Advertisement

ಪೌರತ್ವ ಬೆಂಬಲಿಸಿ 7ಕಿ.ಮೀ ರ‍್ಯಾಲಿ

05:21 PM Jan 12, 2020 | Naveen |

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಬೃಹತ್‌ ರಾಷ್ಟ್ರ ಧ್ವಜ ರಾರಾಜಿಸಿತು.

Advertisement

ದೇಶದ ಹಿತರಕ್ಷಣೆ ಮತ್ತು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿನ ಹಿಂದೂಗಳು ಸೇರಿ ನೊಂದ ಆರು ಧರ್ಮದವರಿಗೆ ಆಶ್ರಯ ಕಲ್ಪಿಸಲು ಮೋದಿ ಸರ್ಕಾರ ಪೌರತ್ವ ಕಾಯ್ದೆ ತಂದಿರುವುದು ಸ್ವಾಗತಾರ್ಹವಾಗಿದೆ. ಮೋದಿ ಸರ್ಕಾರದ ಕಾಯ್ದೆಯಿಂದ ಯಾರಿಗೂ ತೊಂದರೆ ಇಲ್ಲ. ಕಾಯ್ದೆಯನ್ನು ದೇಶದ ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಜನ ಜಾಗೃತಿ ಮೂಡಿಸಲು ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಅಪ್ಪ ಮುಂದಾಳತ್ವದಲ್ಲಿ ಕಲಬುರಗಿ ನಾಗರಿಕ ಸಮಿತಿಯಿಂದ ಬೃಹತ್‌ ತಿರಂಗ ನಡಿಗೆ ನಡೆಯಿತು.

ಈ ನಡಿಗೆಯಲ್ಲಿ ಎರಡು ಸಾವಿರ ಮೀಟರ್‌ ಉದ್ದ, ಐದು ಅಡಿ ಅಗಲದ ತಿರಂಗ ಧ್ವಜ ಮತ್ತು ಬೃಹತ್‌ ಭಾರತಾಂಬೆ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಬೆಳಗ್ಗೆ 11 ಗಂಟೆಗೆ
ಗಂಜ್‌ ಪ್ರದೇಶದ ನಗರೇಶ್ವರ ಶಾಲೆ ಸಮೀಪ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಅಲ್ಲಿಂದ ಬಂಬೂ ಬಜಾರ್‌, ಕಿರಾಣಾ ಬಜಾರ್‌, ಸೂಪರ್‌ ಮಾರ್ಕೆಟ್‌, ಜಗತ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ ರಸ್ತೆ ಮಾರ್ಗವಾಗಿ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ವೃತ್ತದವರೆಗೆ ಮೆರವಣಿಗೆ ಸಾಗಿತು. ಸುಮಾರು 7 ಕಿ.ಮೀ ನಡೆದ ಮೆರವಣಿಗೆಯಲ್ಲಿ ಸಾವಿರಾರು ಯುವಕರು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿದರು. ಬೃಹತ್‌ ತಿರಂಗ ಮಾತ್ರವಲ್ಲದೇ ಮೆರವಣಿಗೆಯಲ್ಲಿ ಸಾಗಿದ ಬಹುತೇಕರ ಕೈಯಲ್ಲಿ ತಿರಂಗ ಧ್ವಜ ರಾರಾಜಿಸಿತು. ಪೌರತ್ವ ಕಾಯ್ದೆ ಮತ್ತು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಪರ ಜಯ ಘೋಷಗಳೊಂದಿಗೆ ಬೆಂಬಲಿಗರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯುದ್ದಕ್ಕೂ “ಮೋದಿ ತುಮ್‌ ಆಗೆ ಬಡೋ, ಹಮ್‌ ಪೀಚೆ ಹೈ’ ಎನ್ನುತ್ತಾ ಸಾಗಿದರು.

“ವೀ ಸಪೋರ್ಟ್‌’ ಬ್ಯಾನರ್‌: ಮೆರವಣಿಗೆಯಲ್ಲಿ ಬಹೃತ್‌ ಧ್ವಜದೊಂದಿಗೆ “ವೀ ಸಪೋರ್ಟ್‌ ಸಿಎಎ’ ಎನ್ನುವ ದೊಡ್ಡ ಬ್ಯಾನರ್‌ ಗಮನ ಸೆಳೆಯಿತು. ನಗರೇಶ್ವರ ಶಾಲೆಯಿಂದಲೂ ಸಂಸದ ಡಾ| ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಡಾ| ಅವಿನಾಶ ಜಾಧವ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ, ದೊಡ್ಡಪ್ಪಗೌಡ ಪಾಟೀಲ, ಶಶೀಲ ನಮೋಶಿ, ವಾಲ್ಮೀಕಿ ನಾಯಕ ಹಾಗೂ ಪ್ರಮುಖ ನಾಯಕರು ಧ್ವಜ ಹಿಡಿದು ಸಾಗಿದರು.

Advertisement

ಊಟದ ವ್ಯವಸ್ಥೆ: ಸರಿ ಸುಮಾರು 7 ಕಿ.ಮೀ ದೂರ ಸಾಗಿದ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗಾಗಿ ಕುಡಿಯಲು ನೀರು, ಮಜ್ಜಿಗೆ ವಿತರಿಸಲಾಯಿತು. ಆಟೋಗಳಲ್ಲಿ ನೀರು, ಮಜ್ಜಿಗೆ ಪ್ಯಾಕೇಟ್‌ ತಂದು ಕೊಡಲಾಯಿತು. ಅಲ್ಲದೇ, ಅನ್ನಪೂರ್ಣ ಕ್ರಾಸ್‌, ‌ರ್ದಾರ್‌ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಊಟ ಕಲ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next