ಕಡೂರು: ಲಾಕ್‌ಡೌನ್‌ನಿಂದ ಸಡಿಲಿಕೆ ದೊರೆತಿದ್ದೇ ತಡ ಸೋಮವಾರ ಪಟ್ಟಣವು ಜನ ಮತ್ತು ವಾಹನ ಸಂದಣಿಯಿಂದ ತುಂಬಿ ತುಳುಕುತ್ತಿತ್ತು. ಚಿಕ್ಕಮಗಳೂರು ಜಿಲ್ಲೆ ಗ್ರೀನ್ ವಲಯದಲ್ಲಿ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಸಡಿಲಿಕೆ ಘೋಷಿಸಿದ್ದರ ಪರಿಣಾಮ ರೈಲ್ವೆ, ಸಿನಿಮಾ, ಶಾಲಾ ಕಾಲೇಜು ಹೊರತು ಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಹಿಂದಿನಂತೆ ಕಾರ್ಯಾರಂಭ ಮಾಡಿದವು.
ಕಳೆದ 45 ದಿನಗಳಿಂದ ಬಾಗಿಲು ಹಾಕಿದ್ದ ಅಂಗಡಿ, ಹೊಟೇಲ್ ಮಾಲೀಕರು ಬೆಳಗ್ಗೆ ಪೂಜೆ ಸಲ್ಲಿಸಿ ಶುಭಾರಂಭ ಮಾಡಿದರು. ಹೊಟೇಲ್‌ಗಳು ಬಹುತೇಕ ತೆರೆದಿದ್ದು ಪಾರ್ಸಲ್‌ಗೆ ಮಾತ್ರ ಸೀಮಿತವಾಗಿವೆ. ಬೇಕರಿ, ಕಬ್ಬಿಣ, ಸಿಮೆಂಟ್, ಹಾರ್ಡ್ ವೇರ್, ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್, ಹಣ್ಣು, ವೈನ್ ಶಾಪ್‌ಗ್ಳು ತೆರೆದು ವ್ಯಾಪಾರ ನಡೆಸುತ್ತಿದ್ದವು.
ಅಂಗಡಿ ಮುಂಗಟ್ಟುಗಳ ಮುಂದೆ ಖರೀದಿಗೆ ಸೇರುವ ಜನರು ಅಂತರ ಕಾಪಾಡುತ್ತಿಲ್ಲ. ಯುವಕರು ಮಾಸ್ಕ್ ಧರಿಸದೇ ಓಡಾಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿವೆ. ಕಡೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಆರಂಭವಾಗಿದ್ದು. ಕಡೂರು- ಚಿಕ್ಕಮಗಳೂರು, ತರೀಕೆರೆ ಪಟ್ಟಣಗಳಿಗೆ ಬಸ್ ಸಂಚಾರ ಆರಂಭವಾಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಅವರು ತೆರಳುವ ಊರು ಯಾವುದೆಂದು ತಿಳಿದು ವ್ಯವಸ್ಥೆ ಮಾಡಿ ಒಂದು ಬಸ್‌ನಲ್ಲಿ 27 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದ್ದೇವೆ. ಚಿಕ್ಕಮಗಳೂರು ಮತ್ತು ತರೀಕೆರೆಗೆ ಈಗಾಗಲೇ 22 ಟ್ರಿಪ್ ಕಳುಹಿಸಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರು ಅಂತರ ಕಾಪಾಡಿಕೊಂಡು ಇರಲು ಸೂಚಿಸಿದ್ದು ಮಾಸ್ಕ್ ಧರಿಸಿದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ನಿಲ್ದಾಣಕ್ಕೆ ಬಂದಾಕ್ಷಣ ಅವರನ್ನು ಸಾರಿಗೆ ನೌಕರರೇ ಟೆಂಪರೇಚರ್ ಖಚಿತಪಡಿಸಿಕೊಂಡು ನಂತರ ಅವರ ಊರುಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ ಓರ್ವರಿಗೆ ಟೆಂಪರೇಚರ್ ಹೆಚ್ಚಾಗಿದ್ದರಿಂದ ಕಡೂರು ಆಸ್ಪತ್ರೆಗೆ ಕಳುಹಿಸಿದ್ದೇವೆ ಎಂಬ ಮಾಹಿತಿಯನ್ನು ಡಿಪೋ ವ್ಯವಸ್ಥಾಪಕ ಚನ್ನಬಸವೇಗೌಡರು ತಿಳಿಸಿದರು.
ಚಿಕ್ಕಮಗಳೂರು ಡಿಪೋದಲ್ಲಿ ಕೆಲಸ ಮಾಡುತ್ತಿದ್ದೇನೆ. 42 ದಿನಗಳಿಂದ ಕೆಲಸವಿರಲಿಲ್ಲ. ಇವತ್ತಿನಿಂದ ಪ್ರಾರಂಭವಾಗಿದೆ. ಮನೆಯಲ್ಲಿರಲು ಹಿಂಸೆಯಾಗುತ್ತಿತ್ತು. ನಿಲ್ದಾಣದಲ್ಲಿ ಸ್ಯಾನಿಟೈಸರ್‌ನಿಂದ ಕೈ ಶುದ್ಧೀಕರಿಸಿದ ನಂತರ ಬಸ್ ಹತ್ತಲು ಅವಕಾಶ ನೀಡುತ್ತೇವೆ. ಮಾಸ್ಕ್ ಧರಿಸಿಲ್ಲ ಎಂದರೆ ಪ್ರಯಾಣಿಕರನ್ನು ಕರೆದೊಯ್ಯುವುದಿಲ್ಲ.?
– ಸುಗಮೇಶ್ ಬಿ.ಎಸ್., ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