Advertisement
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಹಬ್ಬ, ಜಾತ್ರೆ ವಾತವರಣ ಮಾಯವಾಗುತ್ತಿದೆ. ಹೀಗಾಗಿ, ಪರಿಷೆಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಯುವ ಪೀಳಿಗೆಗೆ ಪರಿಚಯಿಸಲಾಗುತ್ತಿದೆ. ಜತೆಗೆ ಕಡಲೆಕಾಯಿ ಪರಿಷೆಯಿಂದ ಕಡಲೆಕಾಯಿ ಬೆಳೆಗಾರರಿಗೂ ಅನುಕೂಲವಾಗಲಿದೆ ಎಂದರು.
Related Articles
Advertisement
ಒಂದು ಸೇರು ಕಡಲೆಕಾಯಿಗೆ 30ರಿಂದ 40 ರೂ, ಕೆ.ಜಿ 56ರಿಂದ 60 ರೂ. ಬೆಲೆಯಿದೆ. ಜತೆಗೆ ಬೇಯಿಸಿದ, ಹುರಿದ, ಹಸಿ, ಒಣಗಿಸಿದ ಕಡಲೆಕಾಯಿಗಳು ಪರಿಷೆಯಲ್ಲಿವೆ. ಇದರೊಂದಿಗೆ ಮಕ್ಕಳ ಆಟಿಕೆಗಳು, ತಿಂಡಿ-ತಿನಿಸು, ಕಬ್ಬು, ಹಣ್ಣುಗಳು, ಮಣ್ಣಿನ ಮತ್ತು ಪಿಒಪಿ ಬೊಂಬೆಗಳು, ಗೃಹೋಪಯೋಗಿ ಮತ್ತು ಹೆಣ್ಣುಮಕ್ಕಳ ಅಲಂಕಾರಿಕ ಆಭರಣಗಳ ಮಾರಾಟವೂ ನಡೆಯುತ್ತಿದೆ.
ಮೊದಲ ಬಾರಿ ಚಿತ್ರ ಪರಿಷೆ: ಈ ಬಾರಿ ವಿಶೇಷವಾಗಿ ಕಡಲೆಕಾಯಿ ಪರಿಷೆಯಲ್ಲಿ ಚಿತ್ರ ಪರಿಷೆ ಆಯೋಜಿಸಲಾಗಿದೆ. ಇಲ್ಲಿ ವಿವಿಧ ಕಲಾವಿದರ ಕೈಬರಹಗಳಿಂದ ಮೂಡಿರುವ ನೃತ್ಯಗಾರ್ತಿ, ರಾಧೆ, ವನ್ಯ ಹಾಗೂ ಸಾಕು ಪ್ರಾಣಿ, ನಿಸರ್ಗ, ದೇವರ ಚಿತ್ರಗಳ ಪ್ರದರ್ಶನದ ಜತೆಗೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ಪರಿಷೆಗೆ ಬಂದವರು ಕಡಲೆಕಾಯಿ ಸವಿಯುತ್ತಾ ಚಿತ್ರಪರಿಷೆಯಲ್ಲಿ ಸುತ್ತಾಡಿ ಕಲಾವಿದರ ಕಲೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ಮಾರಾಟವಲ್ಲದೆ, ಚಿತ್ರ ಕಲಾವಿದರಿಗೂ ಕೂಡ ವೇದಿಕೆ ಕಲ್ಪಿಸಲಾಗಿದೆ. ಇದರಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ….ಶಂಕರ್ ಅಭಿಪ್ರಾಯಪಟ್ಟರು.
ಪರಿಷೆಗೆ ಮಳೆ ಅಡ್ಡಿ: ನಗರದಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಕಾಡುಮಲ್ಲೇಶ್ವರದ ಕಡಲೆಕಾಯಿ ಪರಿಷೆಗೆ ಅಡ್ಡಿಯಾಗಿದೆ. ಶುಕ್ರವಾರ ಮುಂಜಾನೆಯಿಂದಲೂ ಪರಿಷೆಯಲ್ಲಿ ಪಾಲ್ಗೊಂಡಿದ್ದ ಕಡಲೆಕಾಯಿ ಮಾರಾಟಗಾರರು, ಸಾರ್ವಜನಿಕರು, ಭಕ್ತರಿಗೆ ಮಳೆಯಿಂದ ಸಾಕಷ್ಟು ತೊಂದರೆಯಾಯಿತು. ಮಳೆ ಹೀಗೇ ಮುಂದುವರಿದರೆ ಪರಿಷೆಗೆ ಆಗಮಿಸಿರುವ ಕಡಲೆಕಾಯಿ ವ್ಯಾಪಾರಿಗಳು ಹಾಗೂ ರೈತರ ವ್ಯಾಪಾರ ಕುಸಿಯುವ ಆತಂಕ ಮೂಡಿದೆ.