ಕಲಬುರಗಿ: ಇಡೀ ಮಾನವ ಕುಲವನ್ನೇ ತಲ್ಲಣಿಸಿದ ಕೊರೊನಾ ವೈರಸ್ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಹೊಡೆತ ನೀಡಿದರೂ ಕೂಲಿ ಕಾರ್ಮಿಕರ ಸಂಖ್ಯೆ ಮಾತ್ರ ಹೆಚ್ಚಳವಾಗುವಂತೆ ಮಾಡಿದೆ. ಕೃಷಿ ಕೆಲಸ ಕಾರ್ಯ ಹಾಗೂ ತೋಟಗಳಲ್ಲಿ ವರ್ಷಕ್ಕೆಂದು ಇಂತಿಷ್ಟು ಸಂಬಳಕ್ಕೆಂದು ದುಡಿಯುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಅಲ್ಲದೇ ಸಂಬಳ ಸಹ ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ.
ಪ್ರತಿ ವರ್ಷ ಯುಗಾದಿ ಹಬ್ಬದ ದಿನದಿಂದ ಹಿಡಿದು ಮುಂದಿನ ಯುಗಾದಿವರೆಗೂ ದುಡಿತದ ಅವಧಿ ಚಾಲ್ತಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೊರೊನಾ ಬರುವ ಮುಂಚೆ ಮಾರ್ಚ್ ಮಧ್ಯದ ಅವಧಿಯಲ್ಲಿ ವರ್ಷದ ಅವಧಿಗೆ ದುಡಿತಕ್ಕೆ ಒಂದು ಲಕ್ಷ ಇಲ್ಲವೇ 1.20 ಲಕ್ಷ ರೂ. ಸಂಬಳ ನಿಗದಿಯಾಗಿತ್ತು. ಆದರೆ ಈ ಸಮಯದಲ್ಲೇ ಕೊರೊನಾ ಹಾವಳಿ ವ್ಯಾಪಕವಾಗಿ ದೂರದ ಊರುಗಳಿಗೆ ಹೋಗಿದ್ದ ಕೃಷಿ ಕೂಲಿ ಕಾರ್ಮಿಕರು ವಾಪಸ್ ಬಂದ ನಂತರ ಸಂಬಳ ಕಡಿಮೆ ಆಗಲಾರಂಭಿಸಿತು. 80 ಸಾವಿರದಿಂದ 90 ಸಾವಿರ ರೂ.ಗೆ ಬಂದು ನಿಂತಿತ್ತು. ಇದಕ್ಕೆ ವಾಪಸ್ ಬಂದ ದುಡಿಯುವವರೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.
ಉದ್ಯೋಗ ಖಾತ್ರಿ ಯೋಜನೆ ಬಂದು ರೈತರಿಗೆ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತಂದೊಡ್ಡಿದ್ದು ಒಂದೆಡೆಯಾದರೆ, ಊರಲ್ಲಿ ಇದ್ದ ಕೃಷಿ ಕೂಲಿ ಕಾರ್ಮಿಕರು ದೂರದ ಪಟ್ಟಣಗಳಿಗೆ ಕಟ್ಟಡ, ಇಟ್ಟಂಗಿ ಭಟ್ಟಿ ಸೇರಿದಂತೆ ಇತರ ಕಾಮಗಾರಿಗೆ ಪ್ರತಿ ಹಳ್ಳಿಯಿಂದ 100ರಿಂದ 150 ಕೃಷಿ ಕೂಲಿ ಕಾರ್ಮಿಕರು ಹೋಗಿದ್ದರು. ಕೊರೊನಾ ಹೊಡೆತದಿಂದ ಶೇ. 90 ಕಾರ್ಮಿಕರೆಲ್ಲರೂ ಈಗಾಗಲೇ ಮರಳಿ ಸ್ವ ಗ್ರಾಮಕ್ಕೆ ಬಂದಿದ್ದು, ಇದರಲ್ಲಿ ಶೇ.80 ಕಾರ್ಮಿಕರು ವಾಪಸ್ ಹೋಗದಿರಲು ನಿರ್ಧರಿಸಿದ್ದಾರೆ.
