ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸೋಮವಾರ ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗ ನೀಡಿರುವ ಪುಟ್ಬಾಲ್ ಚಿಹ್ನೆಯನ್ನು ಅನಾವರಣ ಮಾಡಿದ ಅವರು, “ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ಘೋಷಣೆಯಡಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು ರೈತರು, ಬಡವರ, ಮಧ್ಯಮವರ್ಗದವರಿಗೆ ಹಲವು ಭರವಸೆಗಳನ್ನು ನೀಡಲಾಗಿದೆ.
ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ವಾರ್ಷಿಕ 15 ಸಾವಿರ ರೂ.. ಬಂಡವಾಳ ನೆರವು, ರೈತರಿಗೆ ನಿತ್ಯ ಉಚಿತ 9 ತಾಸು ವಿದ್ಯುತ್ ಸರಬರಾಜು. ಬಡ್ಡಿ ರಹಿತ ಬೆಳೆಯ ಸಾಲ ಸೇರಿದಂತೆ ಹಲವು ಅಶ್ವಾಸನೆಗಳನ್ನು ನೀಡಲಾಗಿದೆ. ನಿರುದ್ಯೋಗಿ ಯುವಕರಿಗೆ 2500 ಮಾಸಿಕ ಭತ್ಯೆ, ಪ್ರತಿ ತಾಲೂಕಿನಲ್ಲಿ ಉಗ್ರಾಣಗಳ ನಿರ್ಮಾಣ ಮಾಡುವುದಾಗಿ ಭರವಸೆ ನೀಡಲಾಗಿದೆ.
ಪುಟ್ಬಾಲ್ ಆಯ್ಕೆ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಎಲ್ಲ ಪಕ್ಷದವರೂ ನನ್ನನ್ನು ಫುಟ್ಬಾಲ್ ರೀತಿಯಲ್ಲಿ ಆಡಿದರು. ಅದೇ ಕಾರಣಕ್ಕೆ ನಾನು ಪುಟ್ಬಾಲ್ ಚಿಹ್ನೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
ಪುಟ್ಬಾಲ್ ಆಟದಲ್ಲಿ ಯಾರು ಎಷ್ಟು ಗೋಲ್ ಹೊಡೆದರೂ, ಯಾರಿಗೆ ಗೋಲ್ಡನ್ ಬೂಟ್ ಸಿಕ್ಕಿದೆ ಎಂದು ನೀವೇ ಬರೆದುಕೊಳ್ಳಿ. ನಾನಂತೂ ಪುಟ್ಬಾಲ್ ಆದೆ. ನಮ್ಮ ಪಕ್ಷಕ್ಕೆ ಎಲ್ಲಾ ಕಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. 12 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಕೆಲವೇ ದಿನದಲ್ಲಿ ಇನ್ನೂ 19 ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಹೇಳಿದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ನಮಗೆ ಎಲ್ಲಿ ಶಕ್ತಿ ಇದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇವೆ. ಬಳ್ಳಾರಿ ಗ್ರಾಮಾಂತರದಲ್ಲಿ ಪಕ್ಷದ ಸಂಘಟನೆ ಕೆಲಸ ನಡೆದಿದೆ ಎಂದು ತಿಳಿಸಿದರು.