Advertisement

ವಿಶ್ವಕಪ್‌ ಹಾಕಿ ಯಶಸ್ಸಿನಲ್ಲಿ ಮೂಡುಬಿದರೆಯ ಬೆಳಕು!

07:50 AM Dec 22, 2018 | |

ಒಡಿಶಾದ ಭುವನೇಶ್ವರದಲ್ಲಿ ವಿಶ್ವಕಪ್‌ ಹಾಕಿ ನಡೆದಿದ್ದು ಆಯ್ತು, ಭಾರತ ಸೋತಿದ್ದೂ ಆಯ್ತು, ಬೆಲ್ಜಿಯಂ ಚಾಂಪಿಯನ್‌ ಆಗಿದ್ದೂ ಆಯ್ತು. ಭಾರತೀಯ ಅಭಿಮಾನಿಗಳ ಪಾಲಿಗೆ ಬರೀ ಬೇಸರದ ಸುದ್ದಿಗಳೇ ಇದ್ದರೂ, ಒಂದು ಕ್ರೀಡಾಕೂಟವಾಗಿ ವಿಶ್ವಕಪ್‌ ಯಶಸ್ವಿಯಾಗಿದೆ. ಆ ಯಶಸ್ಸಿನಲ್ಲಿ ಕರ್ನಾಟಕದ ಪಾಲೂ ಇದೆ. ವಿಶ್ವಕಪ್‌ನ ಅಷ್ಟೂ ಪಂದ್ಯ ನಡೆದ ಕಳಿಂಗ ಮೈದಾನದ ಹೊರಗೆ ಅತ್ಯಾಧುನಿಕ ಮಾದರಿಯ ವಿದ್ಯುತ್‌ ದೀಪಾಲಂಕಾರ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕುದ್ರಿಪದವಿಯ ಲೆಕ್ಸಾ ಲೈಟಿಂಗ್‌ ಟೆಕ್ನಾಲಜಿ ಸಂಸ್ಥೆ.

Advertisement

   ಪ್ರತೀ ಬಾರಿ ಅಂತಾರಾಷ್ಟ್ರೀಯ ಕೂಟ ನಡೆದಾಗ, ಅದರಲ್ಲೂ ವಿಶ್ವಕಪ್‌ನಂತಹ ಹಾಕಿ ಕೂಟಗಳು ನಡೆದಾಗ ವಿದೇಶದಿಂದ ಸಾವಿರಾರು ಪ್ರವಾಸಿಗಳು ಆಗಮಿಸುತ್ತಾರೆ. ಹಾಗೆಯೇ ದೇಶದ ಮೂಲೆಮೂಲೆಯಿಂದಲೂ ಅಭಿಮಾನಿಗಳು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ಹಲವಾರು ಆಯಾಮಗಳಲ್ಲಿ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಪ್ರತೀ ಹಂತದಲ್ಲೂ ಉತ್ತಮ ಸಿದ್ಧತೆ ಅನಿವಾರ್ಯ.

ಭಾರತ ಆತಿಥೇಯ ತಂಡವೆನ್ನುವ ಕಾರಣಕ್ಕೆ, ಅತ್ಯದ್ಭುತ ಪ್ರದರ್ಶನ ನೀಡುವ ಇತರೆ ತಂಡಗಳ ಕಾರಣಕ್ಕೆ ಪ್ರೇಕ್ಷಕರು ಮೈದಾನಕ್ಕೆ ಬರುತ್ತಾರೆ. ಆ ವೇಳೆ ಎಲ್ಲ ವ್ಯವಸ್ಥೆಗಳೂ ಜನರ ಗಮನ ಸೆಳೆಯುತ್ತವೆ. ವಾಹನಗಳನ್ನು ನಿಲ್ಲಿಸಲು ಸೂಕ್ತ ನಿಲ್ದಾಣಗಳು, ಜನರು ಕುಳಿತುಕೊಳ್ಳಲು ವಿವಿಧ ದರ್ಜೆಯ ಗುಣಮಟ್ಟದ ಆಸನಗಳು, ಸ್ವತ್ಛ, ಅತ್ಯಾಧುನಿಕ ಶೌಚಾಲಯಗಳು, ಹೋಟೆಲ್‌ಗ‌ಳು, ನಗರದ ಸಾರಿಗೆ ವ್ಯವಸ್ಥೆ ಎಲ್ಲವೂ ದೇಶೀಯರು, ವಿದೇಶೀಯರ ಮೇಲೆ ಪ್ರಭಾವ ಬೀರುತ್ತವೆ. ಒಂದು ಕ್ರೀಡಾಕೂಟದ ಯಶಸ್ಸು ಎಂದರೆ ಈ ಎಲ್ಲ ಸಂಗತಿಗಳಲ್ಲೂ ಸಂಘಟಕರು, ಆತಿಥ್ಯ ವಹಿಸಿದ ನಗರ ಯಶಸ್ವಿಯಾಗಬೇಕಾಗುತ್ತದೆ.

