ತರಕಾರಿ ಮಾರ್ಕೇಟ್, ದಿನಸಿ ಅಂಗಡಿ, ಆಯಿಲ್ ಮಿಲ್, ಕೆಮಿಕಲ್ ಶಾಪ್, ಪಾತ್ರೆ-ಪಗಡಿಗಳ ಮಾರಾಟ, ಪಬ್ ಹೌಸ್…. ಒಂದಾ- ಎರಡಾ… ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಯಾವುದೋ ಒಂದು ಊರಿನಲ್ಲಿರುವ ಅಂಗಡಿಗಳ ಪಟ್ಟಿಯಲ್ಲ. ಬದಲಾಗಿ ಉಪೇಂದ್ರ ನಾಯಕರಾಗಿರುವ ಪ್ಯಾನ್ ಇಂಡಿಯಾ ” ಕಬ್ಜ’ ಚಿತ್ರಕ್ಕಾಗಿ ಹಾಕಲಾದ ಸೆಟ್.
ಹಾಗಂತ ಇದು ಇವತ್ತಿನ ಶೈಲಿಯ ಸೆಟ್ ಗಳಲ್ಲ, ಈ ಎಲ್ಲಾ ಸೆಟ್ ಗಳಿಗೂ 60ರಿಂದ 80ರ ದಶಕದ ಸ್ಪರ್ಶ ನೀಡಲಾಗಿದೆ. ಚಿತ್ರೀಕರಣ ಸೆಟ್‌ಗೆ ಭೇಟಿ ಕೊಟ್ಟರೆ ಯಾವುದೋ ಒಂದು ಹೊಸ ಲೋಕದಲ್ಲಿ ಇದ್ದಂತೆ ಭಾಸವಾಗುವುದರಲ್ಲಿ ಅನುಮಾನವೇ ಇಲ್ಲ. ಆ ಮಟ್ಟಿಗೆ ನಿರ್ದೇಶಕ ಕಂ ನಿರ್ಮಾಪಕ ಆರ್. ಚಂದ್ರು ” ಕಬ್ಜ’ವನ್ನು ಕಟ್ಟಿಕೊಡುತ್ತಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಅದರ ಗುಟಮಟ್ಟ ಹಾಗೂ ಅದರಲ್ಲಿನ ಸಣ್ಣ ಸಣ್ಣ ಅಂಶಗಳ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಸಿನಿಮಾವನ್ನು ಅದೇ ಮಟ್ಟಕ್ಕೆ ಕಟ್ಟಿಕೊಡ ಬೇಕಾಗುತ್ತದೆ. ಈಗ ಆರ್.ಚಂದ್ರು ” ಕಬ್ಜ ‘ವನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಅದ್ಧೂರಿಯಾಗಿ ಕಟ್ಟಿಕೊಡುತ್ತಿದ್ದಾರೆ. 40ಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಿ ಚಂದ್ರು ಸತತವಾಗಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಶೇ80ರಷ್ಟು ಚಿತ್ರೀಕರಣ ಮುಗಿಸಿರುವ “ಕಬ್ಜ’ ಕೇವಲ ಔಟ್ ಡೋರ್ ಚಿತ್ರೀಕರಣವನ್ನಷ್ಟೇ ಬಾಕಿ ಇಟ್ಟು ಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರ ಈ ವರ್ಷವೇ ಬಿಡುಗಡೆಯಾಗಬಹುದು.
ಇದನ್ನೂ ಓದಿ:ಹೇಗಿದೆ ಈ ಸಿನಿಮಾ: ‘ಯುವ ಮನಸ್ಸುಗಳಿಗೊಂದು ‘ಪವರ್ ಫುಲ್’ ಮೆಸೇಜ್
” ಕಬ್ಜ ‘ಸಿನಿಮಾದ ಕ್ಯಾನ್ವಾಸ್, ಸೆಟ್, ಮೇಕಿಂಗ್ ನೋಡಿದಾಗ ಚಂದ್ರು ತಮ್ಮ ಮೇಕಿಂಗ್ ಶೈಲಿ ಬದಲಾಗಿರೋದು ಹಾಗೂ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಿದ್ಧವಾಗಿರೋದು ಕಾಣುತ್ತಿದೆ. ಅದೇ ಕಾರಣದಿಂದ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ಬೇರೆ ಬೇರೆ ಭಾಷೆಯ ದೊಡ್ಡ ದೊಡ್ಡ ಸಿನಿಮಾ ಸಂಸ್ಥೆಗಳು ಕೂಡಾ ” ಕಬ್ಜ ‘ ಚಿತ್ರದ ಮೇಲೆ ಒಂದು ಕಣ್ಣಿಟ್ಟಿದ್ದು, ಬಿಝಿನೆಸ್ ಮಾತುಕತೆಗಳು ಕೂಡಾ ಆರಂಭವಾಗಿದೆ ಎನ್ನಲಾಗಿದೆ.
ಉಪೇಂದ್ರ ಅವರ ಗೆಟಪ್, ಲುಕ್ ಎಲ್ಲವೂ ಇಲ್ಲಿ ಬದಲಾಗಿದೆ. ಈಗಾಗಲೇ “ಕೆಜಿಎಫ್’ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಕನ್ನಡಕ್ಕೆ ಬಹುಭಾಷಾ ಮಾರುಕಟ್ಟೆಯಲ್ಲಿ ಬೇಡಿಕೆ ಬರುವಂತೆ ಮಾಡಿದೆ. ಈಗ ” ಕಬ್ಜ’ಕೂಡಾ ಅದೇ ಹಾದಿಯಲ್ಲಿರೋದಂತು ಸುಳ್ಳಲ್ಲ.