Advertisement

ಕಳರಿ ರಂಜನೆ 

02:44 AM Jan 26, 2019 | |

ಗಣರಾಜ್ಯೋತ್ಸವ ದಿನದಂದು ಪೆರೇಡ್‌ ಮೈದಾನದಲ್ಲಿ, ಸೈನಿಕರು ನೀಡುವ ಸಮರಕಲೆ, ಸಾಹಸ ಪ್ರದರ್ಶನ ಮೈನವಿರೇಳಿಸುತ್ತದೆ. ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿ ವರ್ಷವಿಡೀ ಸಮರಕಲೆ ಅಭ್ಯಾಸ ಮಾಡುವ ಜಾಗವೊಂದಿದೆ. ಅಲ್ಲಿ ಗನ್ನು, ಫಿರಂಗಿ ಗುಂಡುಗಳೊಂದಿಗೆ ಕಾಳಗ ನಡೆಯುವುದಿಲ್ಲ. ಬದಲಾಗಿ ಕತ್ತಿ, ಗುರಾಣಿ ಹಿಡಿದು ಕಾಳಗ ನಡೆಸುತ್ತಾರೆ. ವೆಲ್‌ಕಂ ಟು “ಕಳರಿ ಗುರುಕುಲಂ’…

Advertisement

ಕಲೆ- ಸಂಸ್ಕೃತಿಯ ವಿಚಾರದಲ್ಲಿ ನಾವು ಬೆಂಗಳೂರಿಗರು ಅದೃಷ್ಟವಂತರೆಂದೇ ಹೇಳಬೇಕು. ನಮ್ಮ ಕಾಸೊ¾ಪಾಲಿಟನ್‌ ನಗರಿ ಅಕ್ಷರಶಃ ವೈವಿಧ್ಯತೆಯನ್ನು ಕಾಪಾಡಿಕೊಂಡಿರುವುದು ಇದಕ್ಕೆ ಕಾರಣ. ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಆಚಾರವಿಚಾರಗಳು, ಸಂಗೀತ- ನಾಟ್ಯ ಕಲೆಗಳು ಇಲ್ಲಿ ನೆಲೆಯೂರಿವೆ. ಅದರ ಜೊತೆಗೆ ಇತರೆ ರಾಜ್ಯದ ಸಂಸ್ಕೃತಿ ಕಲೆಗಳೂ ಇಲ್ಲಿ ಜಾಗ ಪಡೆದಿವೆ ಎನ್ನುವುದು ಹೆಮ್ಮೆಯ ಸಂಗತಿ. ಅವುಗಳಲ್ಲೊಂದು ಕಳರಿಪಯಟ್ಟು ಸಮರ! ಕಳೆದ 20 ವರ್ಷಗಳಿಂದ ಬೆಂಗಳೂರಿಗರಿಗೆ ದಕ್ಷಿಣ ಭಾರತೀಯ ಸಮರ ಕಲೆಯನ್ನು ಕಲಿಸುತ್ತಿರುವ “ಕಳರಿ ಗುರುಕುಲಂ’ ಪರಿಚಯ ಇಲ್ಲಿದೆ…

ಶುರುವಾಗಿದ್ದು ಹೀಗೆ…
ಕಳರಿ ಗುರುಕುಲಂ ಅನ್ನು ಸ್ಥಾಪಿಸಿದ ರಂಜನ್‌ ಅವರು ಗುರುವಾಯೂರಿನವರು. ಚಿಕ್ಕಂದಿನಿಂದಲೇ ಕಳರಿ ಪಯಟ್ಟು ಅಭ್ಯಾಸ ಮಾಡುತ್ತಿರುವ ಅವರು ಕಲಿತಿದ್ದು ರಾಷ್ಟ್ರದಲ್ಲೇ ಹೆಸರುವಾಸಿ ಕಳರಿಪಯಟ್ಟು ಪಟುವಾದ ಬಾಲನ್‌ ಗುರುಕ್ಕಲ್‌ ಅವರ ಬಳಿ. 20 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಾಗ ಕಳರಿಪಯಟ್ಟು ಕಲಿಸುವ ಶಾಲೆ ಒಂದೂ ಇರಲಿಲ್ಲ. ಬಿ.ಎಸ್ಸಿ ಮಾಡಿ ಉದ್ಯೋಗ ಅರಸುತ್ತಿದ್ದ ರಂಜನ್‌ ಆಗಲೇ ಕಳರಿ ಶಾಲೆ ಶುರು ಮಾಡುವ ನಿರ್ಧಾರ ಕೈಗೊಂಡಿದ್ದು. ಇಂದು ಈ ಗುರುಕುಲದಲ್ಲಿ ಸುಮಾರು 250 ಮಂದಿ ವಿದ್ಯಾರ್ಥಿಗಳು ಕಳರಿ ಪಯಟ್ಟು ಅಭ್ಯಾಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಇವರ ತರಬೇತಿ ಶಾಲೆಗಳಿವೆ. ಬ್ರಿಗೇಡ್‌ ರಸ್ತೆ ಬಳಿ ಒಂದಿದ್ದರೆ ಮುಖ್ಯ ತರಬೇತು ಶಾಲೆ “ಕಳರಿ ಗುರುಕುಲಂ’ ಚಿಕ್ಕಗುಬ್ಬಿ ಬಳಿ ಸ್ವತ್ಛಂದ ಪರಿಸರದ ನಡುವೆಯಿದೆ. 

