Advertisement

ಮೈಸೂರು ದಸರಾಕ್ಕೆ ಆಯುಷಾನ್‌ ಭಾರತ

12:04 PM Sep 22, 2019 | Naveen |

„ರಂಗಪ್ಪ ಗಧಾರ

Advertisement

ಕಲಬುರಗಿ: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಜಿಲ್ಲೆಯ ಇಎಸ್‌ಐಸಿ ಆಸ್ಪತ್ರೆ ಮತ್ತು ಜಿಮ್ಸ್‌ ಆಸ್ಪತ್ರೆ ಕಟ್ಟಡಗಳು ರಾರಾಜಿಸಲಿವೆ. ‘ಆಯುಷ್ಮಾನ್‌ ಭಾರತ’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಜಾರಿಗೆ ಬಂದು ಸೆ.23ಕ್ಕೆ ಒಂದು ವರ್ಷವಾಗಲಿದೆ. ಈಗಾಗಲೇ ವರ್ಷಾಚರಣೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಜಿಲ್ಲೆಯ ಇಎಸ್‌ಐಸಿ (ಕಾರ್ಮಿಕರ ರಾಜ್ಯ ವಿಮಾ ನಿಗಮ) ಆಸ್ಪತ್ರೆ ಮತ್ತು ಜಿಮ್ಸ್‌ (ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆ ಜನರಿಗೆ ಆರೋಗ್ಯ ಸೇವೆ ಒದಗಿಸುವ ಸುಸಜ್ಜಿತ ಕಟ್ಟಡಗಳಾಗಿವೆ. ಈ ಎರಡನ್ನು ಪ್ರತಿಬಿಂಬಿಸುವ ಸ್ತಬ್ದಚಿತ್ರಕ್ಕೆ ಮೈಸೂರು ದಸರಾ ಸ್ತಬ್ಧಚಿತ್ರ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ವಿಶೇಷವೆಂದರೆ ಇಎಸ್‌ಐ ಆಸ್ಪತ್ರೆಯಲ್ಲಿ ‘ಆಯುಷ್ಮಾನ್‌ ಭಾರತ’ ಯೋಜನೆಯಡಿ ಚಿಕಿತ್ಸೆ ಪಡೆಯಲು ಇತ್ತೀಚೆಗೆ ಅನುಮತಿ ನೀಡಲಾಗಿದೆ. ಸ್ತಬ್ಧಚಿತ್ರದ ಮೂಲಕ ಅರಿವು: “ಆಯುಷ್ಮಾನ್‌ ಭಾರತ’ ಯೋಜನೆಗೆ 2018ರ ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದ 10 ಕೋಟಿಗೂ ಅಧಿಕ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳು ಯೋಜನೆ ವ್ಯಾಪ್ತಿಗೆ ಒಳಪಡಲಿದ್ದು, ಸುಮಾರು 50 ಕೋಟಿ ಜನರು ‘ಆಯುಷ್ಮಾನ್‌ ಭಾರತ’ ಯೋಜನೆ ಸದುಪಯೋಗ ಪಡೆಯಬಹುದಾಗಿದೆ.

ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 777 ಆಸ್ಪತ್ರೆಗಳಲ್ಲಿ “ಆಯುಷ್ಮಾನ್‌ ಭಾರತ’ ಯೋಜನೆ ಚಾಲ್ತಿಯಲ್ಲಿದೆ. ರಾಜ್ಯದ “ಆರೋಗ್ಯ ಕರ್ನಾಟಕ’ ಮತ್ತು ಕೇಂದ್ರದ “ಆಯುಷ್ಮಾನ್‌ ಭಾರತ’ ಯೋಜನೆಗಳನ್ನು ವಿಲೀನಗೊಳಿಸಲಾಗಿದೆ. ಇದು “ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ’ ಎನ್ನುವ ಹೆಸರಿನಲ್ಲಿ ಜಾರಿಯಲ್ಲಿದೆ. ರಾಜ್ಯಾದ್ಯಂತ 97.82 ಲಕ್ಷ ಜನರು ಯೋಜನೆಯ ಸ್ಮಾರ್ಟ್‌ ಕಾರ್ಡ್‌ಗಳನ್ನು ಪಡೆದಿದ್ದಾರೆ. ಸದ್ಯಕ್ಕೆ ಸ್ಮಾರ್ಟ್‌ ಕಾರ್ಡ್‌ ಇಲ್ಲದಿದ್ದರೂ ಯೋಜನೆಯಡಿ ವೈದ್ಯಕೀಯ ಸೌಲಭ್ಯ  ಡೆಯಬಹುದು. ಈ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸಲು ಜಿಲ್ಲಾ ಪಂಚಾಯಿತಿ ಹಾಗೂ ಮೈಸೂರು ದಸರಾ ಸ್ತಬ್ದ ಚಿತ್ರ ಸಮಿತಿ “ಆಯುಷ್ಮಾನ್‌ ಭಾರತ’ ಎಂದೇ ಹೆಸರಲ್ಲೇ ಸ್ತಬ್ಧಚಿತ್ರ ಸಿದ್ಧಪಡಿಸಲು ನಿರ್ಧರಿಸಿವೆ. “ಆಯುಷ್ಮಾನ್‌ ಭಾರತ’ ಸ್ತಬ್ಧಚಿತ್ರ ಇಎಸ್‌ ಐಸಿ ಮತ್ತು ಜಿಮ್ಸ್‌ ಆಸ್ಪತ್ರೆಗಳನ್ನು ಒಳಗೊಂಡಿದೆ.

