Advertisement

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

11:24 PM Nov 28, 2024 | Team Udayavani |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ 55 ನೇ ಆವೃತ್ತಿ ಸಮಾರೋಪಗೊಂಡಿದೆ.
ಸಮಾರೋಪ ಸಮಾರಂಭವೆಂದರೆ ಪ್ರಶಸ್ತಿ ಪ್ರದಾನ ಸಮಾರಂಭ. ಅಲ್ಲಿ ಮಾತಿಗಿಂತ ಪ್ರಶಸ್ತಿ ಗಳಿಸಿದವರ ಬಗ್ಗೆಯೆ ಕುತೂಹಲ. ಅದರಲ್ಲೂ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗಕ್ಕೆ ನೀಡಲಾಗುವ ಸುವರ್ಣ ನವಿಲು ಪುರಸ್ಕಾರ. ಚೊಚ್ಚಲ ನಿರ್ದೇಶನಕ್ಕೆ ನಿರ್ದೇಶಕರಿಗೆ ಹಾಗೂ ಅತ್ಯುತ್ತಮ ನಿರ್ದೇಶಕರಿಗೆ ನೀಡಲಾಗುವ ಪುರಸ್ಕಾರ. ಇದರೊಂದಿಗೆ ಅತ್ಯುತ್ತಮ ನಟ, ನಟಿ ಮತ್ತಿತರ ಪುರಸ್ಕಾರವೂ ಒಳಗೊಂಡಿದೆ.

Advertisement

ಇದೇ ಸಂದರ್ಭದಲ್ಲಿ ಜೀವಿತಾವಧಿ ಸಾಧನೆಗಾಗಿ ನೀಡುವ ಸತ್ಯಜಿತ್‌ ರೇ ಪುರಸ್ಕಾರವನ್ನು ಆಸ್ಟ್ರೇಲಿಯಾದ ಸಿನಿಮಾ ನಿರ್ದೇಶಕ ಫಿಲಿಪ್‌ ನೊಯೆ ಅವರಿಗೆ ನೀಡಿ ಗೌರವಿಸಲಾಯಿತು.

2024 ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿಯು ಸೌಲೆ ಬ್ಲಿವೆಟೆ ನಿರ್ದೇಶಿಸಿದ ಲಿಥುನಿಯನ್‌ ಭಾಷೆಯ ಟಾಕ್ಸಿಕ್‌ ಪಡೆದುಕೊಂಡಿದೆ. ಗೇದ್ರೆ ಬುರೊಕಟಿ ನಿರ್ಮಿಸಿದ್ದರು.

ವಿಕ್ರಾಂತ್‌ ಮಸ್ಸೆ

Advertisement

ರೊಮೇನಿಯನ್‌ ಭಾಷೆಯ ದಿ ನ್ಯೂ ಇಯರ್‌ ದಟ್‌ ನೆವರ್‌ ಕೇಮ್‌ ಚಲನಚಿತ್ರವನ್ನು ನಿರ್ದೇಶಿಸಿದ ಬೊಗ್ಧಾನ್‌ ಮುರೆಸುನೊ ಅವರಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ದೊರೆತಿದ್ದರೆ, ಇಂಡಿಯನ್‌ ಸಿನಿಮಾ ಫ‌ರ್ಸನಾಲಿಟಿ ಫಾರ್‌ ದಿ ಇಯರ್‌ ಪ್ರಶಸ್ತಿ ದಿ ಸಬರಿಮತಿ ರಿಪೋರ್ಟ್‌ ಚಿತ್ರದ ವಿಕ್ರಾಂತ್‌ ಮಸ್ಸೆ ಅವರ ಮುಡಿಗೇರಿದೆ.

ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಚೊಚ್ಚಲ ನಿರ್ದೇಶನಕ್ಕೆ ಪ್ರಶಸ್ತಿ ಪಡೆದಿರುವವರು ಅಮೆರಿಕದ ಚಿತ್ರ ಫೆಮಿಲಿಯರ್‌ ಟಚ್‌ ನ ನಿರ್ದೇಶಕಿ ಸಾರಾ ಪ್ರೀದ್‌ಲ್ಯಾಂಡ್‌. ಇದೇ ವಿಭಾಗದಲ್ಲಿ ಭಾರತೀಯ ನಿರ್ದೇಶಕರಿಗೆ ಆರಂಭಿಸಲಾದ ನೂತನ ಪ್ರಶಸ್ತಿಗೆ ಮರಾಠಿ ಚಿತ್ರ ಘರಾತ್‌ ಗಣಪತಿಯ ನಿರ್ದೇಶಕ ನವ್‌ಜೋತ್‌ ಬಂದಿವಾಡೇಕರ್‌ ಆಯ್ಕೆಯಾಗಿದ್ದಾರೆ.

