ಪಣಜಿ: ಡೀಸೆಲ್ ಖಾಲಿಯಾಗಿ ಬಸ್ ನಿಂತ ಘಟನೆ ಮಾಸುವ ಮುನ್ನವೇ ಗೋವಾ ಕದಂಬ ಮಹಾಮಂಡಳದ ಮತ್ತೊಂದು ಬೇಜವಾಬ್ದಾರಿ ಬೆಳಕಿಗೆ ಬಂದಿದೆ.
ಕರ್ನಾಟಕದ ಬಾದಾಮಿಯಿಂದ ಶನಿವಾರ ರಾತ್ರಿ ಗೋವಾಕ್ಕೆ ಆಗಮಿಸುತ್ತಿದ್ದ ಕದಂಬ ಬಸ್ ನ ಹಿಂಬದಿಯ ಟಯರ್ ಗಳು ಇದ್ದಕ್ಕಿದ್ದಂತೆಯೇ ಕಳಚಿದ ಘಟೆನೆ ನಡೆದಿದೆ. ಅದೃಷ್ಠವಶಾತ್ ಬಸ್ ಕಡಿಮೆ ವೇಗದಲ್ಲಿ ಚಲಿಸುತ್ತಿದ್ದುದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ನಡುವೆ ಕದಂಬ ಸಾರಿಗೆಯ ಉತ್ತಮ ಗುಣಮಟ್ಟದ ಬಸ್‍ಗಳನ್ನು ಗೋವಾದಿಂದ ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕ ಭಾಗಕ್ಕೆ ಕಳುಹಿಸಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿದೆ. ಮುಂಬಯಿ, ಪುಣೆ, ಶಿರಡಿ, ಬೆಂಗಳೂರು, ಮೈಸೂರು, ಮುಂತಾದ ಮಾರ್ಗಗಳಲ್ಲಿ ಕದಂಬ ಸಾರಿಗೆಯು ಹವಾನಿಯಂತ್ರಿತ ಬಸ್‍ಗಳ ಸೇವೆಯನ್ನು ಒದಗಿಸುತ್ತದೆ. ಆದರೆ ಬಸ್ ದುರಸ್ತಿ ಅಥವಾ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದ ಕಾರಣ ಇಂತಹ ಘಟನೆಗಳು ಮರುಕಳಿಸುವಂತಾಗಿದೆ.
ಪೊಂಡಾ ಸಮೀಪದ ಆರ್ಲ-ಕೇರಿ ಸಾವಯಿವೇರೆ ಮಾರ್ಗದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಕದಂಬ ಬಸ್ ಮಾರ್ಗ ಮಧ್ಯದಲ್ಲಿ ಡೀಸೆಲ್ ಖಾಲಿ ಆಗಿ ನಿಂತಿತ್ತು. ಈ ಘಟನೆಯನ್ನು ಕದಂಬ ಮಹಾಮಂಡಳದ ಅಧ್ಯಕ್ಷ ಉಲ್ಲಾಸ್ ನಾಯ್ಕ್ ರವರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈ ಘಟನೆಗೆ ಕಾರಣ ತಿಳಿಸುವಂತೆ ಕದಂಬ ಬಸ್ ಚಾಲಕರಿಗೆ ನೋಟಿಸ್ ಕೂಡ ಜಾರಿಗೊಳಿಸಲಾಗಿತ್ತು. ಡೀಸೆಲ್ ತುಂಬಿಸಿಕೊಳ್ಳದೆಯೇ ಹಾಗೆಯೇ ಹೋದ ಚಾಲಕನ ವಿರುದ್ಧ ಕದಂಬ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ. ಈ ಬೇಜವಾಬ್ದಾರಿ ಘಟನೆ ತಾಜಾ ಇರುವಾಗಲೇ ಕದಂಬ ಬಸ್ ಹಿಂಬದಿ ಟಾಯರ್ ಗಳು ಕಳಚಿದ ಘಟನೆ ನಡೆದಿದೆ.