Advertisement

Kadaba: 2 ಲಕ್ಷ ರೂ. ಮೌಲ್ಯದ ಚಿನ್ನ, 3 ಲಕ್ಷ ರೂ. ನಗದು ಕಳವು

12:53 AM Jan 06, 2024 | Team Udayavani |

ಕಡಬ: ಕೊಯಿಲ ಗ್ರಾಮದ ಕಲಾಯಿ ನಿವಾಸಿ ಯಾಕುಬ್‌ ಅವರ ಮನೆಯಿಂದ 2 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 3 ಲಕ್ಷ ನಗದು ಕಳವುಗೊಂಡಿರುವ ಘಟನೆ ಜ. 4ರಂದು ರಾತ್ರಿ ನಡೆದಿದೆ.

Advertisement

ಯಾಕುಬ್‌ ಮತ್ತು ಮನೆಯವರು ಜ. 4ರಂದು ರಾತ್ರಿ 7 ಗಂಟೆಗೆ ಮನೆಗೆ ಬೀಗ ಹಾಕಿ ಆತೂರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದು ಈ ಸಂದರ್ಭದಲ್ಲಿ ಕಳ್ಳತನ ನಡೆದಿದೆ.

ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಯಾಕುಬ್‌ ಅವರು ಮಲಗುವ ಕೋಣೆಯಲ್ಲಿನ ಗೋದ್ರೆಜ್‌ನಲ್ಲಿದ್ದ 3 ಲಕ್ಷ ನಗದು ಹಾಗೂ ಇನ್ನೊಂದು ಕೋಣೆಯ ಗೋದ್ರೆಜ್‌ನಲ್ಲಿದ್ದ 30 ಗ್ರಾಮ್‌ ತೂಕದ 6 ಚಿನ್ನದ ಉಂಗುರ ಹಾಗೂ 10 ಗ್ರಾಮ್‌ ತೂಕದ ಕಿವಿಯ ಬೆಂಡೋಲೆ ಮತ್ತು ಜುಮುಕಿ ಕಳವು ಮಾಡಿದ್ದಾರೆ. ಕಳವುಗೈದ ಚಿನ್ನಾಭರಣಗಳ ಮೌಲ್ಯ 2 ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ಯಾಕುಬ್‌ ಅವರ ಹಿರಿಯ ಮಗ ಮಹಮ್ಮದ್‌ ಇಕ್ಬಾಲ್‌ ಅವರು ಬೆಂಗಳೂರಿನಲ್ಲಿ ಬೇಕರಿ ಉದ್ಯಮ ಮಾಡಿಕೊಂಡಿದ್ದು ಸಂಸಾರ ಸಮೇತ ಬೆಂಗಳೂರಿನಲ್ಲೇ ವಾಸವಿದ್ದಾರೆ. ಅವರು ಡಿ. 30ರಂದು ಊರಿಗೆ ಬಂದವರು ಬೇಕರಿಯಲ್ಲಿ ಸಂಪಾದನೆ ಮಾಡಿದ್ದ 3 ಲಕ್ಷ ರೂಪಾಯಿಯನ್ನು ತಂದೆಗೆ ಕೊಟ್ಟಿದ್ದು ಅವರು ಅದನ್ನು ಗೋದ್ರೆಜ್‌ನಲ್ಲಿಟ್ಟಿದ್ದರು. ಇದೀಗ ಆ 3 ಲಕ್ಷ ರೂ. ಕಳ್ಳರ ಪಾಲಾಗಿದೆ. ಗೋದ್ರೆಜ್‌ನಲ್ಲಿದ್ದ ಅಂದಾಜು 4 ಪವನ್‌ನ ಸರವೊಂದನ್ನು ಕಳ್ಳರು ಅಲ್ಲೇ ಬಿಟ್ಟುಹೋಗಿದ್ದಾರೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.

ಮನೆಯ ಬಾಗಿಲು ತೆರೆದು ಕೊಂಡಿರುವ ಬಗ್ಗೆ ಪಕ್ಕದ ಮನೆಯ ನಾಸಿರ್‌ ಎಂಬವರು ರಾತ್ರಿ 8 ಗಂಟೆ ವೇಳೆಗೆ ಯಾಕುಬ್‌ ಅವರಿಗೆ ಮಾಹಿತಿ ನೀಡಿದ್ದು ಅವರು ಮನೆಗೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಾಹಿತಿ ತಿಳಿದುಕೊಂಡ ಕಡಬ ಪೊಲೀಸರು ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

Advertisement

ಪಕ್ಕದ ಮನೆಯಲ್ಲೂ ಯತ್ನ
ಯಾಕುಬ್‌ ಅವರ ಮನೆಯ ಪಕ್ಕದಲ್ಲೇ ಇರುವ ಅವರ ಸಹೋದರ ಅಬ್ದುಲ್‌ ಕುಂಞಿ ಅವರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ಗೋದ್ರೆಜ್‌ನಲ್ಲಿದ್ದ ಚಿನ್ನ, ನಗದಿಗಾಗಿ ಜಾಲಾಡಿರುವುದು ಕಂಡುಬಂದಿದೆ. ಆದರೆ ಇವರ ಮನೆಯಿಂದ ಸೊತ್ತು ಕಳವುಗೊಂಡಿಲ್ಲ ಎಂದು ತಿಳಿದು ಬಂದಿದೆ.
ಶ್ವಾನ‌, ಬೆರಳಚ್ಚು ತಜ್ಞರ ಆಗಮನ ಮಂಗಳೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕಳ್ಳತನ ನಡೆದ ಮನೆಗೆ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.

ಡಿವೈಎಸ್‌ಪಿ, ಉಪ್ಪಿನಂಗಡಿ ಗ್ರಾಮಾಂತರ ಠಾಣಾ ಇನ್ಸ್‌ಸ್ಪೆಕ್ಟರ್‌, ಕಡಬ ಎಸ್‌ಐ ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next