ಮೂಡಣ ಘಟ್ಟದ ಬುಡದಿಂದ ಪಡುವಣ ಕಡಲ ತಡಿಯವರೆಗೆ ವಿಸ್ತರಿಸಿರುವ ಪರಶುರಾಮ ಸೃಷ್ಟಿಯೆಂದೇ ಖ್ಯಾತವಾಗಿರುವ ಈ ಪವಿತ್ರ ತುಳುನಾಡು ಎಂದಾಕ್ಷಣ ನೆನಪಾಗುವುದು ಭೋರ್ಗರೆವ ಸಮುದ್ರದ ಮೊರೆತ ಕೊರೆತಗಳೊಂದಿಗೆ ಯಕ್ಷಗಾನ, ಭೂತದ ಕೋಲ, ಕಂಬಳ, ನಾಗಮಂಡಲ, ಕಾಡ್ಯನಾಟ, ಹುಲಿಕುಣಿತ, ಕರಂಗೋಳು, ಕಂಗೀಲು… ಮುಂತಾದ ವಿವಿಧ ಜಾನಪದ ಪ್ರಕಾರಗಳು. ಇವಲ್ಲದೆ ಕೇವಲ ಧಾರ್ಮಿಕ ಸಂದರ್ಭಗಳಲ್ಲಿ ಮಾತ್ರ ಕಾಣಸಿಗುವ ಹಲವಾರು ಕಲಾ ಪ್ರಕಾರಗಳಿವೆ. ಅಂತಹ ಕಲೆಗಳಲ್ಲಿ ಹೋಳಿ ಸಂದರ್ಭ ಕಾಣಸಿಗುವ, ಕೊಂಕಣಿ ಮಾತೃಭಾಷೆಯ ಕುಡುಬಿ ಸಮುದಾಯದ ಸಾಂಪ್ರದಾಯಿಕ ಹಾಡುಗಾರಿಕೆಯನ್ನೊಳಗೊಂಡ ಗುಮಟೆ ಕೋಲಾಟ ನೃತ್ಯ ಪ್ರಕಾರವೂ ಒಂದು.
ಪರಕೀಯರ ಮತಾಂತರವನ್ನು ಸಹಿಸದೆ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಮುಂತಾದ ಪ್ರತಿಕೂಲ ಪರಿಸ್ಥಿತಿಯಿಂದಾಗಿ ತಮ್ಮ ಮೂಲನೆಲೆ ಗೋವಾದಿಂದ ದಕ್ಷಿಣಕನ್ನಡಕ್ಕೆ ಸ್ಥಳಾಂತರಗೊಂಡು ಸುಮಾರು ಐದು ಶತಮಾನ ಸಂದರೂ ಕುಡುಬಿಯರು ತಮ್ಮ ಮೂಲ ಸಂಸ್ಕೃತಿ, ಸಂಪ್ರದಾಯ ಪರಂಪರೆಗಳನ್ನು ಇಂದಿಗೂ ಸಂರಕ್ಷಿಸಿಕೊಂಡು ಬಂದಿದ್ದಾರೆ. ಇದು ಇವರು ಹೋಳಿ ಸಂದರ್ಭ ಪ್ರದರ್ಶಿಸುವ ದೃಶ್ಯಶ್ರವ್ಯ ಕಲೆ ಗುಮಟೆ ಕೋಲಾಟ ಪ್ರಕಾರದಿಂದ ವಿದಿತ. ಈ ಕಲೆಯ ಏಳ್ಗೆಗೆ ಶ್ರಮಿಸಿ ಪರಂಪರೆಯ ಸಮರ್ಥ ಪ್ರತಿನಿಧಿ ಎನ್ನಿಸಿ ಕಲಾ ಗೌರವವನ್ನು ಹೆಚ್ಚಿಸಿದ ಸಾಧಕರಲ್ಲಿ ಎಡಪದವಿನ ಗೋಪಾಲ ಗೌಡರು ಒಬ್ಬರು. ಈ ಪರಂಪರೆಯ ಸತ್ವ, ಸ್ವಂತಿಕೆಯನ್ನು ಮೈಗೂಡಿಸಿಕೊಂಡು ಕಲೆಯ ನೋಟ, ಗೌರವ, ಮೌಲ್ಯಗಳಿಗೆ ಕುಂದು ಬರದ ರೀತಿ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಂಡು ಸಾಧನೆಯ ಸೀಮೆಯನ್ನು ವಿಸ್ತರಿಸಿ ಪ್ರಶಂಶೆ, ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾದವರು.