ಯಾರು ಸೇರಬಹುದು?
ಕೇಳಿದರೆ ಆಶ್ಚರ್ಯವಾಗಬಹುದು. ಕಳರಿ ಗುರುಕುಲಂನಲ್ಲಿ 6 ವರ್ಷದಿಂದ 65 ವರ್ಷದ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಸಮರಕಲೆಯನ್ನು ಕಲಿಯಲು ವಯಸ್ಸಿನ ಮಿತಿಯಿಲ್ಲ. ಶುರುವಿನಲ್ಲಿ ಸರಳ ವ್ಯಾಯಾಮಗಳನ್ನು ಕಲಿಸಲಾಗುವುದು. ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ಹಂತಗಳನ್ನು ಇಲ್ಲಿ ಕಲಿಸುತ್ತಾರೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಗಂಡು ಹೆಣ್ಣೆಂಬ ಭೇದವಿಲ್ಲ. ಮಕ್ಕಳಿಗೆ ಪ್ರತ್ಯೇಕ ಬ್ಯಾಚ್‌, ಮತ್ತು ದೊಡ್ಡವರಿಗೆ ಬೇರೆ ಬ್ಯಾಚ್‌. ಅದು ಬಿಟ್ಟರೆ ಬೇರೆ ಇನ್ಯಾವುದೇ ಪ್ರತ್ಯೇಕ ವಿಭಾಗ ಇಲ್ಲಿಲ್ಲ.

Advertisement

ಪ್ರೋಗ್ರಾಂ
ರೆಗ್ಯುಲರ್‌ ತರಗತಿಗಳಲ್ಲದೆ, ರೆಸಿಡೆನ್ಷಿಯಲ್‌ ಪ್ರೋಗ್ರಾಂ ಕೂಡಾ ಈ ಗುರುಕುಲದಲ್ಲಿದೆ. ಅಂದರೆ ಇಲ್ಲೇ ಉಳಿದು ದೀರ್ಘ‌ ಕಾಲ ಕಳರಿಪಯಟ್ಟು ಅಧ್ಯಯನದಲ್ಲಿ ತೊಡಗಬಹುದು. ಹೊರರಾಜ್ಯದವರು, ವಿದೇಶಿಯರಿಗೆ ಈ ಪ್ರೋಗ್ರಾಂ ಹೆಚ್ಚು ಅನುಕೂಲ. ಅಲ್ಲೇ ಉಳಿಯುವುದರಿಂದ ದಿನವಿಡೀ ಕಳರಿಪಯಟ್ಟು ತರಬೇತಿ ಪಡೆಯುವುದರ ಜೊತೆಗೆ ಕಳರಿ ಶಿಸ್ತನ್ನು ಕಲಿತುಕೊಳ್ಳಬಹುದು. ಬೆಳಗ್ಗೆ ಏಳುವುದರಿಂದ ಹಿಡಿದು, ಸ್ನಾನ, ಆಹಾರದವರೆಗೂ ಸಂಪ್ರದಾಯವನ್ನು ಪಾಲಿಸಲಾಗುತ್ತದೆ. ಅದರಲ್ಲೂ ಆಹಾರದ ವಿಚಾರದಲ್ಲಿ ಕಟ್ಟುನಿಟ್ಟು. ಹಣ್ಣು, ತರಕಾರಿಗಳೇ ಇಲ್ಲಿನ ಪ್ರಮುಖ ಆಹಾರ. ಪೂರ್ತಿ ಶಾಕಾಹಾರಿ ಆಹಾರ ಪದ್ಧತಿ ಇಲ್ಲಿನದು. ಒಂದು ತಿಂಗಳು, 6 ತಿಂಗಳು ಮತ್ತು 2 ವರ್ಷದ ಡಿಪ್ಲೋಮಾ ಕೋರ್ಸ್‌ ಅಲ್ಲಿ ಲಭ್ಯ ಇದೆ. ಆಸಕ್ತರು ಶಾಸ್ತ್ರಪ್ರಕಾರ ಮಾತ್ರವಲ್ಲದೆ ಪಠ್ಯಪ್ರಕಾರವೂ ಅಧ್ಯಯನ ನಡೆಸಬಹುದು.

