ಮಲ್ಪೆ, ನ. 14: ಚಂಡಮಾರುತ, ಸುನಾಮಿಯಂತಹ ಪ್ರಾಕೃತಿಕ ವಿಪತ್ತು ಗಳು ಸಂಭವಿಸಿದಾಗ ಸಮುದ್ರದಲ್ಲಿ ಎಷ್ಟು ಮೀನುಗಾರಿಕೆ ದೋಣಿಗಳಿವೆ, ಎಷ್ಟು ಮೀನುಗಾರರಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಲು ಈ ನಿಖರ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಒಂದನ್ನು ಮೀನುಗಾರಿಕೆ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸ್ ಇಲಾಖೆ ಅಭಿವೃದ್ಧಿಪಡಿಸಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಕಲ್ಯಾಣಪುರ ಮೂಡು ಕುದ್ರು ಬಳಿ ನಡೆದ ಪಂಜರ ಮೀನು ಕೃಷಿ ಕಾರ್ಯಾಗಾರದಲ್ಲಿ ಕಡಲು ಆ್ಯಪ್‌ಅನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮೀನುಗಾರಿಕೆ ದೋಣಿಗಳ ಚಲನ ವಲನಗಳ ಮೇಲೆ ನಿಗಾ ಇಡುವುದು, ಮೀನುಗಾರರು ಸಮಸ್ಯೆಗೆ ಸಿಲುಕಿದಾಗ ನೆರವಿಗೆ ಧಾವಿಸುವುದು, ಕರಾವಳಿ ಭದ್ರತೆ ಆ್ಯಪ್ ರಚನೆಯ ಹಿಂದಿರುವ ಮುಖ್ಯ ಉದ್ದೇಶ. ಇದನ್ನು ಮೀನುಗಾರರು ಬಳಸಿಕೊಳ್ಳಬೇಕು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಚೇತನ್ ಆರ್. ಅವರು ಮಾತನಾಡಿ, ಕರಾವಳಿ ಕಾವಲು ಪೊಲೀಸರಿಗೆ ತಪಾಸಣೆಯ ವೇಳೆ ಈ ಆ್ಯಪ್‌ನಲ್ಲಿ ದಾಖಲಿಸಿರುವ ಮಾಹಿತಿ ಪರಿಶೀಲನೆಗೆ ಸಹಾಯಕವಾಗಲಿದೆ. ದೋಣಿಯ ಸಂಖ್ಯೆ ನಮೂದಿಸಿದರೆ, ದೋಣಿ ಮತ್ತು ಅದರಲ್ಲಿರುವ ಸಂಪೂರ್ಣ ಮಾಹಿತಿ ಸಿಗುತ್ತದೆ. ತುರ್ತು ಸಂದರ್ಭದಲ್ಲಿ ಇದು ಅತ್ಯಂತ ಪ್ರಯೋಜನಕಾರಿ ಎಂದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಉಪ ನಿರ್ದೇಶಕ ಗಣೇಶ್ ಕೆ., ಪಾರ್ಶ್ವನಾಥ್, ಮೀನು ಮಾರಾಟ ಫೆಡರೇಶನ್ನಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಮಣಿಪಾಲ ಡೈರೆಕ್ಟರ್ ಐಸಿಟಿ, ಎಂಐಟಿ ವಿಭಾಗದ ಮುಖ್ಯಸ್ಥ ಪ್ರೊ| ಮನೋಹರ್ ಪೈ ಎಂ.ಎಂ., ಕಲ್ಯಾಣಪುರ ಗ್ರಾಮ ಪಂಚಾಯತ್ ಪಿಡಿಒ ಯೋಗಿತಾ ಬಿ., ನಗರಸಭಾ ಕೊಡವೂರು ವಾರ್ಡ್ ಸದಸ್ಯ ವಿಜಯ ಕೊಡವೂರು, ಪ್ರಮುಖರಾದ ವಿಶು ಕುಮಾರ್ ಕಲ್ಯಾಣಪುರ, ನಿತ್ಯಾನಂದ ಕರ್ಕೇರ ಉಪಸ್ಥಿತರಿದ್ದರು.
ಮೀನು ಲಭ್ಯತೆಯ ಸ್ಥಳದ ಮಾಹಿತಿ : ಮುಂದಿನ ಹಂತದಲ್ಲಿ ಆ್ಯಪ್‌ನ ಮೂಲಕ ಸಮುದ್ರದಲ್ಲಿ ಯಾವ ಸ್ಥಳದಲ್ಲಿ ಹೆಚ್ಚು ಮೀನು ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ಒದಗಿಸುವುದಕ್ಕೆ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಅದೇ ರೀತಿ ಸಮುದ್ರದ ಸ್ಥಿತಿ ಹೇಗಿದೆ? ಎಂಬ ಕುರಿತು ಕೂಡ ಮಾಹಿತಿ ನೀಡಲು ಉಭಯ ಇಲಾಖೆಗಳು ಪ್ರಯತ್ನಿಸಲಿವೆ. ಇದಕ್ಕೆ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್(ಸಿಎಂಎಫ್‌ಆರ್‌ಐ) ಸಹಕಾರ ನೀಡಲಿದೆ. ಈ ಕಡಲು ಆ್ಯಪ್ ಮೊಬೈಲ್ ನೆಟ್‌ವರ್ಕ್ ಮೂಲಕ ಕಾರ್ಯಾಚರಿಸಲಿದೆ. ಸಾಮಾನ್ಯವಾಗಿ ಸಮುದ್ರದಲ್ಲಿ 10ರಿಂದ 12 ಕಿ.ಮೀ. ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಲಭಿಸುತ್ತದೆ ಎನ್ನಲಾಗಿದೆ.