ಮಂಗಳೂರು ತಾಲೂಕಿನ ಎಡಪದವು ಗ್ರಾಮದಲ್ಲಿ ತೀರಾ ಹಿಂದುಳಿದ, ಸಾಂಪ್ರದಾಯಿಕ ಕುಡುಬಿ ಕುಟುಂಬದಲ್ಲಿ 1955ರಲ್ಲಿ ಜನಿಸಿದವರು ಗೋಪಾಲ ಗೌಡರು. ಬಾಲ್ಯದಲ್ಲಿ ಹೊತ್ತು ಹೊತ್ತಿನ ತುತ್ತಿಗೂ ತತ್ತಾ$Ìರ ಇದ್ದ ಕಿತ್ತು ತಿನ್ನುವ ಬಡತನ. ಅಭಿಜಾತ ಕಲಾವಿದರಾದ ಇವರು ನಡೆಯಲು ನುಡಿಯಲು ಕಲಿತಾಗಿನಿಂದಲೇ ಈ ಕಲೆಯನ್ನು ಕಲಿಯುತ್ತ ಬಂದಿದ್ದಾರೆ. ತಾನು ಅನುಭವ ಪಡೆಯುತ್ತಾ, ಕಲಿತುದನ್ನು ಕಿರಿಯರೊಂದಿಗೆ ಹಂಚಿಕೊಳ್ಳುತ್ತಾ ನೀಡಿದ ಕಲಾಸೇವೆ ನಾಲ್ಕು ದಶಕಗಳಿಗೂ ಹೆಚ್ಚಿನ ಅವಧಿಯದು. ಎಳವೆಯಲ್ಲಿ ಸಂಸಾರಿಕ ಜವಾಬ್ದಾರಿಗೆ ಹೆಗಲು ಕೊಡಬೇಕಾದ ಪರಿಸ್ಥಿತಿಯಿಂದ ಪಿಯುಸಿ ಶಿಕ್ಷಣಕ್ಕೆ ತಿಲಾಂಜಲಿ ನೀಡಬೇಕಾಯಿತು. ಪ್ರಾರಂಭದಲ್ಲಿ ಸ್ಥಳೀಯ ಸಹಕಾರಿ ಸಂಸ್ಥೆಯಲ್ಲಿ ಉದ್ಯೋಗದ ಅನಂತರ ಮಂಗಳೂರಿನ ಖ್ಯಾತ ವಿದ್ಯಾಸಂಸ್ಥೆ ಸೈಂಟ್ ಎಲೋಸಿಯಸ್ ಕಾಲೇಜಿನ ಕೊಂಕಣಿ ಸಂಸ್ಥೆಯಲ್ಲಿ ಸೇವಾ ನಿರತರಾಗಿ ನಿವೃತ್ತರಾಗಿದ್ದಾರೆ.
ಒಂದು ಕಾಲದಲ್ಲಿ ನಿಶ್ಚಿತ ಸಂದರ್ಭಗಳ ಹೊರತು ಸಮಾಜದ ಧಾರ್ಮಿಕ ಚೌಕಟ್ಟಿನೊಳಗೆ ಮಡಕೆಯೊಳಗಿನ ದೀಪದಂತೆ ಪ್ರದರ್ಶಿತವಾಗುತ್ತಿದ್ದ ಮತ್ತು ಕುತ್ಸಿತ ಮನೋಭಾವದಿಂದ ಪರಿಗಣಿಸಲ್ಪಟ್ಟ ಈ ಕಲೆಗೆ ವೇದಿಕೆಗಳಲ್ಲಿ ಪ್ರದರ್ಶಿತಗೊಳ್ಳುವ ಅದರಲ್ಲೂ ಕೊಂಕಣಿ ವಲಯದಲ್ಲಿ ತಾರಾ ಮೌಲ್ಯ ಪ್ರಾಪ್ತವಾಗುವ ಯೋಗ ಗೋಪಾಲ ಗೌಡರ ಪ್ರಯತ್ನ ಫಲ ಎಂದರೆ ಅತಿಶಯೋಕ್ತಿಯಾಗಲಾರದು. 14ರ ಪ್ರಾಯದಲ್ಲೇ ತಮ್ಮ ಸಮಾಜದ ಹೊರಗೆ, ಸ್ವ ಸಮಾಜದ ಸಾಂ ಕ ಶಕ್ತಿಗಳ ಪ್ರತಿರೋಧ ಆಕ್ಷೇಪಣೆಗಳನ್ನು ಅವಲಕ್ಷಿಸಿ ಕಲಾ ಪ್ರದರ್ಶನಕ್ಕಾಗಿ ರಚಿಸಿದ, ಸ್ವತಂತ್ರ ತಂಡವಾಗಿ ಪ್ರದರ್ಶನಗಳನ್ನು ನೀಡುತ್ತಿರುವ, ಪ್ರಕೃತ “ಕುಡುಬಿ ಜಾನಪದ ಕಲಾ ವೇದಿಕೆ’ ಎಂಬ ಏಕೈಕ ನೋಂದಾಯಿತ ಸಂಸ್ಥೆ. ವಿವಿಧ ಸಂದರ್ಭಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ 200ಕ್ಕೂ ಮಿಕ್ಕ ಯಶಸ್ವಿ ಪ್ರದರ್ಶನಗಳನ್ನು ನೀಡಿ ಕುಡುಬಿ ಸಮುದಾಯದ ಅಸ್ತಿತ್ವವನ್ನು ಅನಾವರಣಗೊಳಿಸಿದ ಕೀರ್ತಿ ಈ ತಂಡಕ್ಕೆ ಸಲ್ಲುತ್ತದೆ.
