Advertisement

ಸಾರಿಗೆ ನೌಕರರಿಗೆ ವೇತನ ನೀಡಲು ಮನವಿ

06:29 PM May 06, 2020 | Naveen |

ಕಲಬುರಗಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ವೇತನ ನೀಡಬೇಕೆಂದು ಕೆಎಸ್‌ಆರ್‌ಟಿಸಿ, ಸ್ಟಾಫ್‌ ಮತ್ತು ವರ್ಕರ್ಸ್‌ ಫೇಡರೇಷನ್‌ ವತಿಯಿಂದ ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು ಎಂದು ಫೇಡರೇಷನ್‌ ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ತಿಳಿಸಿದ್ದಾರೆ.

Advertisement

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ (ಕೆಎಸ್‌ಆರ್‌ಟಿಸಿ. ಬಿಎಂಟಿಸಿ, ಎನ್‌ ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ) ಸುಮಾರು 1.25 ಲಕ್ಷ ರೂ.ಗೂ ಹೆಚ್ಚು ನೌಕರರು, ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಸಾರಿಗೆ ನಿಗಮಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದಿವೆ ಎಂದು ತಿಳಿಸಿದ್ದಾರೆ.

ಮಹಾಮಾರಿ ಕೋವಿಡ್‌-19ರ ಪರಿಣಾಮವಾಗಿ ಲಾಕ್‌ಡೌನ್‌ ಘೋಷಣೆ ಮಾಡಿದ ನಂತರ ಮಾ. 22ರಿಂದ ನಿಗಮಗಳ ಯಾವುದೇ ಬಸ್  ಸಂಚಾರವಾಗುತ್ತಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಕೆಲವು ವಾಹನಗಳು ಮಾತ್ರ ಸಂಚರಿಸುತ್ತಿವೆ. ಅವುಗಳಿಂದ ಯಾವುದೇ ಆದಾಯವಿಲ್ಲ. ಇತ್ತೀಚೆಗೆ ಸರ್ಕಾರದ ಆದೇಶದ ಮೇರೆಗೆ ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ಊರುಗಳಿಗೆ ಸೇರಿಸಲು ನಮ್ಮ ನಿಗಮಗಳು ಶ್ರಮಿಸುತ್ತಿವೆ. ಇದರಿಂದ ನಿಗಮಗಳಿಗೆ ಯಾವುದೇ ಆದಾಯವಿಲ್ಲ. ಇದಕ್ಕೆ ಮುಂಚೆಯೇ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು. ಇದಕ್ಕೆ ಹಲವಾರು ನೈಜ ಕಾರಣಗಳಿವೆ. ಈಗ ನಿಗಮಗಳ ಹಣಕಾಸಿನ ಮುಗ್ಗಟ್ಟು ಮುಗಿಲುಮುಟ್ಟಿದೆ. ಆದರೂ ಮಾ. 2020ರ ವೇತನವನ್ನು ಎಲ್ಲ ನೌಕರರಿಗೂ ಪಾವತಿಸಲಾಗಿದೆ. ಸಾರಿಗೆ ನಿಗಮಗಳು ಎಂದೂ ತಮ್ಮ ನೌಕರರಿಗೆ ವೇತನ ಕೊಡಲು ಸರ್ಕಾರದಿಂದ ಹಣ ಪಡೆದಿಲ್ಲ. ಏಪ್ರಿಲ್‌ ತಿಂಗಳ ವೇತನಕ್ಕೆ ನಿಗಮಗಳಲ್ಲಿ ಹಣವಿಲ್ಲದ ಕಾರಣ ರಾಜ್ಯ ಸರ್ಕಾರ ಸಹಾಯಹಸ್ತ ನೀಡಬೇಕೆಂದು ನಿಗಮಗಳು ಕೇಳಿವೆ. ನಿಗಮಗಳಲ್ಲಿ ಪ್ರತಿ ತಿಂಗಳ ಒಂದನೇ ತಾರೀಖೀನಿಂದ ವಿವಿಧ ವರ್ಗಗಳ ನೌಕರರಿಗೆ ವೇತನ ನೀಡಲಾಗುತ್ತದೆ. ಈ ಬಾರಿ ಇನ್ನೂ ವೇತನ ನೀಡುವ ಪ್ರಕ್ರಿಯೇ ಆರಂಭವಾಗಿಲ್ಲ. ನಿಗಮಗಳ ಲೆಕ್ಕಾಚಾರದ ಪ್ರಕಾರ ಈ ವೇತನ ಪಾವತಿಗೆ ಸುಮಾರು 330 ಕೋಟಿ ರೂ. ಬೇಕಾಗುತ್ತದೆ ಎಂದಿದ್ದಾರೆ.

ಕೆಲವು ಹಸಿರು ವಲಯಗಳಲ್ಲಿ ಸಾರಿಗೆ ವಾಹನಗಳು ಓಡಾಡಲು ಸೂಚನೆಗಳಿದ್ದರೂ ಕೋವಿಡ್‌-19ರ ನಿರ್ಬಂಧ ಪಾಲಿಸುವ ದೃಷ್ಟಿಯಿಂದ ಹೆಚ್ಚಿನ ಆದಾಯವನ್ನು ಈ ವಾಹಗಳಿಂದ ಅಪೇಕ್ಷಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವ ಲಕ್ಷ¾ಣ ಸವದಿ ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಬಲಪಡಿಸುವ ಕುರಿತು ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ನಮ್ಮ ಸಹಮತವಿದೆ. ಈ ವಿಷಯ ಚರ್ಚಿಸಲು ವೇಳೆ ಕೊಡಬೇಕೆಂದು ಸಿಎಂಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಗೌರವಾಧ್ಯಕ್ಷ ಡಾ| ಸಿದ್ಧನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್‌ ಮನವಿ ನೀಡುವ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next