Advertisement

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಬೇಡ

04:30 PM Jan 11, 2020 | Naveen |

ಕಲಬುರಗಿ: ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡಬಾರದು ಎಂದು ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮ ನೌಕರರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ, ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳ ನಿರ್ದೇಶಕ ಟಿ.ಆರ್‌. ರಾಮಕೃಷ್ಣಯ್ಯ ಹೇಳಿದರು.

Advertisement

ನಗರದ ಜೇವರ್ಗಿ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ಸಮುದಾಯ ಭವನದಲ್ಲಿ ಶುಕ್ರವಾರ ಸಂಘದ ಸಂಘಟನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿಯವರಿಗೆ ವಿದ್ಯುತ್‌ ಕ್ಷೇತ್ರವನ್ನು ಕೊಡುವ ಹುನ್ನಾರ ನಡೆಯುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆಯಲ್ಲಿ ಶಕ್ತಿ, ಬಲ, ಒಗ್ಗಟ್ಟು ಇದ್ದಲ್ಲಿ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ವಿದ್ಯುತ್‌ ಕ್ಷೇತ್ರ ಹೋಗದು. ಈ ಹಿಂದೆ ನಿಗಮದ ನೌಕರರು ವೇತನ ಶ್ರೇಣಿಯಲ್ಲಿ ಬಡ್ತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಸಂಘಟನೆಯು ಅವುಗಳನ್ನು ಇಲ್ಲಿಯವರೆಗೆ ಇತ್ಯರ್ಥಪಡಿಸಿಕೊಂಡು ಬಂದಿದೆ. ಹಲವಾರು ಸಂದರ್ಭಗಳಲ್ಲಿ ಸಂಘದ ಹಲವಾರು ಬೇಡಿಕೆಗಳು ಈಡೇರದೇ ಇದ್ದಾಗ ಹಿನ್ನಡೆ ಆಗಿದ್ದುಂಟು. ಆ ಹಿನ್ನೆಡೆಯಿಂದ ನಿರಾಶೆಗೊಳ್ಳದೇ ಪ್ರತಿ ಹಂತದಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಿದ್ದರಿಂದ ಹತ್ತು ಹಲವು ಬೇಡಿಕೆಗಳು ಸಾಕಾರಗೊಂಡಿವೆ ಎಂದು ಹೇಳಿದರು.

ಸಂಘಟನೆಯ ಮೊದಲಿನ ಅಧ್ಯಕ್ಷರು ಸಹ ಒಳ್ಳೆಯ ಕೆಲವು ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದ ಅವರು, ಮೈಸೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪ್ರತಿಭಟಿಸಿದಾಗ ತಮಗೂ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಅಲ್ಲದೇ ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೂ ತೆಗೆದುಹಾಕಲಾಗಿತ್ತು. ಆದರೆ ಕಾನೂನು ಹೋರಾಟದ ಮೂಲಕ ಗೆಲುವು ಸಾಧಿ ಸಿದ್ದೇವೆ ಎಂದರು.

ವಿದ್ಯುತ್‌ ಕ್ಷೇತ್ರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇದರಿಂದ ಕೆಲಸ, ಕಾರ್ಯಗಳಿಗೆ ತೊಂದರೆ ಹಾಗೂ ವಿಳಂಬ ಆಗುತ್ತಿದೆ. ಕಿರಿಯ ಅಭಿಯಂತರ, ಲೈನ್‌ಮನ್‌ ಸೇರಿದಂತೆ ಎಲ್ಲ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

Advertisement

ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆದಿದೆ. ನಿಗಮವು ಈಗ 4.65 ರೂ. ವೆಚ್ಚದಲ್ಲಿ ವಿದ್ಯುತ್‌ ಪೂರೈಸುತ್ತಿದೆ. ನಮಗೆ ಆರು ರೂ. ವೆಚ್ಚ ಬೀಳುತ್ತಿದ್ದು, ಪೂರೈಕೆ ಭಾರ ಹೆಚ್ಚಿದರೆ ಏಳು ರೂ. ಆಗಲಿದೆ. ಹೀಗಾಗಿ ನಿಗಮಕ್ಕೆ ಸಾಕಷ್ಟು ನಷ್ಟವುಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಖಾಸಗಿಯವರು ಕೇವಲ 2ರಿಂದ ಮೂರು ರೂ. ವೆಚ್ಚದಲ್ಲಿ ವಿದ್ಯುತ್‌ ಪೂರೈಸಲು ಮುಂದಾಗಿದ್ದಾರೆ. ಹೀಗಾದಲ್ಲಿ ನಿಗಮವು ಸಂಪೂರ್ಣ ದಿವಾಳಿ
ಆಗಲಿದೆ. ಅಲ್ಲದೇ ನಿಗಮಕ್ಕೆ ಸಾಲ ಕೊಡಲು ಯಾರೂ ಮುಂದೆ ಬರುವುದಿಲ್ಲ. ನೌಕರರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಗುಲಬರ್ಗಾ ವಿದ್ಯುತ್‌ ಪ್ರಸರಣ ನಿಗಮದ ಮುಖ್ಯ ಅಭಿಯಂತರ ಆರ್‌.ಡಿ. ಚಂದ್ರಶೇಖರ ಉದ್ಘಾಟಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಬಲರಾಮ್‌, ಕಾರ್ಯದರ್ಶಿ ಟಿ. ಸುಬ್ರಮಣ್ಯ, ನೀಲಪ್ಪ ಧೋತ್ರಿ, ಟಿ. ಹನುಮಂತಪ್ಪ, ಶಾಮರಾಯ ಇಟಗಿ, ವೀರಣ್ಣ ಮುದ್ನಾಳೆ, ಕೆ.ಎಂ. ವೀರೇಶ, ಶಂಕರ ಪಸರಗಿ, ಭರತ್‌ಭೂಷಣ ಕಮಠಾಣೆ, ಎಂ. ಶೆಕ್ಷಾವಲಿ, ದಿಲೀಪಕುಮಾರ
ಎಂ., ವೆಂಕಟೇಶ, ಕೆ. ಹನುಮಂತಪ್ಪ, ಸೀನಪ್ಪ, ಶಂಕರಗೌಡ ಪಾಟೀಲ, ಸಂತೋಷ ವಡಕಿ ಮುಂತಾದವರಿದ್ದರು.

ಸಂಘದ ಉಪಾಧ್ಯಕ್ಷ ನೀಲಪ್ಪ ಧೋತ್ರಿ ಸ್ವಾಗತಿಸಿದರು. ಕೇಂದ್ರ ಸಮಿತಿ ಸದಸ್ಯ ಬಾಬು ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ರಾಮಮಂದಿರ ವೃತ್ತದಿಂದ ಅಧ್ಯಕ್ಷ ಟಿ.ಆರ್‌. ರಾಮಕೃಷ್ಣಯ್ಯ ಅವರನ್ನು ಮೆರವಣಿಗೆ ಮೂಲಕ ಸಮುದಾಯ ಭವನಕ್ಕೆ ಕರೆತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next