ಹೆಣ್ಣುಮಕ್ಕಳೇ ಜಾಸ್ತಿ 
ಸಾಮಾನ್ಯವಾಗಿ ಸಮರಕಲೆ ಗಂಡು ಮಕ್ಕಳಿಗೆ ಸೇರಿದ್ದು ಎಂಬ ಅಭಿಪ್ರಾಯ ಬಹುತೇಕರಲ್ಲಿದೆ. ಕಳರಿ ಗುರುಕುಲಂಗೆ ಭೇಟಿ ಕೊಟ್ಟರೆ ಅದು ಸುಳ್ಳಿರಬಹುದೆಂಬ ಅನುಮಾನ ಬರದೇ ಇರದು. ಏಕೆಂದರೆ ಇಲ್ಲಿನ ವಿದ್ಯಾರ್ಥಿಗಳಲ್ಲಿ ಹೆಣ್ಮಕ್ಕಳದೇ ಹೆಚ್ಚಿನ ಪಾಲು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳರಿಪಯಟ್ಟು ಕಲೆಯಲ್ಲಿ ನೃತ್ಯವೂ ಒಂದು ಭಾಗವಾಗಿದೆ. ಇದು ಸಮರ ಕಲೆ ಎನ್ನುವುದೇನೋ ನಿಜ. ಆದರೆ, ಶುರುವಿನ ಹಂತಗಳಲ್ಲಿ ಸಾಕಷ್ಟು ನೃತ್ಯ ಪಟ್ಟುಗಳನ್ನು ಈ ಸಮರಕಲೆಯ ಅಭ್ಯಾಸ ಒಳಗೊಂಡಿದೆ. 

ಬ್ರಿಟಿಷರ ವಿರುದ್ಧ ಕಳರಿ ಸಮರ
ಬ್ರಿಟಿಷರು ದಕ್ಷಿಣಭಾರತದಲ್ಲಿ ತಮ್ಮ ಪಾರಮ್ಯ ಮೆರೆಯುತ್ತಿದ್ದ ದಿನಗಳಲ್ಲಿ ಅವರ ಕಣ್ಣು ಕುಕ್ಕಿದ್ದು ಕಳರಿಪಯಟ್ಟು ಸಮರ ಕಲೆ! ಹೀಗಾಗಿ ಅದರ ನಿಷೇಧಕ್ಕೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಈ ಕಲೆ ಸ್ಥಳೀಯರನ್ನು ಒಗ್ಗೂಡಿಸುವುದಲ್ಲದೆ, ಬ್ರಿಟಿಷರ ವಿರುದ್ಧ ದನಿಯೆತ್ತುವಂತೆ ಮಾಡಬಲ್ಲುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಅದರರ್ಥ “ಕಳರಿಪಯಟ್ಟು’ಗೆ ಅಂಥದ್ದೊಂದು ಸಾಮರ್ಥ್ಯ ಇತ್ತು ಎಂದಲ್ಲವೆ! 

ಅಂಡರ್‌ಗ್ರೌಂಡ್‌ ಕದನ
ನೆಲಮಟ್ಟದಿಂದ ಅದೆಷ್ಟೋ ಅಡಿಗಳಷ್ಟು ಕೆಳಗಿರುವ ವ್ಯಾಯಾಮ ಶಾಲೆ ಇಲ್ಲಿನ ಆಕರ್ಷಣೆಗಳಲ್ಲೊಂದು. ಚಿಕ್ಕಗುಬ್ಬಿಯ ಬಳಿ ಇರುವ ಗುರುಕುಲಂನಲ್ಲಿ ಈ ವ್ಯಾಯಾಮಶಾಲೆಯನ್ನು ಕಾಣಬಹುದು. ಇಲ್ಲಿಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಭೂಮಿಯ ಕೆಳಗೆಯೇ ಏಕೆ ಗೊತ್ತಾ? ಇದು ಮಣ್ಣಿನ ಕಲೆ ಹೀಗಾಗಿ ಮಣ್ಣಿನ ಪರಿಮಳ, ಅದರ ಉಷ್ಣತೆ, ಗಂಧಗಾಳಿಗೂ ವಿದ್ಯಾರ್ಥಿಗಳಿಗೂ ಸಂಬಂಧ ಏರ್ಪಡಬೇಕು ಆಗಲೇ ಮನಸ್ಸಿನ ಕಣ ಕಣದಲ್ಲೂ ಕಳರಿಪಯಟ್ಟು ತುಂಬಿಕೊಳ್ಳುತ್ತದೆಯಂತೆ.

