Advertisement

ಹಸಿದವರ ಹೊಟ್ಟೆ ತಣಿಸಿದ ಕಾಮಧೇನು

04:54 PM Jun 14, 2021 | Team Udayavani |

ವಿಶೇಷ ವರದಿ

Advertisement

ಬಾಗಲಕೋಟೆ: ಕೊರೊನಾ 2ನೇ ಅಲೆಯ ಸಂಕಷ್ಟದ ದಿನಗಳಲ್ಲಿ ನಗರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಆಸ್ಪತ್ರೆಗಾಗಿ ಬಂದಿದ್ದ ರೋಗಿಗಳ ಸಂಬಂಧಿಕರು, ಹೋಂ ಐಸೋಲೇಷನ್‌ನಲ್ಲಿದ್ದವರ ಹಸಿವು ನೀಗಿಸುವ ಕಾರ್ಯದಲ್ಲಿ ಇಲ್ಲಿನ ಸಮಾನ ಮನಸ್ಕರು ಕೂಡಿ ಕಟ್ಟಿದ “ಕಾಮಧೇನು’ ಸಂಸ್ಥೆ ತೊಡಗಿದೆ.

ಹೌದು. ಸರ್ಕಾರ ಲಾಕ್‌ಡೌನ್‌ ಹೇರಿದ ದಿನದಿಂದ ಇಂದಿನವರೆಗೂ ಒಟ್ಟು 39 ದಿನಗಳ ಕಾಲ ಪ್ರತಿದಿನ ಮಧ್ಯಾಹ್ನ-ರಾತ್ರಿ ಊಟದ ವ್ಯವಸ್ಥೆ ಮಾಡಿ ಒಟ್ಟು 39 ಸಾವಿರ ಜನರ ಮನ ತಲುಪಿದೆ.

ನಿತ್ಯವೂ ಮನೆ-ಕೈ ಸೇರುತ್ತಿತ್ತು ಊಟದ ಪೊಟ್ಟಣ: ಆರಂಭದಲ್ಲಿ ಕಾಮಧೇನು ಸಂಸ್ಥೆ ಜಿಲ್ಲಾಸ್ಪತ್ರೆ ಹತ್ತಿರ ಮಧ್ಯಾಹ್ನ ಊಟದ ಪೊಟ್ಟಣ, ಶುದ್ಧ ಕುಡಿಯುವ ನೀರು ವಿತರಣೆ ಆರಂಭಿಸಿತ್ತು.

ಸೋಂಕಿತರ ಸಂಬಂಧಿಕರಿಂದ ಊಟದ ಪೊಟ್ಟಣ ವಿತರಿಸುವ ಸಂದರ್ಭದಲ್ಲಿ ಅವರ ಭಾವನೆಯರಿತು ಅವರ ಅವಶ್ಯಕತೆ ಹೆಚ್ಚಾಗಿದೆ ಎಂಬುದು ಗೊತ್ತಾಯಿತು. ಹೀಗಾಗಿ ಮಧ್ಯಾಹ್ನ ಮಾತ್ರ ಆರಂಭಿಸಿದ್ದ ಊಟದ ವ್ಯವಸ್ಥೆಯನ್ನು ರಾತ್ರಿಯೂ ವಿಸ್ತರಿಸಿದ್ದೆವು. ಈ ವೇಳೆ ನಗರದ ವಿಪ್ರ ಸಮಾಜದ ಕೇಸರಿ ಟ್ರಸ್ಟ್‌ ಪದಾಧಿಕಾರಿಗಳು ನಮಗೆ ಸಂಪರ್ಕಿಸಿ ಕಾಮಧೇನು ಸಹಯೋಗದಲ್ಲಿ ರಾತ್ರಿ ಊಟದ ಸೇವೆ ನಾವು ಕಲ್ಪಿಸುತ್ತೇವೆಂದು ಸ್ವಯಂ ಪ್ರೇರಣೆಯಿಂದ ವಹಿಸಿಕೊಂಡರೆಂದು ಕಾಮಧೇನು ಸಂಸ್ಥೆಯ ಹಿರಿಯ ಸದಸ್ಯ ಅಶೋಕ ಮುತ್ತಿನಮಠ ತಿಳಿಸಿದರು.

