Advertisement
ರಾಜ್ಯದ ಎಲ್ಲ ಶಾಲಾ ಕ್ಲಸ್ಟರ್‌ಗಳಲ್ಲಿ ಎರಡು ದಿನ “ಕಲಿಕಾ ಹಬ್ಬ’ ಜ.10ರಿಂದ 25ರವರೆಗೆ ನಡೆಯಲಿದೆ. ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲೂ ಜ.27ರಿಂದ ಫೆ.10ರವರೆಗೆ ಜಿಲ್ಲಾ ಮಟ್ಟದ ಕಲಿಕಾ ಹಬ್ಬ ನಡೆಯಲಿದೆ. ರಾಜ್ಯದ ಎಲ್ಲ 4103 ಕ್ಲಸ್ಟರ್ ಹಾಗೂ 35 ಶೈಕ್ಷಣಿಕ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ. ಪ್ರತಿ ಕ್ಲಸ್ಟರ್‌ನಲ್ಲಿ ವಿವಿಧ ಶಾಲೆಯ ಒಟ್ಟು 120 ವಿದ್ಯಾರ್ಥಿಗಳು ಅಂದರೆ 4,92,360 ವಿದ್ಯಾರ್ಥಿಗಳು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಭಾಗವಹಿಸುವರು. ಪ್ರತಿ ಜಿಲ್ಲೆಗಳಲ್ಲಿ ವಿವಿಧ ತಾಲೂಕುಗಳಿಂದ ಒಟ್ಟು 300 ವಿದ್ಯಾರ್ಥಿಗಳು, 10,500 ವಿದ್ಯಾರ್ಥಿಗಳು ಜಿಲ್ಲಾ ಕಲಿಕಾ ಹಬ್ಬದಲ್ಲಿ ಪಾಲ್ಗೊಳ್ಳುವರು. ವಿದ್ಯಾರ್ಥಿಗಳ ನಾಯಕತ್ವ ದಲ್ಲಿ ಪ್ರತಿ ಶಾಲೆಯಲ್ಲಿಯೂ “ಕಲಿಕಾ ಹಬ್ಬ’ ನಡೆಯಲಿದೆ.
Related Articles
Advertisement
ಕಲಿಕಾ ಹಬ್ಬವು ನಾಲ್ಕು ಕಾರ್ನರ್ ಗಳಲ್ಲಿ ನಡೆಯಲಿದೆ. ಮೊದಲನೇ ಕಾರ್ನರ್‌ನಲ್ಲಿ ಆಡು-ಹಾಡು (ಇಲ್ಲಿ ಭಾಷಾ ಕೌಶಲ್ಯ ಅಭಿವೃದ್ಧಿಯಾಗುತ್ತದೆ), ಎರಡನೇ ಕಾರ್ನರ್‌ನಲ್ಲಿ ಕಾಗದ-ಕತ್ತರಿ (ಇಲ್ಲಿ ವಿದ್ಯಾರ್ಥಿಗಳು ಚಿಕ್ಕ, ದೊಡ್ಡ ಗೊಂಬೆ ತಯಾರಿಕೆ, ಪೇಪರ್ ಕಟ್ಟಿಂಗ್‌ಗಳಿದ ವಿವಿಧ ವಸ್ತುಗಳನ್ನು ಮಾಡಲು ಕಲಿಯುತ್ತಾರೆ), ಮೂರನೇ ಕಾರ್ನರ್ ಮಾಡು-ಆಡು (ಇಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತ ಕೌಶಲ್ಯ ಬೆಳೆಸಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮಲ್ಲಿಯೇ ಚರ್ಚಿಸಿ, ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ). ನಾಲ್ಕನೇ ಕಾರ್ನರ್‌ನಲ್ಲಿ ಊರು ಸುತ್ತೋಣ (ಒಂದು ಮರದ ಅಧ್ಯಯನ, ಜೈವಿಕ ಲೋಕ ಅರಿಯೋಣ, ಸಂದರ್ಶನ, ನಕ್ಷೆ ರಚಿಸೋಣ) ಎಂಬ ಕಾರ್ಯಕ್ರಮದ ಪರಿಕಲ್ಪನೆ ಒಳಗೊಂಡಿದೆ.
ಕಲಿಕಾ ಹಬ್ಬ ಸಂಘಟನೆಗಾಗಿ ಸಂಪನ್ಮೂಲ ವ್ಯಕ್ತಿಗಳಿಗೆ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಬೆಂಗಳೂರು ಹಾಗೂ ಧಾರವಾಡದಲ್ಲಿ ರಾಜ್ಯಮಟ್ಟದ ತರಬೇತಿ ನೀಡಲಾಗಿದ್ದು, ಜಿಲ್ಲಾ ಹಂತದ ತರಬೇತಿ ಡಿ.12ರಿಂದ 22ರವರೆಗೆ ನಡೆಯಲಿದೆ. ತಾಲೂಕು ಮಟ್ಟದಲ್ಲಿ ತರಬೇತಿ ಜ.1ರಿಂದ 10ರವರೆಗೆ ನಡೆಯಲಿದೆ.
