ಸಣ್ಣ ಕಿಡಿಯೊಂದು ಹೊತ್ತಿಕೊಂಡು ಮುಂದೆ ಅದು ಜ್ವಾಲಾಮುಖೀಯಾಗುತ್ತದೆ. ಆ ಜ್ವಾಲಾಮುಖೀಯ ಭೀಕರತೆಗೆ ಒಂದೊಂದು ಊರು ಕಬ್ಜವಾಗುತ್ತಾ, ರಕ್ತಸಿಕ್ತ ಅಧ್ಯಾಯ ಮುಂದುವರೆಯುತ್ತಾ ಸಾಗುತ್ತದೆ. ಅಂದಹಾಗೆ, ಆ ಜ್ವಾಲಾಮುಖೀಯ ಹೆಸರು ಅರ್ಕೇಶ್ವರ. ಮುಗ್ಧ ಅರ್ಕೇಶ್ವರ ಉಗ್ರರೂಪ ತಾಳಿದ ದಿನದಿಂದ ಊರಲ್ಲಿರೋ ಡಾನ್‌ಗಳ ನಿದ್ದೆ ಮಾಯವಾಗಿ ಬಿಡುತ್ತದೆ. ಅಷ್ಟಕ್ಕೂ ಈ ಅರ್ಕೇಶ್ವರನ ಹಿನ್ನೆಲೆಯೇನು, ಆತನ “ಉಗ್ರಪ್ರತಾಪ’ಕ್ಕೆ ಕಾರಣವೇನು ಎಂದು ತಿಳಿಯುವ ಕುತೂಹಲವಿದ್ದರೆ ನೀವು “ಕಬ್ಜ’ ಚಿತ್ರವನ್ನು ನೋಡಬೇಕು.
ನಿರ್ದೇಶಕ ಆರ್.ಚಂದ್ರು ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾವನ್ನು ದೊಡ್ಡ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಡಲು ಏನೆಲ್ಲಾ ಅಂಶಗಳು ಬೇಕು ಅವೆಲ್ಲವನ್ನು ನೀಟಾಗಿ ಜೋಡಿಸಿ ಮಾಡಿರೋದೇ “ಕಬ್ಜ’. ಚಂದ್ರು ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಬಾರಿ ಚಂದ್ರು ದೊಡ್ಡದಾಗಿ ಕನಸು ಕಂಡಿರೋದು ತೆರೆಮೇಲೆ ಎದ್ದು ಕಾಣುತ್ತದೆ. ಒಂದೆರಡು ನಿಮಿಷ ಬಂದು ಹೋಗುವ ಶಾಟ್ಸ್‌ಗಳನ್ನೂ ಅದ್ಧೂರಿಯಾಗಿ ಸಿಂಗರಿಸಿದ್ದಾರೆ. ಆ ಮಟ್ಟಿಗೆ “ಕಬ್ಜ’ ಒಂದು ಮೇಕಿಂಗ್ ಸಿನಿಮಾ. ಮಾಸ್ ಸಿನಿಮಾಗಳನ್ನು ಕಟ್ಟಿಕೊಡುವಾಗ ಅದಕ್ಕೊಂದು ಬ್ಯಾಕ್‌ಗ್ರೌಂಡ್ ಬೇಕಾಗುತ್ತದೆ. ಅದನ್ನು ಚಂದ್ರು ಇಲ್ಲಿ ತುಂಬಾ ಸೊಗಸಾಗಿ ಹಾಗೂ ಮಾಸ್ ಪ್ರಿಯರು ಮೆಚ್ಚುವಂತೆ ಕಟ್ಟಿಕೊಟ್ಟಿದ್ದಾರೆ.
