“ಟೀಸರ್‌ನಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತೆ, ಹಾಗಂತ ಇದನ್ನು ಆ್ಯಕ್ಷನ್ ಸಿನಿಮಾ ಎಂದುಕೊಳ್ಳಬೇಡಿ …’
– ನಿಖೀಲ್ ಕುಮಾರ್ ಇದನ್ನು ಒತ್ತಿ ಒತ್ತಿ ಹೇಳುತ್ತಿದ್ದರು. ಟೀಸರ್ ನೋಡಿ, ಎಲ್ಲಿ ಇದನ್ನು ಆ್ಯಕ್ಷನ್ ಸಿನಿಮಾ ಎಂದು ಬಿಂಬಿಸಿಬಿಟ್ಟು, ಫ್ಯಾಮಿಲಿ ಮಂದಿ ದೂರವೇ ಉಳಿಯುತ್ತಾರೋ ಎಂಬ ಭಯ ಅವರನ್ನು ಕಾಡುತ್ತಿತ್ತು. ನಿಖೀಲ್ ಅಂದು ಮೈಕ್ ಎತ್ತಿಕೊಂಡು ಮಾತನಾಡಲು ಕಾರಣ “ಸೀತಾರಾಮ ಕಲ್ಯಾಣ’. ಸಾಕಷ್ಟು ಸಿನಿಮಾಗಳ ಕುರಿತು ಚರ್ಚೆಯಾದ ನಂತರ ನಿಖೀಲ್ ಒಪ್ಪಿಕೊಂಡ ಸಿನಿಮಾ “ಸೀತಾರಾಮ ಕಲ್ಯಾಣ’. ಎ. ಹರ್ಷ ಈ ಸಿನಿಮಾದ ನಿರ್ದೇಶಕರು. ಈಗಾಗಲೇ 86 ದಿನ ಚಿತ್ರೀಕರಣ ಮುಗಿಸಿರುವ ಚಿತ್ರದ ಟೀಸರ್ ಇದೇ ತಿಂಗಳ 31ರಂದು ರಾಮನಗರದಲ್ಲಿ ಬಿಡುಗಡೆಯಾಗುತ್ತಿದೆ.
“ಚಿತ್ರದ ಟೀಸರ್‌ನಲ್ಲಿ ಭರ್ಜರಿಯಾಗಿ ಆ್ಯಕ್ಷನ್ ಇದೆ. ಹಾಗಂತ ಇದನ್ನು ಆ್ಯಕ್ಷನ್ ಸಿನಿಮಾ ಅಂದುಕೊಳ್ಳಬೇಡಿ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ನಮ್ಮ ನೇಟಿವಿಟಿ ಇರುವ ಸಿನಿಮಾವಿದು. ಹರ್ಷ ಅವರು ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಅವರ ಜೊತೆ ಇನ್ನೂ ಒಂದು ಸಿನಿಮಾ ಮಾಡುತ್ತೇನೆ’ ಎಂದರು ನಿಖೀಲ್. ಇನ್ನು “ಸೀತಾರಾಮ ಕಲ್ಯಾಣ’ ತೆಲುಗು ಚಿತ್ರವೊಂದರ ರೀಮೇಕ್ ಎಂಬ ಸುದ್ದಿ ಓಡಾಡುತ್ತಿತ್ತು. ಇದಕ್ಕೂ ನಿಖೀಲ್ ಉತ್ತರ ಕೊಟ್ಟರು. “ಇದು ಪಕ್ಕಾ ಸ್ವಮೇಕ್ ಸಿನಿಮಾ. ಕೆಲವು ಕಡೆ ಇದು ರೀಮೇಕ್ ಸಿನಿಮಾ ಎಂಬ ಮಾತು ಕೇಳಿಬಂದಿದೆ. ಖಂಡಿತಾ ಇದು ರೀಮೇಕ್ ಸಿನಿಮಾ ಅಲ್ಲ. ಪಕ್ಕಾ ಸ್ವಮೇಕ್. ತಿಂಗಳುಗಟ್ಟಲೇ ಕುಳಿತು ಈ ಸಿನಿಮಾದ ಕಥೆ ಸಿದ್ಧಪಡಿಸಿದ್ದೇವೆ’ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸಿನಿಮಾದ ನಿರ್ಮಾಪಕರು. “ಸೀತಾರಾಮ ಕಲ್ಯಾಣ’ ಕಲ್ಯಾಣ ಮೂಡಿಬರುತ್ತಿರುವ ಬಗ್ಗೆ ಅವರಿಗೆ ಖುಷಿ ಇದೆಯಂತೆ. “”ಸೀತಾರಾಮ ಕಲ್ಯಾಣ’ ಕಥೆಯನ್ನು ನಾನು ತುಂಬಾ ಇಷ್ಟಪಟಿದ್ದೇನೆ. ಕಾರಣ ನಮ್ಮ ನೇಟಿವಿಟಿಯ ಸಿನಿಮಾ. ಈ ಹಿಂದೆ “ಜಾಗ್ವಾರ್’ನಲ್ಲಿ ನೆಟಿವಿಟಿಯ ಕೊರತೆ ಇದೆ, “ಚಂದ್ರಚಕೋರಿ’ ಸಿನಿಮಾದಲ್ಲಿದ್ದಂತಹ ಹಾಡು ಬೇಕಿತ್ತು, ಕನ್ನಡದ ಕಲಾವಿದರನ್ನು ಬಳಸಿಕೊಂಡಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, “ಸೀತಾರಾಮ ಕಲ್ಯಾಣ’ದಲ್ಲಿ ಆ ಎಲ್ಲಾ ಕೊರತೆಗಳನ್ನು ನೀಗಿಸಿದ್ದೇವೆ. ಇದು ನಮ್ಮ ತನವಿರುವ ಕಥೆ. ಚಿತ್ರದಲ್ಲಿ ಸಾಕಷ್ಟು ಮಂದಿ ಕನ್ನಡದ ಕಲಾವಿದರು ನಟಿಸಿದ್ದಾರೆ. ಚಿತ್ರದ ಸಂಭಾಷಣೆ, ಲೊಕೇಶನ್ ಎಲ್ಲವೂ ಚೆನ್ನಾಗಿದೆ. ಎಲ್ಲಾ ಜವಾಬ್ದಾರಿಗಳನ್ನು ಮಗ ನಿಖೀಲ್ ಹೊತ್ತುಕೊಂಡಿದ್ದಾನೆ. ನಿರ್ಮಾಣದಿಂದ ಹಿಡಿದು ಎಲ್ಲಾ ವಿಭಾಗದ ಸಂಪೂರ್ಣ ಜವಾಬ್ದಾರಿ ಅವನದೇ. ಕೊನೆಯದಾಗಿ ಸಿನಿಮಾ ನೋಡಿ ಸರ್ಟಿಫಿಕೆಟ್ ಕೊಡೋದಷ್ಟೇ ನನ್ನ ಕೆಲಸ’ ಎಂದರು.
ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ಇಲ್ಲಿ ರಚಿತಾ ಅವರಿಗೆ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ಯಾವ ತರಹ ಹೊಸದು ಎಂದರೆ ಎಲ್ಲಾ ಅಂಶಗಳು ಕೂಡಿರುವಂತಹ ಒಂದು ಕ್ಯೂಟ್ ಪಾತ್ರ ಎಂದಷ್ಟೇ ಹೇಳುತ್ತಾರೆ ಅವರು. ಚಿತ್ರದಲ್ಲಿ ರವಿಶಂಕರ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. “ನಾನು ಈ ಸಿನಿಮಾದ ಸ್ಕ್ರಿಪ್ಟ್ ಕೇಳಿದ ಕೂಡಲೇ ಒಪ್ಪಿಕೊಂಡೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಾನು ತಂದೆಯ ಪಾತ್ರ ಮಾಡಿದ್ದರೂ ಇಲ್ಲಿ ಡಿಫರೆಂಟ್ ತಂದೆ. ದೊಡ್ಡ ತಾರಾಬಳಗವಿದೆ’ ಎಂದ ರವಿಶಂಕರ್, ನಿಖೀಲ್ ಅವರ ಸಿನಿಮಾ ಪ್ರೀತಿ, ಪಾತ್ರಕ್ಕೆ ತಯಾರಾಗುತ್ತಿದ್ದ ರೀತಿಯ’ ಬಗ್ಗೆ ಮಾತನಾಡಿದರು.
ನಿರ್ದೇಶಕ ಹರ್ಷ ಕೂಡಾ ಇದು ರೀಮೇಕ್ ಸಿನಿಮಾವಲ್ಲ ಎನ್ನುತ್ತಲೇ ಮಾತು ಆರಂಭಿಸಿದರು. “ಇದು ರೀಮೇಕ್ ಸಿನಿಮಾವಲ್ಲ. ಪಕ್ಕಾ ಸ್ವಮೇಕ್ ಸಿನಿಮಾ. ಎಲ್ಲಾ ಕಡೆ ರೀಮೇಕ್ ಎಂದು ಓಡಾಡಿದ್ದರಿಂದ ಸಿಟ್ಟಾದ ನಮ್ಮ ಕಾರ್ಯಕಾರಿ ನಿರ್ಮಾಪಕರು, “20 ಸಿನಿಮಾಗಳನ್ನು ಸೇರಿಸಿ ರೀಮೇಕ್ ಮಾಡಲಾಗಿದೆ’ ಎಂದಿದ್ದರು. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್’ ಎಂದರು ಹರ್ಷ.