ಇವರೆಲ್ಲರೂ ಊರಲ್ಲೇ ಹೊಲ-ಗದ್ದೆಗಳಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸಲು ಮುಂದಾಗಿದ್ದಾರೆ. ಹೀಗಾಗಿ ರೈತರಿಗೆ ತಕ್ಕಮಟ್ಟಿಗೆ ಕೃಷಿ ಕೂಲಿ ಕಾರ್ಮಿಕ ಸಮಸ್ಯೆ ನೀಗುವುದು ಸ್ಪಷ್ಟವಾಗಿದೆ. ಕೊರೊನಾ ಭೀತಿಯಿಂದ ಕಾರ್ಮಿಕರು ಕಷ್ಟಪಟ್ಟು ಜೀವ ಕೈಯಲ್ಲಿಡಿದುಕೊಂಡು ಬಂದಿರುವುದನ್ನು ಜೀವನ ಪರ್ಯಂತ ಮರೆಯುವಂತಿಲ್ಲ. ಕೆಲವೆಡೆ ಮಾಲೀಕರು ಸಂಬಳ ನೀಡದೇ ಬರಿಗೈಲಿ ಕಳುಹಿಸಿ ರುವುದು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಊರಲ್ಲಿ ರೈತರು ಊಟಕ್ಕೆ ಜೋಳ ಕೊಡ್ತಾರೆ, ಜೀವನ ಸಾಗಿಸಲಿಕ್ಕೆ ಹಣ ನೀಡ್ತಾರೆ. ಇನ್ಮುಂದೆ ಹಳ್ಳಿ ಬಿಟ್ಟು ಇನ್ಮುಂದೆ ಹೋಗೋದಿಲ್ಲ ಎಂದು ಕೃಷಿ ಕೂಲಿ ಕಾರ್ಮಿಕರು ಹೇಳುತ್ತಿದ್ದಾರೆ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಹೆಚ್ಚಿಗೆ ಸಿಗಬಹುದು. ಆದರೆ ಅನಗತ್ಯವಾಗಿ ಖರ್ಚೆ ಹೆಚ್ಚಾಗುತ್ತಿತ್ತು. ಊರಿಗೆ ಬರುವಾಗ ಬರಿಗೈಲೆ ಬರುತ್ತಿದ್ದೆವು. ಈಗ ಅದರ ಸಹವಾಸವೇ ಬೇಡ, ಸತ್ತರೇ ಊರಲ್ಲೇ ಇರ್ತೇವೆ ಎನ್ನುತ್ತಾರೆ ಮುಂಬೈ, ಪುಣೆ-ಬೆಂಗಳೂರಿಗೆ ಹೋಗಿ ವಾಪಸ್ಸಾಗಿರುವ ಕೂಲಿಕಾರರು. ಹಳ್ಳಿಗೆ ಬಂದಿರುವ ಬಹುತೇಕ ಯುವಕರು ತಮ್ಮ ಹೊಲ ಗದ್ದೆಗಳ ಕೃಷಿ ಕಾಯಕದಲ್ಲಿ ತೊಡಗೋಣ ಎಂಬುದಾಗಿ ಹೇಳುತ್ತಿದ್ದಾರೆ.
ಮೇಟಿ ವಿದ್ಯೆಗೆ ಹೆಚ್ಚಿದ ಮಹತ್ವ: ಸಕಾಲಕ್ಕೆ ಕೃಷಿ ಕೂಲಿ ಕಾರ್ಮಿಕರು ಸಿಗದೇ ಇದ್ದುದ್ದಕ್ಕೆ ಅನೇಕ ರೈತರು ಕೃಷಿ ಮಾಡೋದನ್ನೇ ಬಿಟ್ಟಿದ್ದರು. ಇನ್ನು ಕೆಲವರು ಗುತ್ತಿಗೆ ಕೃಷಿಗೆ ಮೊರೆ ಹೋಗಿದ್ದರು. ಈಗ ಗ್ರಾಮಗಳಿಗೆ ಕೃಷಿ ಕೂಲಿ ಕಾರ್ಮಿಕರು ವಾಪಸ್ ಬಂದಿದ್ದರಿಂದ ಕೃಷಿಯಿಂದ ವಿಮುಕ್ತರಾದವರು ಮತ್ತೆ ಕೃಷಿ ಕಾರ್ಯಕ್ಕೆ ಇಳಿದಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಸಮಸ್ಯೆಯಿಂದ ವರ್ಷಕ್ಕೆ ಶೇ.5ರಿಂದ7 ಪ್ರತಿಶತದಷ್ಟು ರೈತರು ಕೃಷಿಯಿಂದ ವಿಮುಕ್ತರಾಗುತ್ತಿದ್ದರು ಎನ್ನುವುದೊಂದು ವರದಿ ಇತ್ತು. ಈಗ ಇವರೆಲ್ಲರೂ ವಾಪಸ್ ಕೃಷಿಗೆ ಮರಳಿ ಬರುವುದು ನಿಶ್ಚಿತ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಒಟ್ಟಾರೆ ಮೇಟಿ ವಿದ್ಯೆಗೆ ಈಗ ಹೆಚ್ಚಿನ ಮಹತ್ವ ಬರುತ್ತಿದೆ.
ದೂರದ ಊರಿಗೆ ಹೋದವರಿಂದು ಹಳ್ಳಿಗಳಿಗೆ ವಾಪಸ್ ಬಂದಿದ್ದಾರೆ. ಇವರಿಗೆ ಕೃಷಿ ಕೂಲಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟರೆ ಬೇರೆ ಕಾರ್ಯವಿಲ್ಲ. ಮುಖ್ಯವಾಗಿ ಕೃಷಿ ಕೂಲಿ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಿನ ದಿನಗಳಲ್ಲಿ ತಕ್ಕಮಟ್ಟಿಗೆ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ನೀಗುವ ವಿಶ್ವಾಸ ಹೊಂದಲಾಗಿದೆ.
ಭೀಮಶೆಟ್ಟಿ ಎಂಪಳ್ಳಿ,
ಅಧ್ಯಕ್ಷರು, ಕೃಷಿ ಕೂಲಿ ಕಾರ್ಮಿಕರ ಸಂಘ,
ಕಲಬುರಗಿ
ಹಣಮಂತರಾವ ಭೈರಾಮಡಗಿ