ಇನ್ನು, ಕಥೆಯ ವಿಚಾರಕ್ಕೆ ಬರುವುದಾದರೆ ಇದು ಕೂಡಾ ಸೇಡಿನಿಂದ ಆರಂಭವಾಗುವ ಕಥೆ. ಸಣ್ಣದಾಗಿ ಹತ್ತಿಕೊಂಡು ಕಿಡಿ, ಮುಂದೆ ಇಡೀ ಊರನ್ನೇ ದಹಿಸುತ್ತಾ ಸಾಗುತ್ತದೆ. ಚಂದ್ರು ಹಾಗೂ ತಂಡ ಸಿನಿಮಾ ಆರಂಭದ ದಿನಗಳಲ್ಲೇ ಇದು “ಕೆಜಿಎಫ್’ ಚಿತ್ರದಿಂದ ಪ್ರೇರಣೆಗೊಂಡು ಮಾಡಿದ ಸಿನಿಮಾ ಎಂದಿದೆ. ಅದರಂತೆ “ಕಬ್ಜ’ ನೋಡುವಾಗ “ಕೆಜಿಎಫ್’ ಚಿತ್ರದ ಹೋಲಿಕೆ ಬರುವುದು ಸಹಜ. ಆದರೆ, ಅದಕ್ಕಾಗಿ ಒಂದು ದೊಡ್ಡ ಊರನ್ನೇ ಸೃಷ್ಟಿ ಮಾಡುವುದು, ತಾಂತ್ರಿಕವಾಗಿ ಸಿನಿಮಾವನ್ನು ಶ್ರೀಮಂತಗೊಳಿಸುವುದು ಸುಲಭದ ಮಾತಲ್ಲ. ಆ ವಿಚಾರದಲ್ಲಿ ಚಂದ್ರು ಗೆದ್ದಿದ್ದಾರೆ. ಅದಕ್ಕೆ ಒಂದು ದೊಡ್ಡ ತಾಂತ್ರಿಕ ತಂಡ ಸಾಥ್ ನೀಡಿರುವುದು ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ. ಸುದೀಪ್ ಅವರ ಖಡಕ್ ಎಂಟ್ರಿಯಿಂದ ಆರಂಭವಾಗುವ ಸಿನಿಮಾ ಶಿವರಾಜ್‌ಕುಮಾರ್ ಅವರ ರಗಡ್ ಲುಕ್ ನೊಂದಿಗೆ ಕೊನೆಗೊಳ್ಳುತ್ತದೆ. ಅದು ಹೇಗೆ ಮತ್ತು ಯಾಕೆ ಎಂಬುದೇ “ಕಬ್ಜ’.
ಚಂದ್ರು ಅವರ ಮೂಲಬ್ರಾಂಡ್ ಸೆಂಟಿಮೆಂಟ್. ಅದನ್ನು ಮಾಸ್ ಸಿನಿಮಾದಲ್ಲೂ ಸೇರಿಸಿ, ಅದಕ್ಕೊಂದು ಟ್ರಾಕ್ ಕೊಟ್ಟಿದ್ದಾರೆ. ನಿರ್ದೇಶಕ ಚಂದ್ರು ಅವರ ಮೂಲ ಗುರಿ “ಕಬ್ಜ-2′ ಇದ್ದಂತಿದೆ. ಪಾರ್ಟ್-2ಗೆ ಏನೇನು ವೇದಿಕೆ ಕಲ್ಪಿಸಬೇಕು ಅವೆಲ್ಲವನ್ನು ಈ ಚಿತ್ರದಲ್ಲಿ ಕಲ್ಪಿಸಿದ್ದಾರೆ.
ಇನ್ನು ಇಡೀ ಸಿನಿಮಾವನ್ನು ಆವರಿಸಿಕೊಂಡಿರೋದು ಉಪೇಂದ್ರ. ಖಡಕ್ ಲುಕ್, ಭರ್ಜರಿ ಆ್ಯಕ್ಷನ್‌ನಲ್ಲಿ ಉಪೇಂದ್ರ ಮಿಂಚಿದ್ದಾರೆ. ಉಳಿದಂತೆ ನಟಿ ಶ್ರೀಯಾ ಶರಣ್ ಮಧುಮತಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ನೀನಾಸಂ ಅಶ್ವತ್ಥ್, ಸುನೀಲ್ ಪುರಾಣಿಕ್, ಅನೂಪ್ ರೇವಣ್ಣ, ಬಿ.ಸುರೇಶ್ ಸೇರಿದಂತೆ ಇತರರು ನಟಿಸಿದ್ದಾರೆ.
ಮುಖ್ಯವಾಗಿ ಸುದೀಪ್ ಹಾಗೂ ಶಿವಣ್ಣ ಎಂಟ್ರಿ “ಕಬ್ಜ’ ಕುತೂಹಲ ಹೆಚ್ಚಿಸಿದೆ. ಮುಖ್ಯವಾಗಿ ಈ ಚಿತ್ರವನ್ನು ತಾಂತ್ರಿಕವಾಗಿ ಶ್ರೀಮಂತಗೊಳಿಸುವಲ್ಲಿ ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಛಾಯಾಗ್ರಾಹಕ ಎ.ಜೆ.ಶೆಟ್ಟಿ ಅವರ ಪ್ರಯತ್ನ ದೊಡ್ಡದಿದೆ. ಇಬ್ಬರೂ ಸಿನಿಮಾವನ್ನು ಸುಂದರವನ್ನಾಗಿಸಿದ್ದಾರೆ. ರವಿ ಬಸ್ರೂರು ಹಿನ್ನೆಲೆ ಸಂಗೀತದಲ್ಲಿ “ಕಬ್ಜ’ ಮಾಡಿದ್ದಾರೆ.
ರವಿಪ್ರಕಾಶ್ ರೈ