಕಚೇರಿಗೆ ಬಂದು ತನಿಖೆ ಚುರುಕುಗೊಳಿಸಿ ಠೇವಣಿ ಹಣವನ್ನು ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಹಣಕಾಸು ಸಂಸ್ಥೆಗಳ ವಂಚನೆಯಿಂದ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಸಂಬಂಧ ಕಾನೂನು ತಿದ್ದುಪಡಿಗೆ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ 2024 ಅನ್ನು ಸಚಿವ ಸಂಪುಟ ಅನುಮೋದಿಸಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಬಹುದು. ಇದೇ ವೇಳೆ ಸರಕಾರ ತತ್‌ಕ್ಷಣ ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಂಚನೆ ಮಾಡಿದ ವ್ಯಕ್ತಿಗಳ ಹಾಗೂ ಸಂಸ್ಥೆಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಠೇವಣಿದಾರರ ಹಣವನ್ನು ನೀಡಬೇಕು. ಆರೋಪಿಗಳ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಉಡುಪಿಯ ಪರಿವಾರ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಬ್ಯಾಂಕಿಂಗ್‌ ನಿಯಮಾವಳಿಯನ್ನು ಮೀರಿ ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಾರ್ವಜನಿಕರ ದೂರಿನಂತೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ ಸೂಚನೆ ಮೇರೆಗೆ ರಾಜ್ಯ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರು ಜಿಲ್ಲಾ ಉಪ ನಿಬಂಧಕರಿಗೆ ತತ್‌ಕ್ಷಣ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಸ್ಪಷ್ಟ ಅಭಿಪ್ರಾಯ ಹಾಗೂ ಪೂರಕ ದಾಖಲೆಯೊಂದಿಗೆ ತುರ್ತಾಗಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಸಹಕಾರಿ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ ಕೂಡಲೇ ವರದಿ ನೀಡುವಂತೆ ಆಗ್ರಹಿಸುವುದಾಗಿ ಯಶ್‌ಪಾಲ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next