Advertisement

ಮಧ್ಯಾಹ್ನ ಕಾಮಧೇನು ಸಂಸ್ಥೆಯಿಂದ, ರಾತ್ರಿ ವಿಪ್ರ ಕೇಸರಿ ಟ್ರಸ್ಟ್‌ನಿಂದ ಊಟದ ಊಟದ ವ್ಯವಸ್ಥೆ ಮುಂದುವರಿದಾಗ, ಬೆಳಗ್ಗೆ ಉಪಾಹಾರದ ವ್ಯವಸ್ಥೆ ಮಾಡುವ ಯೋಚನೆ ಮಾಡಿದ್ದೆವು. ಆಗ ಬ್ರಾಹ್ಮಣ ಸಮಾಜ ತರುಣ ಸಂಘದ ಪದಾಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ನಿಮ್ಮ ಜತೆಗೆ ನಾವೂ ಕೈ ಜೋಡಿಸುತ್ತೇವೆಂದರು. ಅವರು ಬೆಳಗಿನ ಉಪಾಹಾರ ಜವಾಬ್ದಾರಿ ವಹಿಸಿಕೊಂಡರು. ಇದು ನಮಗೆಲ್ಲಾ ಪ್ರೇರಕ ಸಂಗತಿ ಎಂದು ಕಾಮಧೇನು ಸಂಸ್ಥೆಯ ಇನ್ನೋರ್ವ ಸದಸ್ಯ ವಿಜಯ ಸುಲಾಖೆ ತಿಳಿಸಿದರು.

25 ಶ್ರಮಿಕ ಸಮಾಜಕ್ಕೆ ಆಹಾರಧಾನ್ಯ: ನಿತ್ಯ ಊಟದ ಪೊಟ್ಟಣ ಪೂರೈಸುವ ಜತೆಗೆ ಬಾಗಲಕೋಟೆಯ 25 ಶ್ರಮಿಕ ಸಮಾಜಗಳನ್ನು ಗುರುತಿಸಿ ಕಡುಬಡವರಿಗೆ 900ಕ್ಕೂ ಹೆಚ್ಚು ದಿನಬಳಕೆಯ ಕಿಟ್‌ ವಿತರಿಸಲಾಯಿತು. ಕಾಮಧೇನು ಸಂಸ್ಥೆ ಜತೆಗೆ ವಿಪ್ರ ಸಮಾಜ ಕೇಸರಿ ಟ್ರಸ್ಟ್‌, ಬ್ರಾಹ್ಮಣ ತರುಣ ಸಂಘ, ರೋಟರಿ ಕ್ಲಬ್‌, ನೀರಲಕೇರಿ ಪಿಕೆಪಿಎಸ್‌, ಇನ್ನರ್‌ವೀಲ್‌, ಮಾಜಿ ಶಾಸಕ ಪಿ.ಎಚ್‌. ಪೂಜಾರ, ಯುವ ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಹಿತೇಶ ಪಟೇಲ್‌, ಪ್ರದೀಪ್‌ ರಾಯ್ಕರ, ಎಮ್‌.ಆರ್‌. ಶಿಂಧೆ, ಪತ್ರಕರ್ತ ಮಹೇಶ ಅಂಗಡಿ, ಡಾ|ಶಿವಾನಂದ ಬಡದೇಸಾಯಿ ಸೇರಿ ಹಲವು ಗಣ್ಯರೂ ಕೈ ಜೋಡಿಸಿದ್ದರು.

ಜೂ.14ರಿಂದ ಲಾಕ್‌ಡೌನ್‌ ಸಡಿಲಿಕೆಯಾದ ಹಿನ್ನೆಲೆಯಲ್ಲಿ ರವಿವಾರ ನಿತ್ಯ ಊಟದ ಪೊಟ್ಟಣ, ಉಪಾಹಾರ ಪೂರೈಸುವ ಕಾರ್ಯ ಸಮಾರೋಪಗೊಂಡಿತು. ರವಿವಾರವೂ ವೈದ್ಯರಿಗೆ, ಸೋಂಕಿತರಿಗೆ, ಅವರ ಸಂಬಂಧಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನಿರಂತರ ಸೇವೆಗೈದ ಕಾಮಧೇನು: ಕಾಮಧೇನು ಸಂಸ್ಥೆಯ ಪ್ರಮುಖ ಸದಸ್ಯರಾದ ರವಿ ಕುಮುಟಗಿ, ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ಶಿವುಕುಮಾರ ಮೇಲಾ°ಡ, ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ಕಾರ್ಯಕರ್ತರಾದ ಆನಂದ ಬಾಂಡಗೆ, ಅಶೋಕ ಮಹಿಂದ್ರಕರ, ರಾಘು ಕಲಾಲ, ಮಲ್ಲು ಸಜ್ಜನ, ಶಂಕರ ಕಂಗನಾಳ, ಮಲ್ಲು ವಡಗೇರಿ, ಸಂತೋಷ ಕಪಾಟೆ, ರಾಜು ಗೌಳಿ, ರಾಘು ಯಾದಗಿರಿ, ಗಣೇಶ ಸುರಪುರ ಮುಂತಾದವರು ನಿರಂತರ ಸೇವೆಯಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next