ಕದ್ರಿ: ಕದ್ರಿಯ ಜಿಂಕೆ ಪಾರ್ಕ್ ಎಂದೇ ಖ್ಯಾತಿಯಾಗಿದ್ದ ಹಳೆ ಮೃಗಾಲಯದಲ್ಲಿ ಇನ್ನು ಮುಂದೆ ಸಂಗೀತ ಕಾರಂಜಿಯ ಝಗಮಗಿಸುವಿಕೆ ಶುರುವಾಗಲಿದೆ. ಬಹುತೇಕ ಎಪ್ರಿಲ್ ಅಂತ್ಯಕ್ಕೆ ಸಂಗೀತ ಕಾರಂಜಿಯು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.
ಸಂಗೀತ ಕಾರಂಜಿಯಲ್ಲಿ ನೀರಿನ ನರ್ತನದ ಜತೆಗೆ ಲೇಸರ್ ಪ್ರದರ್ಶನದ ಮೂಲಕ ಜಿಲ್ಲೆಯ ಇತಿಹಾಸವನ್ನು ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ. ಅದರ ಪ್ರಯೋಗವನ್ನು ಸೋಮವಾರ ಶಾಸಕ ಜೆ. ಆರ್. ಲೋಬೋ ಅವರೊಂದಿಗೆ ಮೇಯರ್ ಕವಿತಾ ಸನಿಲ್, ಮುಡಾ ಆಯುಕ್ತ ಶ್ರೀಕಾಂತ್ ರಾವ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಯೋಗೀಶ್ ಮತ್ತಿತರರ ಸಮ್ಮುಖದಲ್ಲಿ ನಡೆಸಲಾಯಿತು.
ಸುಮಾರು 30 ನಿಮಿಷಗಳ ಪ್ರಾಯೋಗಿಕ ಪ್ರದರ್ಶನಕ್ಕೆ ಮುನ್ನ ಜಿಲ್ಲಾಧಿಕಾರಿ ಡಾ| ಕೆ. ಜಿ. ಜಗದೀಶ್ ಅಧ್ಯಕ್ಷತೆಯಲ್ಲಿ ಸಂಗೀತ ಕಾರಂಜಿಯ ನಿರ್ವಹಣೆ ಕುರಿತಂತೆ ಪರಿಶೀಲನೆ ಸಭೆ ನಡೆಯಿತು.
ಶಾಸಕ ಜೆ.ಆರ್. ಲೋಬೋ ಅವರ ಮುತುವರ್ಜಿಯಲ್ಲಿ ಎರಡು ವರ್ಷಗಳ ಹಿಂದೆ ಸಂಗೀತ ಕಾರಂಜಿ ನಿರ್ಮಾಣದ ರೂಪುರೇಷೆ ಸಿದ್ಧಗೊಂಡಿತ್ತು. ಈಗ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಹಳೆ ಜಿಂಕೆ ಪಾರ್ಕನ್ನು ಅಭಿವೃದ್ಧಿಪಡಿಸಿ ಅಲ್ಲಿ ಸಂಗೀತ ಕಾರಂಜಿ, ಲೇಸರ್ ಪ್ರದರ್ಶನದ ವ್ಯವಸ್ಥೆಯನ್ನು ಮಾಡಲಾಗಿದೆ.
ಯಕ್ಷಗಾನ, ಭೂತಾರಾಧನೆ ಹಾಗೂ ಜಿಲ್ಲೆಯ ಇತರ ಸಂಸ್ಕೃತಿಗೆ ಪೂರಕವಾದ ಅಂಶಗಳನ್ನು ಈ ಸಂಗೀತ ಕಾರಂಜಿ ಪಾರ್ಕ್ ಪ್ರತಿಬಿಂಬಿಸಲಿದೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಂಗೀತ ಪಾರ್ಕ್ ಇರುವಂತೆಯೇ, ಮಂಗಳೂರಿನ ಈ ಪಾರ್ಕ್‌ಗೆ ರಾಜೀವ ಗಾಂಧಿ ಸಂಗೀತ ಪಾರ್ಕ್ ಹೆಸರನ್ನು ಅಂತಿಮಗೊಳಿಸಲಾಗಿದೆ.