 ಕ್ರೀಡಾಕೂಟದ ಆತಿಥ್ಯ ವಹಿಸಿದ್ದ ಹಾಕಿ ಇಂಡಿಯಾ ಮತ್ತು ಒಡಿಶಾ ಸರ್ಕಾರ ಈ ಎಲ್ಲವನ್ನೂ ಮುತುವರ್ಜಿಯಿಂದ ನಿರ್ವಹಿಸಿವೆ. ಭಾರತದ ಸೋಲಿನ ನೋವಿದ್ದರೂ ಉಳಿದೆಲ್ಲ ಆಯಾಮಗಳಲ್ಲಿ ಕೂಟ ಯಶಸ್ವಿಯಾದ ಸಂತೋಷ ಸಂಘಟಕರಿಗಿದೆ. ಅಂತಹ ಮಹತ್ವದ ಜವಾಬ್ದಾರಿಗಳಲ್ಲಿ ಒಂದಾದ ಹೊರಾಂಗಣ ದೀಪಾಲಂಕಾರವನ್ನು, ಮೂಡುಬಿದರೆಯಂತಹ ಹೊರಜಗತ್ತಿಗೆ ಬಹುತೇಕ ಅಪರಿಚಿತ ಊರಿನ ಸಂಸ್ಥೆಯೊಂದು ವಹಿಸಿಕೊಂಡು ಯಶಸ್ವಿಗೊಳಿಸಿದ್ದು ಮಹತ್ವದ ಸಂಗತಿ. ಅದೂ ವಿಶ್ವಕಪ್‌ ಹಾಕಿ ಕೂಟದ ವ್ಯವಸ್ಥೆ ನಿರ್ವಹಿಸಿದ್ದು ಮತ್ತೂ ಮಹತ್ವದ್ದು.

Advertisement

ಹೇಗಿತ್ತು ಬೆಳಕಿನಲಂಕಾರ?

ಒಡಿಶಾದ ಭುವನೇಶ್ವರದಲ್ಲಿ ನ.28ರಿಂದ ಡಿ.16ರವರೆಗೆ ಹಾಕಿ ವಿಶ್ವಕಪ್‌ ನಡೆಯಿತು. ಒಟ್ಟು 16 ತಂಡಗಳು ಭಾಗವಹಿಸಿದ್ದವು. ಕೂಟ ಪ್ರಾರಂಭದ ದಿನದಿಂದಲೂ ಕ್ರೀಡಾಂಗಣದ ನಾಲ್ಕು ದ್ವಾರಗಳ ಸಹಿತ ಹೊರಾಂಗಣದ ಸುತ್ತಲಿನ ಪ್ರದೇಶಗಳನ್ನು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ 700 ಲೈಟ್‌ಗಳಿಂದ ಸಿಂಗರಿಸಲಾಗಿತ್ತು. ಕರಾವಳಿ ಮೂಲದ ಸುಮಾರು 40ಕ್ಕೂ ಹೆಚ್ಚು ಮಂದಿ ದೀಪಾಲಂಕಾರ ನಿರ್ವಹಣೆಯ ಕಾರ್ಯದಲ್ಲಿ ಭಾಗವಹಿಸಿದ್ದರು.

 ಕ್ರೀಡಾಂಗಣದ ನಾಲ್ಕೂ ಬದಿಗಳಲ್ಲಿ, ಹೊರಾಂಗಣ ಪ್ಯಾನೆಲ್‌ಗ‌ಳನ್ನು ವಿವಿಧ ಬಗೆಯ ದೀಪಗಳಿಂದ ಅಲಂಕರಿಸಲಾಗಿತ್ತು. ಇದು ಪ್ರೇಕ್ಷರನ್ನು ವಿಶೇಷವಾಗಿ ಸೆಳೆಯಿತು. ದ್ವಾರಗಳಿಗೆ ಹೆಚ್ಚಿನ ಮೆರುಗು ನೀಡುವ ಉದ್ದೇಶದಿಂದ ಕೆಂಪು, ಹಸಿರು, ನೀಲಿ, ಬಿಳಿ ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ಹೊರಾಂಗಣ ಅಲಂಕಾರಕ್ಕೆಂದು ಸ್ಪೆ çಕ್‌ ಲೈಟ್‌, ಲೀನಿಯರ್‌ ವಾಶ್‌ ಲೈಟ್‌, ಸ್ಪಾಟ್‌ಲೆçಟ್‌, ಆರ್‌ಜಿಬಿಡಬ್ಲೂé ಸ್ಪಾಟ್‌ಲೆçಟ್‌ಗಳನ್ನು ಬಳಕೆ ಮಾಡಲಾಗಿತ್ತು.

