ಕಡಬ: ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬ ಪೇಟೆಯಲ್ಲಿ ಮೊದಲೇ ಸರಿಯಾದ ಪ್ರಯಾಣಿಕರ ತಂಗುದಾಣವಿಲ್ಲ. ಇರುವ ಒಂದು ತಂಗುದಾಣದ ಮೆಟ್ಟಿಲನ್ನೂ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ಕಿತ್ತು ತೆಗೆಯಲಾಗಿದ್ದು, ಮತ್ತೆ ನಿರ್ಮಿಸಿಕೊಟ್ಟಿಲ್ಲ.ಈ ಬಗ್ಗೆ ಸಾರ್ವಜನಿಕರ ಕೂಗಿಗೆ ಸ್ಥಳೀಯಾಡಳಿತವಾಗಲೀ,ಇಲಾಖೆ ಯಾಗಲೀ, ಜನಪ್ರತಿನಿಧಿಗಳಾಗಲೀ ಇದುವರೆಗೂ ಕಿವಿಗೊಟ್ಟಿಲ್ಲ. ಪೇಟೆಯಲ್ಲಿ ಹೆಚ್ಚಿನ ಜನಸಂದಣಿ ಇರುವ ಪಂಜ ಕ್ರಾಸ್ ಬಳಿ ಗ್ರಾ.ಪಂ. ನಿರ್ವಹಣೆಯಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಬೆಳಗ್ಗೆಯಿಂದ ಸಂಜೆಯ ತನಕವೂ ಪ್ರಯಾಣಣಿಕರು ಇರುತ್ತಾರೆ.
ಈಗ ಮಳೆಗಾಲವಾಗಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಸಹಿತ ತಂಗುದಾಣದ ಪ್ರಯೋಜನ ಪಡೆಯುವವರ ಸಂಖ್ಯೆ ದೊಡ್ಡದು. ಹೆದ್ದಾರಿಯನ್ನು ಅಗಲಗೊಳಿಸಿ ಅಭಿವೃದ್ಧಿಪಡಿಸುವ ವೇಳೆ ತಂಗುದಾಣದ ಮೆಟ್ಟಿಲುಗಳನ್ನು ತೆಗೆಯಲಾಗಿತ್ತು. ರಸ್ತೆ ಡಾಮರೀಕರಣ, ಚರಂಡಿ ಮುಚ್ಚುವ ಕಾರ್ಯ ಮುಗಿದು ಹಲವು ತಿಂಗಳುಗಳೇ ಕಳೆದರೂ ತಂಗುದಾಣಕ್ಕೆ ಮೆಟ್ಟಿಲು ನಿರ್ಮಿಸುವ ಕೆಲಸವನ್ನು ಮಾಡಿಲ್ಲ ಎಂಬುದು ಸಾರ್ವಜನಿಕರ ಬೇಸರ.
ಇದರಿಂದಾಗಿ ವಯಸ್ಸಾದವರು, ಅನಾರೋಗ್ಯ ಪೀಡಿತರು, ವಿದ್ಯಾರ್ಥಿಗಳು ತಂಗುದಾಣದೊಳಗೆ ಹೋಗಲು ಹರಸಾಹಸ ಪಡಬೇಕಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿದವರು ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಹೊರಟುಹೋಗಿದ್ದಾರೆ. ಇತ್ತ ಕಟ್ಟಡದಲ್ಲಿನ ಕೊಠಡಿಗಳ ಬಾಡಿಗೆ ಪಡೆಯುವ ಗ್ರಾ.ಪಂ. ಕೂಡ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸ ಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಗ್ರಾ.ಪಂ.ನಿಂದ ಮೆಟ್ಟಿಲು
ನಿರ್ಮಿಸಲು ನಿರ್ಧಾರ
ರಸ್ತೆ ಕಾಮಗಾರಿಯ ವೇಳೆ ಮೆಟ್ಟಿಲು ಕಿತ್ತು ಹಾಕಿದವರು ಮರು ನಿರ್ಮಾಣ ಮಾಡಬೇಕಿತ್ತು. ಆದರೆ ಅವರು ಅದನ್ನು ಮಾಡಿಲ್ಲ. ಇದೀಗ ಗ್ರಾ.ಪಂ.ನಿಂದ ಮೆಟ್ಟಿಲು ನಿರ್ಮಿಸಲು ನಿರ್ಧರಿಸಿದ್ದೇವೆ. ಈ ಬಗ್ಗೆ ಅಂದಾಜುಪಟ್ಟಿ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು.
– ಬಾಬು ಮುಗೇರ ತುಂಬೆತಡ್ಕ,
ಅಧ್ಯಕ್ಷರು, ಕಡಬ ಗ್ರಾ.ಪಂ