Advertisement

ಕಬಿನಿ ಬಲದಂಡೆ ನಾಲೆಗೆ ನೀರು ಬಿಡಲ್ಲ

09:33 PM Feb 04, 2020 | Lakshmi GovindaRaj |

ನಂಜನಗೂಡು: ಕಬಿನಿ ಬಲದಂಡೆ ನಾಲೆ ಅಚ್ಚುಕಟ್ಟುದಾರರಿಗೆ ನೀರು ಬಿಡುವ ಪ್ರಸ್ತಾವವಿಲ್ಲ. ಹೀಗಾಗಿ ರೈತರ ಎರಡನೇ ಬೆಳೆಗೆ ನೀರು ಸಿಗುವುದಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಹುಲ್ಲಹಳ್ಳಿ ವ್ಯಾಪ್ತಿಯ ಅಧಿಕಾರಿ ರವೀಶ ತಿಳಿಸಿದರು. ತಾಲೂಕು ಆಡಳಿತ ಸ್ಥಳಿಯ ಡಾ.ಅಂಬೇಡ್ಕರ್‌ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ವಿಷಯ ಸ್ಪಷ್ಟಪಡಿಸಿದರು.

Advertisement

ಕತ್ವಾಡಿಪುರದ ಶಿವಣ್ಣ ಮಾತನಾಡಿ, ಕಬಿನಿ ಅಚ್ಚುಕಟ್ಟಿನ ಪ್ರದೇಶದ ಕೃಷಿಕರಾದ ನಾವೆಲ್ಲ, ಈ ಸಾಲಿನ ನೆರೆ ಹಾವಳಿಯಿಂದಾಗಿ ಸಾಕಷ್ಟು ಹಾನಿ ಅನುಭವಿಸಿದ್ದೇವೆ. ಜಲಾಶಯದಲ್ಲೂ ಸಾಕಷ್ಟು ನೀರಿದೆ. ಹೀಗಾಗಿ ಬೇಸಿಗೆ ಬೆಳೆಗೆ ನೀರು ಕೊಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಭತ್ತದ ಕಟಾವು ಮುಗಿದು ತಿಂಗಳಾಗಿದೆ. ಆದರೂ ಏಕೆ ನಾಲೆಗೆ ನೀರು ಹರಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರವೀಶ, ಕಾವೇರಿ ನೀರಾವರಿ ನಿಗಮ ಈಗಾಗಲೇ ಹುಲ್ಲಹಳ್ಳಿ, ರಾಂಪುರ ನಾಲೆಗಳಿಗೆ ನೀರು ಬೀಡಲು ಅನುಮತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಕಬಿನಿ ಬಲದಂಡೆ ನಾಲೆಗೆ ಮಾತ್ರ ನೀರಿಲ್ಲ ಎಂದರು.

ಗೊಂದಲದ ಗೂಡಾದ ಸಭೆ: ತಾಲೂಕಿನಲ್ಲಿ ರೈತರಿಗೆ ಸಂಬಂಧಿಸಿದ ನೂರಾರು ಸಮಸ್ಯೆಗಳು ಪ್ರಸ್ತಾಪವಾಗಬೇಕಿದ್ದ ಸಭೆ ರೈತ ಸಂಘಗಳ ಮೇಲಾಟದ ಕಾರಣದಿಂದಾಗಿ ಗೊಂದಲದ ಗೂಡಾಯಿತು. ಮೊದಲೇ ಮಾತು ಸ್ಪಷ್ಟವಾಗಿ ಕೇಳದ ಭವನದಲ್ಲಿ, ಸಭೆಯ ಗೊಂದಲ ತಹಬಂದಿಗೆ ಬಾರದಿರುವದನ್ನು ಕಂಡ ಸಭೆಯ ಅದ್ಯಕ್ಷತೆ ವಹಿಸಿದ್ದ ತಗಶೀಲ್ದಾರ ಮಹೇಶ ಕುಮಾರ್‌, ನೀವು ಗದ್ದಲ ಎಬ್ಬಿಸುವುದಾದರೆ ನಾವು ಸಭೆಯಿಂದ ಹೊರಹೊಗಬೇಕಾಗುತ್ತದೆ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿ ತಹಬಂದಿಗೆ ತಂದರು.