ವಿಶೇಷ ತೀರ್ಪುಗಾರರ ಪ್ರಶಸ್ತಿ ಗಳಿಸಿದ ಚಿತ್ರ- ಹೋಲಿ ಕೌ (ಫ್ರೆಂಚ್‌), ಅತ್ಯುತ್ತಮ ನಟ – ಕ್ಲೆಮೆಂಟ್‌ ಫೆವು (ಹೋಲಿ ಕೌ), ಅತ್ಯುತ್ತಮ ನಟಿ – ವೆಸ್ತ ಮತುಲಟೆ ಮತ್ತು ಲೆವ ರುಪೆಕಟೆ,

ಅತ್ಯುತ್ತಮ ನಟನೆಗೆ ಅದಮ್‌ ಬೆಸ್ಸ (ವು ಡು ಐ ಬಿಲಾಂಗ್‌ ಟು) ವಿಶೇಷ ಪುರಸ್ಕಾರ ಪಡೆದರೆ, ಐಸಿಎಫ್ ಟಿ- ಯುನೆಸ್ಕೊ ಗಾಂಧಿ ಪುರಸ್ಕಾರ ಲೆವಿನ್‌ ಅಕಿನ್‌ ನಿರ್ದೇಶನದ ಸ್ವೀಡಿಷ್‌ ಭಾಷೆಯ ಕ್ರಾಸಿಂಗ್‌ ಚಿತ್ರ ಪಡೆದಿದೆ. ಒಟಿಟಿಯ ಅತ್ಯುತ್ತಮ ವೆಬ್‌ ಸೀರಿಸ್‌ ಗೆ ನೀಡುವ ಪ್ರಶಸ್ತಿಯನ್ನು ನಿಪುಣ್‌ ಅವಿನಾಶ್‌ ಧರ್ಮಾಧಿಕಾರಿ ನಿರ್ದೇಶನದ ಮರಾಠಿ ಭಾಷೆಯ ಲಂಪನ್‌ ಪಾಲಾಗಿದೆ.

ಒಂಬತ್ತು ದಿನಗಳ ಉತ್ಸವದಲ್ಲಿ ಭಾರತೀಯ ಪನೋರಮಾ, ಕಂಟ್ರಿ ಫೋಕಸ್‌, ಸಿನಿಮಾ ಅಫ್ ದಿ ವರ್ಲ್ಡ್, ವಿವಿಧ ಫೆಸ್ಟಿವಲ್‌ ಗಳ ಸಿನಿಮಾ ಸೇರಿದಂತೆ ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ನೆನಪಾದ ಶೋಲೆ
ಶೋಲೆ ಚಿತ್ರದ ನಿರ್ದೇಶಕ ರಮೇಶ್‌ ಸಿಪ್ಪಿ ವೇದಿಕೆಯಲ್ಲಿ ಪ್ರಸಿದ್ಧ ಚಿತ್ರ ಶೋಲೆ ಬಗೆಗಿನ ಸಿನಿಪ್ರಿಯರ ಪ್ರೀತಿಯನ್ನು ಹಂಚಿಕೊಂಡರು. ಒಳ್ಳೆಯ ನಟರು, ಸ್ಕ್ರಿಪ್ಟ್ ಎಲ್ಲವೂ ಇತ್ತು. ಒಂದು ಒಳ್ಳೆಯ ಸಿನಿಮಾ ಮಾಡಬೇಕೆನಿಸಿ ಮಾಡಿದೆವು. ಆದರೆ ಐವತ್ತು ವರ್ಷಗಳ ಬಳಿಕವೂ ಆ ಸಿನಿಮಾವನ್ನು ಸಿನಿ ಪ್ರಿಯರು ಪ್ರೀತಿಸುತ್ತಾರೆಂದು ಖಂಡಿತಾ ನಿರೀಕ್ಷಿಸಿರಲಲ್ಲ. ಇದು ನಿಜಕ್ಕೂ ಅಚ್ಚರಿ. ಪ್ರಪಂಚದ ಎಲ್ಲ ಭಾಗದ ಸಿನಿಮಾ ಪ್ರಿಯರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಅದೇ ದೊಡ್ಡದು’ ಎಂದರು.

ಪುಷ್ಪಾ ಸಿನಿಮಾ ನನಗೆ ಇಷ್ಟವಾದ ಸಿನಿಮಾ. ಕೆಲವೇ ದಿನಗಳಲ್ಲಿ ಪುಷ್ಪಾ 2 ಸಹ ಬಿಡುಗಡೆಗೊಳ್ಳುತ್ತಿದೆ. ಪುಷ್ಪಾದ ಪ್ರಯಾಣವೇ ಬಹಳ ಸೊಗಸಿನದ್ದು ಎಂದು ಹೇಳಿದ ನಟಿ ರಶ್ಮಿಕಾ ಮಂದಣ್ಣ, ಪುಷ್ಪಾ 2ಕ್ಕೂ ಸಿನಿ ಪ್ರೇಕ್ಷಕರ ಪ್ರೀತಿ ಇರಲಿ ಎಂದು ಕೋರಿದರು.

ಪುಷ್ಪಾ 2 ರ ಟ್ರೇಲರ್‌ ಪ್ರದರ್ಶಿಸಲಾಯಿತು. ನಟಿ ಶ್ರೀಯ ಶರಣ್‌ ಅವರ ನೃತ್ಯ ಪ್ರದರ್ಶನವಿತ್ತು. ಹಿರಿಯ ನಟಿ ಜಯಪ್ರದಾ, ನಟಿ ರಶ್ಮಿಕಾ ಮಂದಣ್ಣ, ನಟ ಪ್ರತೀಕ್‌ ಗಾಂಧಿ, ನಟಿ ಶ್ರೇಯಾ ಚೌಧರಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next