Advertisement

ಸಾಲ ಖಾತರಿ ಹೆಚ್ಚಳಕ್ಕೆ ಕಾಸಿಯಾ ಆಗ್ರಹ

01:06 AM Aug 28, 2019 | Lakshmi GovindaRaj |

ಬೆಂಗಳೂರು: ಸಣ್ಣ ಉದ್ದಿಮೆಗಳ ಕಾರ್ಯನಿರ್ವಹಣೆಗಾಗಿ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯಕ್ಕೆ 5 ಕೋಟಿ.ರೂ. ವರೆಗೆ ಸಾಲ ಖಾತರಿ ಹೆಚ್ಚಿಸಬೇಕು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌.ರಾಜು ಆಗ್ರಹಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲದ ಮೇಲಿನ ಬಡ್ಡಿದರವು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ದೊಡ್ಡ ಸಮಸ್ಯೆಯಾಗಿದ್ದು, ಎಸ್‌ಎಂಇಗಳ ಕಾರ್ಯ ನಿರ್ವಹಣೆ ಮೇಲೆ ಗಂಭೀರ ಪ್ರಭಾವ ಬೀರಲಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ.4ರ ಬಡ್ಡಿದರಲ್ಲಿ ಸಾಲ ನೀಡುವಂತೆ ಮನವಿ ಮಾಡಿದರು.

ಪ್ರಧಾನಿ ಮೋದಿ ಅವರು 59 ನಿಮಿಷಗಳಲ್ಲಿ ಆನ್‌ಲೈನ್‌ ಮೂಲಕ ಸಾಲ ಪಡೆಯಬಹುದು ಎಂದು ಹೇಳಿದ್ದಾರೆ. ಆದರೆ ಈ ಯೋಜನೆಯಡಿ ಸಣ್ಣ ಉದ್ಯಮಿಗಳು ಸಾಲ ಪಡೆಯುವುದು ಸುಲಭವಲ್ಲ. ಆನ್‌ಲೈನ್‌ನಲ್ಲಿ ತಾತ್ವಿಕವಾಗಿ ಸ್ವೀಕೃತಿ ನೀಡಿದ ನಂತರ ಬ್ಯಾಂಕ್‌ಗಳು ಇದಕ್ಕೆ ಅಡಚಣೆ ಮಾಡುತ್ತಿವೆ. ಈ ವ್ಯವಸ್ಥೆ ಬಗ್ಗೆ ಕೇಂದ್ರ ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು.

ಈಗಾಗಲೇ ಅಸ್ತಿತ್ವದಲ್ಲಿರುವ ಬಹುತೇಕ ಕೈಗಾರಿಕಾ ಪ್ರದೇಶಗಳು ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ಕೈಗಾರಿಕಾ ಪ್ರದೇಶಗಳಿಗೆ ಟೌನ್‌ಶಿಪ್‌ ಪ್ರಾಧಿಕಾರ ಸ್ಥಾನ ಮಾನ ಮಂಜೂರು ಮಾಡಿದರೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಮತ್ತಷ್ಟು ಅನುಕೂಲವಾಗಲಿದೆ. ಟೌನ್‌ಶಿಪ್‌ ಪ್ರಾಧಿಕಾರವನ್ನಾಗಿ ಕೈಗಾರಿಕಾ ಪ್ರದೇಶಗಳನ್ನು ಪರಿವರ್ತಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಮಾರಾಟಗಾರರ ಅಭಿವೃದ್ಧಿ ಸಮಾವೇಶ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕಾಸಿಯಾ ಹಲವು ಯೋಜನೆಗಳನ್ನು ರೂಪಿಸಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾರಾಟಗಾರರ ಅಭಿವೃದ್ಧಿ ಸಮಾವೇಶಗಳನ್ನು ಆಯೋಜಿಸಲಿದೆ ಎಂದು ಕಾಸಿಯಾ ಅಧ್ಯಕ್ಷ ರಾಜು ನುಡಿದರು.

Advertisement

ಕಾಸಿಯಾದ ಖಜಾಂಚಿ ಎಸ್‌.ಎಂ.ಹುಸೈನ್‌, ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ ಹಿನ್ನೆಲೆಯಲ್ಲಿ ದೇಶಿ ಉದ್ಯಮಕ್ಕೆ ಹೊಡೆತಬಿದ್ದಿದೆ. ಬಿಪಿಎಲ್‌, ವಿಡಿಯೋಕಾನ್‌ ಸೇರಿದಂತೆ ಹಲವು ದೇಶಿ ಕಂಪನಿಗಳು ಸಂಕಷ್ಟದಲ್ಲಿವೆ. ಆಟೋಮೊಬೈಲ್‌ ಕ್ಷೇತ್ರವು ಕೂಡ ಈಗ ನಷ್ಟದತ್ತ ಮುಖ ಮಾಡಿದ್ದು ಕೇಂದ್ರ ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಕಾಸಿಯಾ ಪ್ರಧಾನ ಕಾರ್ಯದರ್ಶಿ ಎಂ.ಜೆ.ರಾಜಗೋಪಾಲ್‌, ಜಂಟಿಕಾರ್ಯದರ್ಶಿ ಟಿ.ಎಂ.ವಿಶ್ವನಾಥ ರೆಡ್ಡಿ ಇದ್ದರು.

ರಾಜ್ಯದಲ್ಲಿ ತಲೆದೂರಿದ ನೆರೆ ಪ್ರವಾಹದಿಂದಾಗಿ ಸಣ್ಣ ಕೈಗಾರಿಕಾ ಉದ್ಯಮಕ್ಕೆ ಅಪಾರ ಹೊಡೆತ ಬಿದ್ದಿದೆ. ಈ ನಷ್ಟದ ಬಗ್ಗೆ ಅಂದಾಜು ನಡೆದಿದ್ದು, ಮುಂದಿನ ದಿನಗಳಲ್ಲಿ ನಿಖರವಾದ ಮಾಹಿತಿ ನೀಡಲಾಗುವುದು.
-ಆರ್‌.ರಾಜು, ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ

ಸರಕು-ಸೇವಾ ತೆರಿಗೆ ವ್ಯವಸ್ಥೆ ಜಾರಿಯಿಂದಾಗಿ ಗಾರ್ಮೆಂಟ್‌ ಉದ್ಯಮದ ಮೇಲೆ ಗಂಭೀರ ಪ್ರಭಾವ ಬೀರಿದೆ. ಆ ಹಿನ್ನೆಲೆಯಲ್ಲಿ ರಾಜ್ಯದ ಗಾರ್ಮೆಂಟ್‌ ಉದ್ಯಮಿಗಳು ಬಾಂಗ್ಲಾ ದೇಶದಲ್ಲಿ ಬಂಡವಾಳ ಹೂಡುತ್ತಿದ್ದಾರೆ.ಇಲ್ಲಿನ ಉದ್ಯೋಗ ಬಾಂಗ್ಲಾದೇಶಿಯರ ಪಾಲಾಗುತ್ತಿವೆ.
-ಎಸ್‌.ಎಂ.ಹುಸೈನ್‌,ಕಾಸಿಯಾದ ಖಜಾಂಚಿ

Advertisement

Udayavani is now on Telegram. Click here to join our channel and stay updated with the latest news.

Next