ಸೆಲೆಬ್ರಿಟಿ ಶಿಷ್ಯಂದಿರು
ಗುರುಕುಲಂನ ಸ್ಥಾಪಕ ರಂಜಿತ್‌ ಮುಲ್ಲರತ್‌ ಅವರು ಹಲವು ಮಂದಿ ಸೆಲಬ್ರಿಟಿಗಳಿಗೂ ತರಬೇತಿ ನೀಡಿದ್ದಾರೆ. ನಟ ಪುನೀತ್‌ ರಾಜ್‌ಕುಮಾರ್‌ ಅವರಲ್ಲೊಬ್ಬರು. ಪುನೀತ್‌ ಅವರ ಬಾಡಿ ತುಂಬಾ ಫ್ಲೆಕ್ಸಿಬಲ್‌, ಜೊತೆಗೆ ಅವರದು ಡೆಡಿಕೇಟೆಡ್‌ ಮನೋಭಾವ ಎಂದು ರಂಜಿತ್‌ ನೆನಪಿಸಿಕೊಳ್ಳುತ್ತಾರೆ. ಪುನೀತ್‌ ಅವರ ಸಿನಿಮಾಗಳನ್ನು ನೋಡಿದ್ದರೆ ಅವರ ಜಂಪ್‌, ಫೈಟ್‌ಗಳ ಪರಿಚಯವಿದ್ದೇ ಇರುತ್ತದೆ. ದೈಹಿಕವಾಗಿ ಫಿಟ್‌ ಇದ್ದರೆ ಮಾತ್ರ ಕಲಾವಿದರು ಡೂಪ್‌ ಬಳಸದೆ ಸ್ವತಃ ಫೈಟ್‌ ಸೀನ್‌ಗಳಲ್ಲಿ ಪಾಲ್ಗೊಳ್ಳುವುದು ಸಾಧ್ಯ ಎನ್ನುವುದು ರಂಜಿತ್‌ ಅವರ ಅಭಿಪ್ರಾಯ. ಸೌರವ್‌ ಗಂಗೂಲಿಗೂ ರಂಜಿತ್‌ ಕಳರಿಪಯಟ್ಟು ಕಲಿಸಿದ್ದರು ಎನ್ನುವ ಸಂಗತಿ ಕೇಳಿ ಅಚ್ಚರಿಯಾಗಬಹುದು. ಕೋಲ್ಕತಾದ ಸೌರವ್‌ಗೂ, ಕೇರಳದ ಕಳರಿಪಯಟ್ಟುವಿಗೂ ಎತ್ತಣಿಂದೆತ್ತ ಸಂಬಂಧ ಅನ್ನಿಸುತ್ತಿದೆಯಾ? ಈ ಸಂಬಂಧ ಬೆಸೆಯುವುದಕ್ಕೆ ಕಾರಣವಾಗಿದ್ದು ಚವನ್‌ಪ್ರಾಶ್‌ ಜಾಹೀರಾತು. ಹೀ ಕೆಲವರಿಗೆ ಈಗ ನೆನಪಾಗುತ್ತಿರಬಹುದು. ಅದರಲ್ಲಿ ಸೌರವ್‌ ಕಳರಿಪಯಟ್ಟು ಪಟುವಾಗಿ ಕಾಣಿಸಿಕೊಂಡಿದ್ದರು. ಅಭಿಷೇಕ್‌ ಬಚ್ಚನ್‌(“ಡೆಲ್ಲಿ -6′), ರಾಮ್‌ಚರಣ್‌ (ಮಗಧೀರ), ಶಿವರಾಜ್‌ಕುಮಾರ್‌ (ತಮಸ್ಸು) ಮುಂತಾದವರನ್ನು ರಂಜಿತ್‌ ತರಬೇತುಗೊಳಿಸಿದ್ದಾರೆ.

ಎಲ್ಲಿ?:1.  ಕಳರಿ ಗುರುಕುಲಂ, ನಂ. 102, ಮೇಪಲ್‌ ಮೆಡೋಸ್‌, ಚಿಕ್ಕಗುಬ್ಬಿ
 2. ಕಳರಿ ಅಕಾಡೆಮಿ ಆಫ್ ಪರ್ಫಾರ್ಮಿಂಗ್‌ ಆರ್ಟ್ಸ್, ನಂ. 25, ವಿ.ಎನ್‌. ಪ್ಲಾಝಾ, ಬ್ರಿಗೇಡ್‌ ರಸ್ತೆ
ಸಂಪರ್ಕ: 99451 55995

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next