ನಂತರ ಮಾತನಾಡಿದ ರೈತರು, ತಾಲೂಕಿನ ವಿವಿಧ ಇಲಾಖೆಗಳ ಭ್ರಷ್ಟಾಚಾರಗಳ ಕುರಿತು ಬೆಳಕು ಚಲ್ಲಿದರು. ರೈತರ ಆಕ್ರೋಶಕ್ಕೆ ಕಾರಣವಾಗಿದ್ದು ತಾಲೂಕು ಕೃಷಿ ಇಲಾಖೆ. ಸರ್ಕಾರ ರೈತರ ಅಭಿವೃದ್ಧಿಗೆ ನೀಡುತ್ತಿರುವ ಯಂತ್ರೋಪಕರಣಗಳು ಕೃಷಿ ಸಾಮಗ್ರಿಗಳು ಕಳಪೆಯಾಗಿವೆ. ಸಬ್ಸಿಡಿ ಬೇರೆ ಕೇಡು ಎಂದು ರೈತ ನಾಯಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ದೀನದಯಾಳ ಯೋಜನೆಯಡಿಯಲ್ಲಿ ರೈತರಿಗೆ ನೀಡಲಾಗುವ ವಿದ್ಯುತ್‌ಗೆ ಲಂಚ ಎಷ್ಟು ಬಹಿರಂಗ ಪಡಿಸಿ ಎಂಬ ಪ್ರಶ್ನೆ ಎದುರಾದಾಗ ಕೆಪಿಟಿಸಿಎಲ್‌ ಅಧಿಕಾರಿ ದೇವಾರಾಜ ಕಕ್ಕಾ ಬಿಕ್ಕಿಯಾದರು. ಒಂದು ಟೀಸಿಗಾಗಿ ವಿದ್ಯುತ್‌ ಗುತ್ತಿಗೆದಾರರು 1.5 ಲಕ್ಷ ಲಂಚ ಕೇಳಿದರೆ, ಇದು ರೈತರ ಶೋಷಣೆಯೋ ಅಭಿವೃದ್ಧಿಯೋ ಎಂದಾಗ ಉತ್ತರಿಸಲು ತಡವರಿಸಿದ ಅಧಿಕಾರಿ, ಟೀಸಿ ಸಂರ್ಪಕ ಪೂರ್ಣ ಉಚಿತ. ಆದರೆ ಕಾಮಗಾರಿ ಪೂರ್ಣಗೊಂಡಿದೇ ಎಂಬ ಲಿಖೀತ ಪತ್ರ ಗುತ್ತಿಗೆದಾರರಿಂದ ಬೇಕು ಎಂದು ಹೇಳಿದರು. ಅದಕ್ಕೆ ರೈತರು, ಲಂಚ! ಎಂದು ಅಣಕವಾಡಿದರು.

ತಾಲೂಕಿನಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟವಾಗುತ್ತಿದ್ದು, ತಿಳಿಸಿದರೂ ನೆಪ ಮಾತ್ರಕ್ಕೆ ದಾಳಿ ನಡೆಸಿ, ಮತ್ತೆ ಪುಸಲಾಯಿಸಿ ಕಳುಹಿಸುತ್ತೀರಿ. ಇದರಿಂದ ಕುಟುಂಬ ಹಾಗೂ ಗ್ರಾಮದ ಸೌಹರ್ದಕ್ಕೆ ಭಂಗ ಬರುತ್ತಿದೆ ಎಂದು ಅಬಕಾರಿ ಅಧಿಕಾರಿ ಪದ್ಮಾವತಿಯವರ ಬೇವರಿಳಿಸಿದರು. ಸಭೆಗೆ ಹಾಜರಾಗಲು ತಾಲೂಕಿನ 38 ಇಲಾಖೆಗಳಿಗೆ ತಿಳಿಸಲಾಗಿತ್ತು. ಆದರೆ ಕಂದಾಯ, ಶಿಕ್ಷಣ, ಅಬಕಾರಿ, ಕೆಪಿಟಿಸಿಎಲ್‌ ಸೇರಿದಂತೆ ಕೇವಲ 12 ಇಲಾಖೆಗಳ ಪ್ರತಿನಿಧಿಗಳು ಮಾತ್ರ ಹಾಜರಿದ್ದು, ಉಳಿದ ಇಲಾಖೆಗಳು ರೈತರಿಗೂ ತಮಗೂ ಸಂಭಂದವಿಲ್ಲಾ ಎಂದು ದೂರ ಉಳಿದವು. ಅಧಿಕಾರಿಗಳ ಗೈರಿಗೆ ರೈತರ ಅಸಮಾಧಾನ ವ್ಯಕ್ತವಾಯಿತು.

ತಾಲೂಕಿನ ರೈತರ ನೂರಾರು ಸಮಸ್ಯೆಗಳು ಸಭೆಯಲ್ಲಿ ಮಾರ್ಧನಿಸಿದಾಗ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಮಹೇಶ ಕುಮಾರ ಇಂದಿನ ಸಮಸ್ಯೆಗಳಿಗೆ ಆಯಾ ಇಲಾಖೆಯಿಂದ‌ ಪರಿಹಾರ ಅಥವಾ ಕಾರಣ ತಿಳಿಸಲಾಗುತ್ತದೆ ಎಂದರು. ರೈತ ಸಂಘಟನೆಗಳ ಮುಖ್ಯಸ್ಥ ಶಿರಮಳ್ಳಿ ಸಿದ್ದಪ್ಪ, ಬೊಕ್ಕಳ್ಳಿ ನಂಜುಂಡಸ್ವಾಮಿ, ಇಮ್ಮಾವು ರಘು, ಹೆಜ್ಜಿಗೆ ಪ್ರಕಾಶ, ದೇವನೂರು ಶಿವಕುಮಾರ, ಸಿಂಧುವಳ್ಳಿ ಬಸವಣ್ಣ, ಗೊದ್ದನಪುರದ ಸುರೇಶ ಸೇರಿದಂತೆ 150ಕ್ಕೂ ಹೆಚ್ಚು ರೈತ ನಾಯಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next