ಕಲಬುರಗಿ: ಮರಗಳ ಮಾರಣಹೋಮ ಮಾಡಿ ನಗರ-ಪಟ್ಟಣ ಅಭಿವೃದ್ಧಿ ಮಾಡುವುದು ಸರಿಯಲ್ಲ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧಿಧೀಶ ಹಾಗೂ ಪ್ರಭಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಳಪ್ಪ ಎ. ಜರಗು ಹೇಳಿದರು.
ಸರ್ವಜ್ಞ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ, ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಶನ್, ಸರ್ವಜ್ಞ ವಿಜ್ಞಾನ ಕಾಲೇಜು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಅಭಿವೃದ್ಧಿ ಹೆಸರಿನಲ್ಲಿ ಎಲ್ಲೆಡೆ ರಸ್ತೆ ಬದಿ ಮರಗಳನ್ನು ಕಡಿಯಲಾಗುತ್ತಿದೆ. ಕಲಬುರಗಿಯಂತ ನಗರದಲ್ಲಿ 46 ಡಿಗ್ರಿ ತಾಪಮಾನ ದಾಖಲೆಯಾಗುತ್ತಿರುವುದು ಮರಗಳ ಕ್ಷೀಣತೆ ತೋರಿಸುತ್ತದೆ. ಬಿಸಿಲಿನ ತಾಪಮಾನ ಕಡಿಮೆ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಸಸಿ ನೆಡುವ ಮೂಲಕ ಪರಿಸರ ಕಾಳಜಿ ಪ್ರದರ್ಶಿಸಬೇಕು ಎಂದರು.
ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ನಾ ಹಿರೇಮಠ ಮಾತನಾಡಿ, ಅವೈಜ್ಞಾನಿಕ ಪರಿಸರ ನೀತಿ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಜಿಲ್ಲಾ ನ್ಯಾಯಾಧಿಧೀಶ ಶರಣಪ್ಪ ಉದ್ಘಾಟಿಸಿದರು. ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧಿಧೀಶ ಹಾಗೂ ಜಸ್ಟೀಸ್ ಶಿವರಾಜ ವಿ. ಪಾಟೀಲ ಫೌಂಡೇಷನ್ ಉಪಾಧ್ಯಕ್ಷ ಎಸ್.ಎಂ. ರೆಡ್ಡಿ, ನ್ಯಾಯವಾದಿಗಳಾದ ಶಿವರಾಜ ಪಾಟೀಲ, ಶರಣಬಸಪ್ಪ ಇದ್ದರು.
ಕುಮಾರಿ ಶರಣೆ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಸರ್ವಜ್ಞ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ ಸ್ವಾಗತಿಸಿದರು, ಪ್ರಾಂಶುಪಾಲ ಎಂ.ಸಿ. ಕಿರದಳ್ಳಿ ವಂದಿಸಿದರು.