ಪ್ರತಿ ನಿಮಿಷಕ್ಕೆ ಬಲ್ಬ್ನ ಬಣ್ಣವೇ ಬದಲು: ಕಳಿಂಗ ಹಾಕಿ ಸ್ಟೇಡಿಯಂನ ಹೊರಾಂಗಣ ಲೈಟಿಂಗ್‌ ನಿರ್ವಹಣೆಯನ್ನು ಒಂದೇ ಕಂಟ್ರೋಲ್‌ ರೂಂನಿಂದ ನಿರ್ವಹಿಸಲಾಗಿದೆ. ಡಿಎಂಎಕ್ಸ್‌ ಸಿಗ್ನಲ್‌ ಕಂಟ್ರೋಲ್‌ ಬೋರ್ಡ್‌ನಿಂದ ಎಲ್ಲ ಎಲ್‌ಇಡಿ ಲೈಟ್‌ಗಳನ್ನು ಏಕಕಾಲಕ್ಕೆ ನಿಯಂತ್ರಣ ಮಾಡಲಾಗಿತ್ತು. ಅಚ್ಚರಿಯೆಂದರೆ ಅಳವಡಿಸಿದ ದೀಪಗಳಲ್ಲಿ ಪ್ರತೀ ನಿಮಿಷಕ್ಕೆ ಬಣ್ಣವೇ ಬದಲಾಗುವಂತಹ, ಹೊಸ ಬಣ್ಣ ಬರುವಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿತ್ತು. 

ಸಾಮಾನ್ಯವಾಗಿ ಮಳೆ ಬಂದರೆ ವಿದ್ಯುದಾಘಾತಗಳು ಸಂಭವಿಸುವ ಸಾಧ್ಯತೆಯಿರುತ್ತದೆ. ಅದು ನಡೆಯದಂತೆ ಮುಂಚೆಯೇ ಸುರಕ್ಷಿತ ವ್ಯವಸ್ಥೆ ಮಾಡಿಕೊಂಡಿರಬೇಕು. ಲೆಕ್ಸಾ ಸಂಸ್ಥೆ ಸಂಭವನೀಯ ಮಳೆಗೂ ಸಿದ್ಧವಾಗಿತ್ತು. ಮಳೆ ಬಂದರೂ ಯಾವುದೇ ತೊಂದರೆಯಾಗದಂತೆ ಎಲ್ಲ ಕಡೆಗಳಲ್ಲಿಯೂ ಎಲ್‌ಇಡಿ ಚಿಪ್‌ಗ್ಳನ್ನು ಬಳಕೆ ಮಾಡಲಾಗಿತ್ತು. ಇವುಗಳ ಮೂಲಕ ಬೆಳಕಿನಾಟಕ್ಕೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬಹುದು.

ಮೊದಲ ಬಾರಿ ಅಂ.ರಾ. ಕ್ರೀಡಾಕೂಟದ ಜವಾಬ್ದಾರಿ: ಮೂಡುಬಿದರೆಯಂತಹ  ಸಣ್ಣ ತಾಲೂಕಿನಲ್ಲಿದ್ದರೂ ಲೆಕ್ಸಾ ಸಂಸ್ಥೆ ತನ್ನ ಕಾರ್ಯಚಟುವಟಿಕೆಯ ಮೂಲಕ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿಕೊಂಡಿದೆ. ಈಗಾಗಲೇ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮ, ಚಲನಚಿತ್ರ, ಧಾರವಾಹಿ, ಟಿವಿ ಸ್ಟುಡಿಯೋ ಕಾರ್ಯಕ್ರಮಗಳ ದೀಪಾಲಂಕಾರ ಮಾಡಿ ಹೆಸರು ಗಳಿಸಿದೆ. ಆದರೆ ಈ ಹಿಂದೆ ಅಂತಾರಾಷ್ಟ್ರೀಯ ಕ್ರೀಡಾಕೂಟವೊಂದರ ಹೊರಾಂಗಣ ಅಲಂಕಾರದ ಜವಾಬ್ದಾರಿ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿ ಒಡಿಶಾ ಸರ್ಕಾರ ಅಂತಹ ಅಮೂಲ್ಯ ಅವಕಾಶವನ್ನು ನೀಡಿದೆ.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next