ಹೇಳುವ ಕಥೆಯನ್ನು ನೇರವಾಗಿ ಹೇಳುವ ಬದಲು ಒಂದಷ್ಟು ವಿಭಿನ್ನ ಯೋಚನೆ, ಮಾರ್ಗಗಳ ಮೂಲಕ ಹೇಳಬೇಕು ಎನ್ನುವುದು ಇವತ್ತಿನ ನವತಂಡಗಳ ಕನಸು. ಅದೇ ಕಾರಣದಿಂದ ಆಗಾಗ ಸಿನಿಮಾಗಳಲ್ಲಿ ಹೊಸ ನಿರೂಪಣಾ ಶೈಲಿ ಕಾಣಸಿಗುತ್ತದೆ. ಈ ವಾರ ತೆರೆಕಂಡಿರುವ “ಕಬಂಧ’ ಕೂಡಾ ಒಂದು ಹೊಸ ಪ್ರಯೋಗದ ಸಿನಿಮಾ.
ರೆಗ್ಯುಲರ್ ಜಾನರ್ ಬಿಟ್ಟು ಬೇರೇನನ್ನೋ ಹೇಳಬೇಕು ಎಂಬ ಸಿನಿಮಾದ ಉದ್ದೇಶ ಸ್ಪಷ್ಟವಾಗಿ ಕಾಣುತ್ತದೆ. ಅದಕ್ಕೆ ತಕ್ಕಂತೆ ಇಲ್ಲಿ ಕಥೆ ಕೂಡಾ ಸಾಗುತ್ತದೆ. ನೀವು ಊಹೆ ಮಾಡಿದ್ದು ಇಲ್ಲಿ ನಡೆಯಲ್ಲ.
ಇನ್ನು ಕಥೆ ಬಗ್ಗೆ ಹೇಳುವುದಾದರೆ ಇಲ್ಲಿ ಪರಿಸರದ ಕಾಳಜಿ ಇದೆ. ಇವತ್ತಿನ ವೇಗದ ಜೀವನ ಶೈಲಿಯಲ್ಲಿ ಪ್ಲಾಸ್ಟಿಕ್ ಮತ್ತು ಟಾಕ್ಸಿಕ್ ಅಂಶಗಳು ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ಅಂಶದೊಂದಿಗೆ ಚಿತ್ರ ಸಾಗುತ್ತದೆ. ಇದನ್ನು ತೋರಿಸಲು ನಿರ್ದೇಶಕರು ಹಾರರ್ ಟಚ್ ಕೂಡಾ ಕೊಟ್ಟಿದ್ದಾರೆ. ಅದೇ ಕಾರಣದಿಂದ ಸಿನಿಮಾದ “ಕಲರ್’ ಕೂಡಾ ಬದಲಾಗಿದೆ. ಸಿನಿಮಾದ ಮೊದಲರ್ಧ ಹಲವು ಕುತೂಹಲ, ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕಥೆಯ ಕುರಿತಾದ ಪೂರ್ಣ ಚಿತ್ರಣ ಇಲ್ಲಿ ಸಿಗುವುದಿಲ್ಲ.
ಆದರೆ, ದ್ವಿತೀಯಾರ್ಧ ಕಥೆಯ ಆಶಯದ ಜೊತೆಗೆ ಪ್ರಶ್ನೆಗಳಿಗೆ, ಕುತೂಹಲಗಳಿಗೆ ತೆರೆ ಬೀಳುತ್ತದೆ. ನಿರ್ದೇಶಕ ಸತ್ಯನಾಥ್ ಸಾವಧಾನವಾಗಿ ಕಥೆ ಹೇಳಲು ಬಯಸಿರುವುದರಿಂದ ಪ್ರೇಕ್ಷಕರು ಕೂಡಾ ಅದೇ ಮನಸ್ಥಿತಿಯಲ್ಲಿ ಸಿನಿಮಾ ನೋಡಬೇಕಿದೆ. ಒಂದು ಪ್ರಯತ್ನವಾಗಿ “ಕಬಂಧ’ ಮೆಚ್ಚಬಹುದಾದ ಸಿನಿಮಾ.
ನಾಯಕ ಪ್ರಸಾದ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರಿಲ್ಲಿ ನಚಿಕೇತ ಎಂಬ ಜಮೀನ್ದಾರಿ ಕುಟುಂಬದ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಿಶೋರ್, ಅವಿನಾಶ್, ಛಾಯಾಶ್ರಿ, ಪ್ರಿಯಾಂಕಾ ನಟಿಸಿದ್ದಾರೆ.
ಆರ್.ಪಿ