Advertisement

25 ಅಡಿ ಉದ್ದ, 9.5 ಅಡಿ ಅಗಲ ಮತ್ತು 13 ಅಡಿ ಎತ್ತರದಲ್ಲಿ ಸ್ತಬ್ಧಚಿತ್ರ ನಿರ್ಮಿಸಲು ಇ-ಟೆಂಡರ್‌ ಮೂಲಕ ಆಹ್ವಾನಿಸಲಾಗಿತ್ತು. ಬೀದರ್‌ ಜಿಲ್ಲೆಯ ಬಸವಕಲ್ಯಾಣದ ಕಲಾವಿದ ಶಿವಕುಮಾರಸ್ವಾಮಿ ಸ್ತಬ್ಧಚಿತ್ರ ನಿರ್ಮಿಸಲು ಮುಂದೆ ಬಂದಿದ್ದಾರೆ ಎಂದು ಸ್ತಬ್ಧಚಿತ್ರ ನೋಡಲ್‌ ಅಧಿಕಾರಿ ಆಗಿರುವ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಉಪನಿರ್ದೇಶಕ ಅರುಣ ಕತ್ತಿ ತಿಳಿಸಿದ್ದಾರೆ.

ಸೆ.22ರಿಂದ ತಯಾರಿ ಆರಂಭ: ಜಿಲ್ಲೆಯ “ಆಯುಷ್ಮಾನ್‌ ಭಾರತ’ ಸ್ಥಬ್ದಚಿತ್ರದ ಹೊಣೆ ಹೊತ್ತಿರುವ ಕಲಾವಿದ ಶಿವಕುಮಾರ ಸ್ವಾಮಿ ತಮ್ಮ ತಂಡದೊಂದಿಗೆ ಈಗಾಗಲೇ ಮೈಸೂರಿನಲ್ಲಿ ಇದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಸ್ತಬ್ಧಚಿತ್ರ ನಿರ್ಮಾಣದಲ್ಲಿ ಶಿವಕುಮಾರ ಸ್ವಾಮಿ ತೊಡಗಿಸಿಕೊಂಡಿದ್ದಾರೆ.

ಈ ಹಿಂದೆ ಬೀದರ್‌ ಜಿಲ್ಲೆಯ “ಅನುಭವ ಮಂಟಪ’, “ಬೀದರ್‌ ಕೋಟೆ’, “ಗುರುದ್ವಾರ’, “ಬಸವಕಲ್ಯಾಣದ ಮಡಿವಾಳ  ಚಿದೇವರ ಹೊಂಡ’ ಹಾಗೂ ರಾಯಚೂರು ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ ಘಟಕ ಪ್ರತಿಬಿಂಬಿಸುವ ಸ್ತಬ್ಧಚಿತ್ರ ನಿರ್ಮಿಸಿದ ಅನುಭವವನ್ನು ಶಿವಕುಮಾರಸ್ವಾಮಿ ಹೊಂದಿದ್ದಾರೆ.

ಮೈಸೂರಲ್ಲಿ ಸೆ.22ರಿಂದ ಜಿಲ್ಲೆಯ “ಆಯುಷ್ಮಾನ್‌ ಭಾರತ’ ಪರಿಕಲ್ಪನೆಯ ಸ್ತಬ್ಧಚಿತ್ರ ನಿರ್ಮಾಣ ಆರಂಭಿಸಲಾಗುವುದು. ಸ್ತಬ್ಧಚಿತ್ರದಲ್ಲಿ ಇಎಸ್‌ ಐಸಿ ಮತ್ತು ಜಿಮ್ಸ್‌ ಆಸ್ಪತ್ರೆಗಳ ಮಾದರಿ ಹಾಗೂ ರೋಗಿಗಳ ಆರೈಕೆ, ತಪಾಸಣೆಯಲ್ಲಿ ತೊಡಗಿರುವ ವೈದ್ಯರ ಕಲಾಕೃತಿಗಳು ಇರುತ್ತವೆ. ಅಕ್ಟೋಬರ್‌ 6ರೊಳಗೆ ಸ್ತಬ್ದಚಿತ್ರ ಸಿದ್ಧಪಡಿಸಲು ಸಮಯಾವಕಾಶ ನೀಡಲಾಗಿದೆ ಎಂದು ಕಲಾವಿದ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.

ಅ.8ರಂದು ಮೈಸೂರು ದಸರಾದ ಅದ್ಧೂರಿ ಮೆರವಣಿಗೆ ನಡೆಯಲಿದ್ದು, ಅಂದು ನಾಡಿದ ಜನತೆ ಜಿಲ್ಲೆಯ “ಆಯುಷ್ಮಾನ್‌ ಭಾರತ’ ಯೋಜನೆ ಮತ್ತು ಬೃಹತ್‌ ಆಸ್ಪತ್ರೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ಕಣ್ತುಂಬಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next