ಮಂಗಳೂರು: ಡಾ| ಕದ್ರಿ ಗೋಪಾಲನಾಥ್ ಅಕಾಡೆಮಿ ಫಾರ್ ಆರ್ಟ್ಸ್ ಸಂಸ್ಥೆ ವತಿಯಿಂದ ದಿ| ಡಾ| ಕದ್ರಿ ಗೋಪಾಲನಾಥ್ ಅವರ 75ನೇ ಜನ್ಮ ಜಯಂತಿ ಪ್ರಯುಕ್ತ ಡಿ. 7ರಂದು ಬೆಳಗ್ಗೆ 10ರಿಂದ ಕದ್ರಿ ಸಂಗೀತ ಸೌರಭ ಮತ್ತು ಡಾ| ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಶ್ರೇಷ್ಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉರ್ವಸ್ಟೋರ್‌ನ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕದ್ರಿಯವರ ಪುತ್ರ ಮಣಿಕಾಂತ್ ಕದ್ರಿ ಮಾತನಾಡಿ, ಬೆಳಗ್ಗೆ 10ರಿಂದ ಗುರುವಂದನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಆ ಬಳಿಕ ಮಹಾಲಿಂಗಪ್ಪ ತಂಡದಿಂದ ದಾಸ ಹಾಗೂ ವಚನ ಸಾಹಿತ್ಯ, ಅನೀಶ್ ವಿ. ಭಟ್ ಹಾಗೂ ತಂಡದಿಂದ ಶಾಸ್ತ್ರೀಯ ಸಂಗೀತ, ಪ್ರಶಾಂತ್ ರಾಧಾಕೃಷ್ಣನ್‌ಅವರಿಂದ ಸ್ಯಾಕ್ಸೊಫೋನ್, ಮಹಾಲಕ್ಷ್ಮೀ ಶೆಣೈ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಆಯೋಜಿಸಲಾಗಿದೆ.
ಪ್ರಶಸ್ತಿ ಪ್ರದಾನ: ಸಂಜೆ 6ಕ್ಕೆ ಮೋಹನ ವೀಣಾ ಸೃಷ್ಟಿಕರ್ತ ಹಾಗೂ ವಾದಕ, ಪದ್ಮಭೂಷಣ ಪುರಸ್ಕೃತ ಪಂಡಿತ್ ವಿಶ್ವ ಮೋಹನ್ ಭಟ್ ಅವರಿಗೆ ಡಾ| ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆ ಶ್ರೇಷ್ಠ ಪ್ರಶಸ್ತಿ ಪ್ರದಾನ ನಡೆಯಲಿದೆ.
ಬಳಿಕ ಪಂಡಿತ್ ವಿಶ್ವಮೋಹನ್ ಭಟ್ ಹಾಗೂ ಸಲೀಲ್ ಭಟ್ ಅವರಿಂದ ಮೋಹನ ವೀಣಾ-ಸಾತ್ವಿಕ ವೀಣಾ ಜುಗಲ್ ಬಂದಿ ನಡೆಯಲಿದೆ. ಪಂಡಿತ್ ಹಿಮಾಂಶು ಮಹಾಂತ್ ತಬಲಾದಲ್ಲಿ ಸಾಥ್ ನೀಡಲಿದ್ದಾರೆ ಎಂದರು.