ಮಹಾನಗರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಮಹಾನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ಉದ್ಯೋಗ ಮೇಳ ಕದ್ರಿಹಿಲ್ಸ್‌ನ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆಯಿತು. 20ಕ್ಕೂ ಅಧಿಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 170ಕ್ಕೂ ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಯುವ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಉದ್ಯೋಗ ಮೇಳವನ್ನು ಆಯೋಜಿಸುವ ಮೂಲಕ ಸರಕಾರ ಯುವ ಜನತೆಗೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಕೌಶಲ ತರಬೇತಿ ನೀಡುವ ಮೂಲಕ ಉದ್ಯೋಗ ಕಲ್ಪಿಸಿಕೊಡುವ ಅಮೂಲ್ಯ ಪ್ರಕ್ರಿಯೆಗೆ ಅಧಿಕಾರಿಗಳು ಇನ್ನಷ್ಟು ಒತ್ತು ನೀಡಬೇಕು. ಈ ಮೂಲಕ ಯುವ ಜನರ ಭವಿಷ್ಯಕ್ಕೆ ಹೊಸ ದಾರಿ ತೋರಬೇಕು ಎಂದರು.
ಬದುಕು ದೊರೆಯುವಂತಾಗಲಿ ಮೇಯರ್ ಭಾಸ್ಕರ್ ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ಮಹಾನಗರ ಪಾಲಿಯಲ್ಲಿ ಅನುಷ್ಠಾನಗೊಳಿಸಿರುವ ಉದ್ಯೋಗ ಮೇಳದ ಮೂಲಕ ನೂರಾರು ಕುಟುಂಬಗಳಿಗೆ ಬದುಕು ದೊರೆಯುವಂತಾಗಲಿ ಎಂದರು. ಮನಪಾ ಉಪ ಆಯುಕ್ತೆ (ಕಂದಾಯ ಮತ್ತು ಆಡಳಿತ)ಗಾಯತ್ರಿ ನಾಯಕ್, ಸರಕಾರಿ ಕೈಗಾರಿಕಾ ಸಂಸ್ಥೆಯ ಉಪ ನಿರ್ದೇಶಕ ಗಿರಿಧರ ಸಾಲ್ಯಾನ್, ಜಿಲ್ಲಾ ಕೌಶಲ್ಯಾಧಿಕಾರಿ ತಾರಾನಾಥ, ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ ಮೂಡುಬಗೆ, ಅಭಿಯಾನ ವ್ಯವಸ್ಥಾಪಕ ಚಿತ್ತರಂಜನ್‌ದಾಸ್, ಸಮುದಾಯ ಸಂಘಟನಾಧಿಕಾರಿ ಮಾಲಿನಿ ರೋಡ್ರಿಗಸ್ ಉಪಸ್ಥಿತರಿದ್ದರು.
20 ಕಂಪೆನಿಗಳು
ಉದ್ಯೋಗ ಮೇಳದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಎಸೆಸೆಲ್ಸಿ , ಪಿಯುಸಿ, ಐ.ಟಿ.ಐ., ಪದವಿ, ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಸುಮಾರು 170ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಪಾಲಿಕೆ ವ್ಯಾಪ್ತಿಯ ಒಳಗಡೆ ಉದ್ಯೋಗ ಆಕಾಂಕ್ಷಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.