ಕಲಾಕಾರನ ನೆಲೆಯಲ್ಲಿ ತಮ್ಮ ಅನುಭವ ಮತ್ತು ಜ್ಞಾನದಿಂದ ಕುಡುಬಿಯರ ಬಗ್ಗೆ ಸಂಶೋಧನೆ ಕೈಗೊಂಡ ದೇಶೀ ಹಾಗೂ ವಿದೇಶೀ ಸಂಶೋಧಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ಒದಗಿಸಿದ್ದಾರೆ. ಸ್ವಿಟ್ಜರ್ಲೆಂಡ್, ಕೆನಡಾ, ಜರ್ಮನಿ, ಇಂಗ್ಲೆಂಡ್ ಮುಂತಾದೆಡೆಗಳಿಂದ ಬಂದ ಅಧ್ಯಯನಕಾರರು ಇವರಿಂದ ಜಾನಪದ ದಾಖಲೀಕರಣ ಮಾಡಿಕೊಂಡಿದ್ದಾರೆ. ಕುಡುಬಿ ಸಮಾಜದ ಪ್ರಥಮ ಬರಹಗಾರರಾಗಿ ಇವರ ಬರಹಗಳು ವಿವಿಧ ಸಮೂಹ ಮಾಧ್ಯಮಗಳಲ್ಲಿ, ಸಂಶೋಧನಾ ಕೃತಿಗಳಲ್ಲಿ, ಪಠ್ಯವಿಷಯವಾಗಿ ಪ್ರಕಟನೆಗೊಂಡಿವೆ. ವಿವಿಧ ಕಾರ್ಯಾಗಾರ, ವಿಚಾರಸಂಕಿರಣ, ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಬಂಧ, ಭಾಷಣ, ವಿಚಾರ ಮಂಡನೆಗಳಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಕುಡುಬಿ ಸಂಸ್ಕೃತಿಯ ಸಂಗ್ರಹಯೋಗ್ಯ ಆರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಕಲಾ ತಂಡಕ್ಕೆ ಕೇಂದ್ರ ಸರಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸ್ಕಾಲರ್‌ಶಿಪ್ ಲಭಿಸಿದೆ. 2010ರಲ್ಲಿ ಮಂಗಳೂರಿನ ಮಾಂಡ್ ಸೋಭಾಣ್ ಸಂಸ್ಥೆ ಇವರ ತಂಡವನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಸಮ್ಮಾನಿಸಿದೆ. ವೈಯಕ್ತಿಕವಾಗಿ ಗೋಪಾಲ ಗೌಡರು ವಿವಿಧ ಸಂಘ ಸಂಸ್ಥೆಗಳಿಂದ ಹಲವು ಬಾರಿ ಸಮ್ಮಾನಿಸಲ್ಪಟ್ಟಿದ್ದಾರೆ. ಕರ್ನಾಟಕ ಕೊಂಕಣಿ ಅಕಾಡೆಮಿ 2002ರ ಗೌರವ ಜಾನಪದ ಪ್ರಶಸ್ತಿ, ಜಿಲ್ಲಾಡಳಿತ 2014ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿವೆ. ಮಂಗಳೂರಿನ ಮಾಂಡ್ ಸೋಭಾಣ್ ಸಂಸ್ಥೆ ಇದೀಗ ಇವರನ್ನು ತನ್ನ ಪ್ರತಿಷ್ಠಿತ “ಕಲಾಕಾರ್ ಪ್ರಶಸ್ತಿ’ಯೊಂದಿಗೆ ಗೌರವಿಸಿರುವುದು ಇವರ ಸಾಧನೆಯ ಮುಕುಟಕ್ಕೆ ತೃತೀಯ ಗರಿಯಾಗಿದೆ.
ವಿಜಯ ಗೌಡ ಶಿಬ್ರಿಕೆರೆ