ಕಲಿಕಾ ಹಬ್ಬದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚಿಸಬೇಕು. ಇದು ಪಟ್ಟಣ, ಗ್ರಾಮದ ಜನಪ್ರತಿನಿಧಿಗಳು ಊರಿನ ಹಿರಿಯರು, ಯುವಕರು, ಹಳೆಯ ವಿದ್ಯಾರ್ಥಿಗಳ ಸಂಘ, ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಕಾರ್ಯ ನಿರ್ವಹಿಸುವ ಸರ್ಕಾರೇತರ ಸೇವಾ ಸಂಸ್ಥೆಗಳು, ವೈದ್ಯರು, ಶಿಕ್ಷಕರು, ಅಧಿಕಾರಿಗಳನ್ನೊಳಗೊಂಡಿ ರಬೇಕು. ಸಭೆ ನಡೆಸಿ, ಹಬ್ಬದ ಕುರಿತು ಚರ್ಚಿಸಿ, ಕಲಿಕಾ ಹಬ್ಬದ ಸಂಘಟನೆಗೆ ಸಮುದಾಯ ಹಾಗೂ ಜನಪ್ರತಿನಿಧಿಗಳ ನೆರವು ಪಡೆಯಬೇಕು. ತನ್ಮೂಲಕ ಸಮುದಾಯ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಸಹ ಇಲಾಖೆ ಸೂಚನೆ ನೀಡಿದೆ.
ಶಿಕ್ಷಣ, ಜೀವನ ಕೌಶಲ ಬೆಳೆಸುವ ಆಲೋಚನೆ
ಬಾಯಿ ಪಾಠ ಮಾಡುವ ಶಿಕ್ಷಣ ಕೈಬಿಟ್ಟು ಅನ್ವಯಿಕ, ವೈಜ್ಞಾನಿಕ, ವಿಮಶಾìತ್ಮಕವಾಗಿ ಯೋಚಿಸುವಂಥ ಶಿಕ್ಷಣ ನೀಡುವ ಅಂಶಗಳನ್ನು ಕಲಿಕಾ ಹಬ್ಬ’ ಹೊಂದಿದೆ. ಮಕ್ಕಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವುದು, ಕಲಿಕಾ ಹಬ್ಬದ ಪರಿಕಲ್ಪನೆಯಾಗಿದೆ. ಜತೆಗೆ ವಿದ್ಯಾರ್ಥಿಗಳು ತಮ್ಮ ಕೌಶಲ ವ್ಯಕ್ತಪಡಿಸಲು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳೊಂದಿಗೆ ಹೊಸದನ್ನು ಕಲಿಯಲು ಇದೊಂದು ಉತ್ತಮ ಅವಕಾಶ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆ ಆಲೋಚನೆಯಾಗಿದೆ.
ಸ್ನೇಹಿತರ ಮನೆಯಲ್ಲಿ ವಾಸ: ಜಿಲ್ಲಾಮಟ್ಟದ ಕಲಿಕಾ ಹಬ್ಬದಲ್ಲಿ 4ರಿಂದ 9ನೇ ತರಗತಿಯ ಒಟ್ಟು 300 ವಿದ್ಯಾರ್ಥಿಗಳು (ಅತಿಥಿ-ಅತಿಥೇಯ ಎಂಬ ಎರಡು ವಿಭಾಗ ತಲಾ 150 ವಿದ್ಯಾರ್ಥಿಗಳು. ಇದರಲ್ಲಿ 150 ಬಾಲಕರು, 150 ಬಾಲಕಿಯರು ಇರುತ್ತಾರೆ) ಬೇರೆ ಬೇರೆ ತಾಲೂಕುಗಳಿಂದ ಭಾಗವಹಿಸುವರು. ಅತಿಥೇಯ ಶಾಲೆಯ ವಿದ್ಯಾರ್ಥಿಗಳ ಮನೆಗೆ ಬೇರೆ ತಾಲೂಕಿನಿಂದ ಬಂದ ವಿದ್ಯಾರ್ಥಿಗಳು ಅತಿಥಿಗಳಾಗಿ ಮೂರು ದಿನ ಜೊತೆಯಲ್ಲಿ ವಾಸಿಸುವರು. “ಕಲಿಕಾ ಹಬ್ಬ’ ಆಚರಿಸಲು ಇಲಾಖೆಯಿಂದ ನಿರ್ದೇಶನ ಬಂದಿದ್ದು ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುವುದು. ಇಲಾಖೆ ಮಾರ್ಗಸೂಚಿಯಂತೆ ಸ್ವಾಗತ ಸಮಿತಿ ರಚಿಸಿ, ಕಲಿಕಾ ಹಬ್ಬ ಯಶಸ್ಸಿಗೆ ಕ್ರಮ ವಹಿಸಲಾಗುವುದು. –ಜಿ.ಆರ್. ತಿಪ್ಪೇಶಪ್ಪ, ಡಿಡಿಪಿಐ, ದಾವಣಗೆರೆ
-ಎಚ್.ಕೆ. ನಟರಾಜ